IND vs PAK: 'ಎಲ್' ಕೈ ಸನ್ನೆಯಿಂದ ಸಂಭ್ರಮಿಸಲು ಕಾರಣ ಬಹಿರಂಗಪಡಿಸಿದ ಅಭಿಷೇಕ್ ಶರ್ಮಾ!
ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 6 ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ʻಎಲ್ʼ ಕೈ ಸನ್ನೆಯ ಮೂಲಕ ಗೆಲುವನ್ನು ಸಂಭ್ರಮಿಸಿದ್ದರು. ಈ ಬಗ್ಗೆ ಎಡಗೈ ಬ್ಯಾಟ್ಸ್‌ಮನ್ ಪ್ರತಿಕ್ರಿಯಿಸಿದ್ದಾರೆ.

ಎಲ್ ಕೈ ಸನ್ನೆಯ ಮೂಲಕ ಸಂಭ್ರಮಿಸಲು ಕಾರಣ ತಿಳಿಸಿದ ಅಭಿಷೇಕ್ ಶರ್ಮಾ. -

ಬರಹ: ಕೆ.ಎನ್.ರಂಗು, ಚಿತ್ರದುರ್ಗ
ದುಬೈ: ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ (IND vs PAK) ಭಾರತ ತಂಡ 6 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ 171 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ, 18.5 ಓವರ್‌ಗಳಿಗೆ ಗೆಲುವಿನ ದಡ ಸೇರಿತು. ಇನ್ನು ಈ ಪಂದ್ಯ ಕೂಡ ಕಳೆದ ಪಂದ್ಯದಂತೆಯೇ ಅನೇಕ ಕಾರಣಗಳಿಗೆ ಚರ್ಚೆಗೆ ಗ್ರಾಸವಾಯಿತು. ಪಂದ್ಯ ಮುಗಿದ ಬಳಿಕ ಗೆಲುವಿನ ನಗೆ ಬೀರಿದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma), ʻಎಲ್ʼ ಕೈ ಸನ್ನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಭಿಷೇಕ್ ಅವರ ಈ ನಡೆಯ ಅರ್ಥವೇನು ಎನ್ನುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿಷೇಕ್ ಶರ್ಮಾ, ತಮ್ಮ ʻಎಲ್ʼ ಸಿಂಬಲ್ ಸಂಭ್ರಮಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ʻಎಲ್ʼ ಕೈ ಸನ್ನೆಯ ಸಂಭ್ರಮದ ಬಗ್ಗೆ ಅಭಿಷೇಕ್ ಶರ್ಮಾರವರನ್ನು ಪ್ರಶ್ನೆ ಮಾಡಿದರು. "ನಿಮ್ಮ ಗ್ಲೌಸ್‌ಗಳನ್ನು ತೆಗೆದು, ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿದ ನಂತರ ನೀವು ಮಾಡಿದ ಎಲ್ ಕೈ ಸನ್ನೆಯ ಅರ್ಥವೇನು? ಇಡೀ ಜಗತ್ತು ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತದೆ," ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಭಿಷೇಕ್, "ವಾಸ್ತವವಾಗಿ, ಇದರ ಅರ್ಥ ಪ್ರೀತಿ. ಅದು ನಮ್ಮನ್ನು ಬೆಂಬಲಿಸಲು ಬರುವ ಎಲ್ಲಾ ಅಭಿಮಾನಿಗಳಿಗೆ, ಟೀಮ್ ಇಂಡಿಯಾಗೆ, ಐಪಿಎಲ್ ಅಭಿಮಾನಿಗಳಿಗೂ ಸಹ ಒಂದು ಕೈಗವಸು-ಪ್ರೀತಿಯ ಸಂಕೇತವಾಗಿದೆ. ಹೌದು, ನಾನು ಹೇಳುತ್ತೇನೆ ಇದೆಲ್ಲವೂ ಭಾರತಕ್ಕಾಗಿ, ಭಾರತಕ್ಕಾಗಿ, ಭಾರತಕ್ಕಾಗಿ," ಎಂದು ಸ್ಪಷ್ಟನೆ ನೀಡಿದ್ದಾರೆ.
IND vs PAK: ಪಾಕಿಸ್ತಾನದ ಎದುರು ಸೂಪರ್-4ರ ಪಂದ್ಯದಲ್ಲಿ ಭಾರತಕ್ಕೆ ಗೆಲುವಿನ ಅಭಿಷೇಕ!
ಗಿಲ್ ಜೊತೆಗಿನ ಒಡನಾಟದ ಬಗ್ಗೆ ಅಭಿಷೇಕ್ ಹೇಳಿಕೆ
ಶುಭಮನ್ ಗಿಲ್ ಅವರೊಂದಿಗಿನ ತಮ್ಮ ಆರಂಭಿಕ 105 ರನ್‌ಗಳ ಸ್ಫೋಟಕ ಜೊತೆಯಾಟದ ನಂತರ ಅಭಿಷೇಕ್ ಶರ್ಮಾ, ಓಪನಿಂಗ್ ಪಾರ್ಟನರ್ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಈ ಪಂದ್ಯವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು, ಆದರೆ ಗಿಲ್ 28 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 47 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ತಂದುಕೊಡಲು ನೆರವು ನೀಡಿದ್ದರು.
"12 ವರ್ಷ ವಯಸ್ಸಿನಿಂದಲೂ ಇದು ಹಾಗೆಯೇ ಇದೆ, ಈಗಲೂ ಅದೇ ರೀತಿ ಇದೆ. ನಾವು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದೇವೆ, ಅವನು ಯಾವಾಗ ಹೊಡೆಯುತ್ತಾನೆ, ಯಾವ ಹೊಡೆತವನ್ನು ಆಡುತ್ತಾನೆ ಎಂಬುದನ್ನು ನಾನು ಗ್ರಹಿಸಬಲ್ಲೆ ಮತ್ತು ನಾನು ಯಾವ ಹೊಡೆತಗಳಿಗೆ ಹೋಗಬಹುದು ಎಂಬುದನ್ನು ಸಹ ಅವನಿಗೆ ತಿಳಿದಿದೆ. ಕೆಲವೊಮ್ಮೆ ಅದು ಕಣ್ಣಿನ ಸಂಪರ್ಕದಿಂದ ಸಂಭವಿಸುತ್ತದೆ, ಅವನು ಸನ್ನೆ ಮಾಡುತ್ತಾನೆ, ನಾನು ಪ್ರತಿಕ್ರಿಯಿಸುತ್ತೇನೆ ಅದು ನಾವು ಹಂಚಿಕೊಳ್ಳುವ ತಿಳುವಳಿಕೆ," ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.
IND vs PAK: ʻ7ನೇ ಡಿವಿಷನ್ ತಂಡʼ-ಪಾಕಿಸ್ತಾನವನ್ನು ಟೀಕಿಸಿದ ಕೆ ಶ್ರೀಕಾಂತ್!
ಅಭಿಷೇಕ್ ಶರ್ಮಾ ಅವರು ಸೆಪ್ಟೆಂಬರ್ 24 ರಂದು ಬುಧವಾರ ದುಬೈನಲ್ಲಿ ಲಿಟಾನ್ ದಾಸ್ ನಾಯಕತ್ವದ ಬಾಂಗ್ಲಾದೇಶವನ್ನು ಎದುರಿಸುವಾಗ ತಮ್ಮ ಆಟದ ವೇಗವನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿದ್ದಾರೆ.