ರಾಯ್ಪುರ: ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ಹೊಸ ಚೆಂಡಿನೊಂದಿಗೆ ತುಂಬಾ ಅಪಾಯಕಾರಿಯಾಗಿ ಬೌಲ್ ಮಾಡುತ್ತಾರೆ. ಅವರು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರ ವಿರುದ್ಧ ರನ್ ಗಳಿಸುವುದು ಆರಂಭದಲ್ಲಿ ಕಷ್ಟಕರವಾಗಿರುತ್ತದೆ. ಅದರಂತೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಮೊದಲ ಓವರ್‌ನಲ್ಲಿ ವಿಕೆಟ್ ಪಡೆದಿದ್ದರು. ಮೊದಲ ಟಿ20ಐ ಪಂದ್ಯದಲ್ಲಿಯೂ ಅವರು ಯಶಸ್ಸು ಕಂಡಿದ್ದರು. ಆದರೆ, ಎರಡನೇ ಟಿ20ಐ ಪಂದ್ಯದಲ್ಲಿ(IND vs NZ) ಅದೇ ಲಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಡೆವೋನ್ ಕಾನ್ವೆಗೆ (Devon Conway) ಎದುರು ಅತ್ಯಂತ ದುಬಾರಿಯಾದರು.
ಶುಕ್ರವಾರ ಇಲ್ಲಿನ ಸಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕಿವೀಸ್ ಪರ ಡೆವೋನ್ ಕಾನ್ವೆ ಹಾಗೂ ಟಿಮ್ ಸೀಫರ್ಟ್ ಕ್ರೀಸ್‌ಗೆ ಬಂದಿದ್ದರು. ಹೊಸ ಚೆಂಡಿನಲ್ಲಿ ಅತ್ಯಂತ ಯಶಸ್ವಿ ವೇಗಿಯಾಗಿರುವ ಆಗಿರುವ ಅರ್ಷದೀಪ್ ಪಂದ್ಯದ ಮೊಟ್ಟ ಮೊದಲ ಓವರ್ ಬೌಲ್ ಮಾಡಿದರು. ಮೊದಲನೇ ಎಸೆತದಲ್ಲಿ ಡೆವೋನ್ ಡ್ರೈವ್ ಮಾಡಲು ಪ್ರಯತ್ನಿಸಿ ವಿಫಲರಾದರು. ಈ ವೇಳೆ ಚೆಂಡು ಔಟ್ ಸ್ವಿಂಗ್ ಆಯಿತು. ನಂತರ ಎರಡು ಹಾಗೂ ಮೂರನೇ ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸಿದರು. ನಾಲ್ಕನೇ ಎಸೆತದಲ್ಲಿ ರನ್ ಬರಲಿಲ್ಲವಾದರೂ ಕೊನೆಯ ಐದು ಮತ್ತು ಆರನೇ ಎಸೆತಗಳಲ್ಲಿ ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಅಂತಿಮವಾಗಿ ಅರ್ಷದೀಪ್ ಸಿಂಗ್ ಮೊದಲನೇ ಓವರ್‌ನಲ್ಲಿ 18 ರನ್‌ಗಳನ್ನು ನೀಡಿದರು. ಈ 18 ರನ್‌ಗಳನ್ನು ಡೆವೋನ್ ಕಾನ್ವೆ ಒಬ್ಬರೇ ಹೊಡೆದಿದ್ದು ವಿಶೇಷ.
T20 World Cup 2026: ನ್ಯೂಜಿಲೆಂಡ್ ತಂಡದ ಗಾಯಾಳು ಆಡಂ ಮಿಲ್ನೆ ಸ್ಥಾನಕ್ಕೆ ಕೈಲ್ ಜೇಮಿಸನ್ ಸೇರ್ಪಡೆ!
ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಷದೀಪ್ ಸಿಂಗ್
ಪಂದ್ಯದ ಮೊದಲ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 18 ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಬೌಲ್ ಮಾಡಿದ ಅತ್ಯಂತ ದುಬಾರಿ ಮೊದಲ ಓವರ್ ಆಗಿದೆ. ಈ ಹಿಂದೆ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ತಮ್ಮ ಮೊದಲ ಓವರ್‌ನಲ್ಲಿ 18 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. 2022 ರಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಪಾಲ್ ಸ್ಟರ್ಲಿಂಗ್, ಭುವಿ ವಿರುದ್ಧದ ಇನಿಂಗ್ಸ್ ಮೊದಲ ಓವರ್‌ನಲ್ಲಿ 18 ರನ್‌ಗಳನ್ನು ಬಾರಿಸಿದ್ದರು.
208 ರನ್‌ಗಳನ್ನು ಕಲೆ ಹಾಕಿದ ಕಿವೀಸ್
ಇನ್ನು ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರು. ಆದರೆ, ರಚಿನ್ ರವೀಂದ್ರ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಕಿವೀಸ್ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಭಾರತ ತಂಡಕ್ಕೆ 209 ರನ್‌ಗಳ ಗುರಿಯನ್ನು ನೀಡಿತು.
ನ್ಯೂಜಿಲೆಂಡ್ ತಂಡದ ಪರ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ರಚಿನ್ ರವೀಂದ್ರ 26 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 44 ರನ್‌ಗಳನ್ನು ಬಾರಿಸಿದರು. ಆದರೆ, ಕೇವಲ 4 ರನ್ ಅಂತರದಲ್ಲಿ ಅರ್ಧಶತಕವನ್ನು ಕಳೆದುಕೊಂಡರು. ಇನ್ನು ಡೆತ್ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ನಾಯಕ ಮಿಚೆಲ್ ಸ್ಯಾಂಟ್ನರ್, 27 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 47 ರನ್‌ಗಳನ್ನು ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ನೆರವು ನೀಡಿದ್ದರು.