ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

NZ vs IND 1st ODI: ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್‌ ವೇಳೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಸಿದ ಕೊಹ್ಲಿ, ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಒಟ್ಟು ರನ್‌ಗಳ ಸಂಖ್ಯೆಯನ್ನು 8,741ಕ್ಕೆ ಏರಿಸಿಕೊಂಡಿದ್ದಾರೆ. ಆ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಕ್ರಿಕೆಟ್‌ ದೇವರ ಮತ್ತೊಂದು ದೊಡ್ಡ ದಾಖಲೆ ಮುರಿದ ವಿರಾಟ್‌ ಕೊಹ್ಲಿ.

ಆಕ್ಲೆಂಡ್‌: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (IND sv NZ) ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. 74 ರನ್‌ಗಳ ಅಮೋಘ ಇನಿಂಗ್ಸ್ ಆಡಿದ ಕೊಹ್ಲಿ(Virat Kohli), ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್‌ ವೇಳೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಭಾರತ ತಂಡ ನ್ಯೂಜಿಲೆಂಡ್ ನೀಡಿದ್ದ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಕೊಹ್ಲಿ 74 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಇನಿಂಗ್ಸ್‌ನೊಂದಿಗೆ ಏಕದಿನ ಚೇಸಿಂಗ್‌ನಲ್ಲಿ ಅವರ ಒಟ್ಟು ರನ್‌ಗಳ ಸಂಖ್ಯೆ 8,741ಕ್ಕೆ ಏರಿಕೆಯಾಗಿದೆ. ಸಚಿನ್ ತೆಂಡೂಲ್ಕರ್ 8,720 ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

IND vs NZ 1st ODI: ವಿರಾಟ್‌ ಕೊಹ್ಲಿ ಆರ್ಭಟದಿಂದ ಭಾರತಕ್ಕೆ ಸುಲಭ ತುತ್ತಾದ ನ್ಯೂಜಿಲೆಂಡ್‌!

ಸಚಿನ್‌ಗಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ದಾಖಲೆ

ವಿರಾಟ್ ಕೊಹ್ಲಿ ಅವರ ಈ ಸಾಧನೆಯ ವಿಶೇಷತೆಯೆಂದರೆ, ಸಚಿನ್ ತೆಂಡೂಲ್ಕರ್ ಅವರಿಗಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿ 180 ಪಂದ್ಯಗಳ 169 ಇನಿಂಗ್ಸ್‌ಗಳಲ್ಲಿ 8,741 ರನ್ ಗಳಿಸಿದ್ದರೆ, ಸಚಿನ್ 242 ಪಂದ್ಯಗಳ 232 ಇನಿಂಗ್ಸ್‌ಗಳಲ್ಲಿ 8,720 ರನ್ ಗಳಿಸಿದ್ದರು. ಚೇಸಿಂಗ್‌ನಲ್ಲಿ ಕೊಹ್ಲಿ 66.21ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಸಚಿನ್ ಅವರ ಸರಾಸರಿ 42.33 ಆಗಿದೆ. ಇದಲ್ಲದೆ, ಎರಡನೇ ಇನಿಂಗ್ಸ್‌ನಲ್ಲಿ ಕೊಹ್ಲಿ 30 ಶತಕ ಹಾಗೂ 46 ಅರ್ಧಶತಕಗಳನ್ನು ಗಳಿಸಿದ್ದಾರೆ. ಸಚಿನ್ 17 ಶತಕ ಹಾಗೂ 52 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಕೊಹ್ಲಿ ಅವರ ಸ್ಟ್ರೈಕ್ ರೇಟ್ 95.03 ಆಗಿದ್ದರೆ, ಸಚಿನ್ ಅವರ ಸ್ಟ್ರೈಕ್ ರೇಟ್ 88.44 ಆಗಿದೆ.



ಏಕದಿನ ಕ್ರಿಕೆಟ್‌ ಚೇಸಿಂಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ವಿರಾಟ್ ಕೊಹ್ಲಿ (ಭಾರತ): 8,741 (169 ಇನಿಂಗ್ಸ್‌)

ಸಚಿನ್ ತೆಂಡೂಲ್ಕರ್ (ಭಾರತ): 8,720 (232 ಇನಿಂಗ್ಸ್‌)

ರೋಹಿತ್ ಶರ್ಮಾ (ಭಾರತ): 6,801 (163 ಇನಿಂಗ್ಸ್‌)

ಸನತ್ ಜಯಸೂರ್ಯ (ಶ್ರೀಲಂಕಾ): 5,742 (210 ಇನಿಂಗ್ಸ್‌)

ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ): 5,575 (158 ಇನಿಂಗ್ಸ್‌)

ಭಾರತಕ್ಕೆ ಗೆಲುವು ತಂದುಕೊಟ್ಟ ಕೊಹ್ಲಿ-ಗಿಲ್ ಜತೆಯಾಟ

ಮಳೆಯ ಅಡಚಣೆಯಿಂದಾಗಿ ಪಂದ್ಯಕ್ಕೆ ಡಿಎಲ್‌ಎಸ್‌ ನಿಯಮದಡಿ ಭಾರತಕ್ಕೆ 32 ಓವರ್‌ಗಳಲ್ಲಿ 143 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಆರಂಭಿಕ ಆಘಾತದ ಬಳಿಕ ನಾಯಕ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 113 ರನ್‌ಗಳ ಮಹತ್ವದ ಜತೆಯಾಟವಾಡಿದರು. ಗಿಲ್ 37 ರನ್ ಗಳಿಸಿದರೆ, ಕೊಹ್ಲಿ 74 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

IND vs NZ: ಒಂದೇ ಕೈನಲ್ಲಿ ಸ್ಟನಿಂಗ್‌ ಕ್ಯಾಚ್‌ ಪಡೆದು ವಿಶೇಷವಾಗಿ ಸಂಭ್ರಮಿಸಿದ ವಿರಾಟ್‌ ಕೊಹ್ಲಿ! ವಿಡಿಯೊ

ಈ ಇನಿಂಗ್ಸ್ ಮೂಲಕ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದ 80ನೇ ಅರ್ಧಶತಕವನ್ನು ದಾಖಲಿಸಿದರು. ವಿಶೇಷವೆಂದರೆ, ತಮ್ಮ 38ನೇ ಜನ್ಮದಿನಕ್ಕೆ ಒಂದು ದಿನ ಬಾಕಿ ಇರುವಾಗ ಈ ಸಾಧನೆ ಮಾಡಿದರು. ಅಂತಿಮವಾಗಿ ಭಾರತ 22.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 143 ರನ್ ಗಳಿಸುವ ಮೂಲಕ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಆರಂಭಿಕ ಮುನ್ನಡೆ ಸಾಧಿಸಿತು.

ಭಾರತದ ಬೌಲರ್‌ಗಳ ಸಂಘಟಿತ ಪ್ರದರ್ಶನ

ಇದಕ್ಕೂ ಮೊದಲು ಮೋಡ ಕವಿದ ವಾತಾವರಣದ ಲಾಭ ಪಡೆದ ಭಾರತದ ವೇಗದ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಪರಿಣಾಮ ಆತಿಥೇಯ ತಂಡ 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 70 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಗುರ್ನೂರ್‌ ಬ್ರಾರ್ 44 ರನ್ ನೀಡಿ ಮೂರು ವಿಕೆಟ್ ಹಾಗೂ ಅಂಶುಲ್ ಕಾಂಬೋಜ್ 22 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.

ನ್ಯೂಜಿಲೆಂಡ್ ಪರ ಟಿಮ್ ಸೈಫರ್ಟ್ 38 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಗ್ಲೆನ್ ಫಿಲಿಪ್ಸ್ 30 ರನ್ ಗಳಿಸಿದರು. ಕೊನೆಯಲ್ಲಿ ಬ್ಲೇರ್ ಟಿಕ್ನರ್ ಕೇವಲ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 34 ರನ್ ಸಿಡಿಸಿದರು. ಆದರೂ ತಂಡದ ಮೊತ್ತ 200ರ ಗಡಿ ದಾಟಲಿಲ್ಲ.