ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್‌ ಸಂತ್ರಸ್ತರಿಗೆ' ನೀಡಿದ ಸಲ್ಮಾನ್‌ ಆಘಾ!

Salman Ali Agha: ಭಾರತದ ವಿರುದ್ಧದ 2025ರ ಏಷ್ಯಾ ಕಪ್ ಫೈನಲ್ ಸೋಲಿನ ನಂತರ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ಸೂರ್ಯಕುಮಾರ್ ಯಾದವ್ ಹಾದಿಯನ್ನು ಅನುಕರಿಸಿದ್ದಾರೆ. ಏಷ್ಯಾ ಕಪ್‌ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್ ಸಂತ್ರಸ್ತರಿಗೆ' ನೀಡಲು ಪಾಕಿಸ್ತಾನ ತಂಡ ಬಯಸಿದೆ ಎಂದು ನಾಯಕ ಸಲ್ಮಾನ್‌ ಆಘಾ ತಿಳಿಸಿದ್ದಾರೆ.

ಏಷ್ಯಾ ಕಪ್‌ ಪಂದ್ಯದ ಸಂಭಾವನೆಯನ್ನು ಆಪರೇಷನ್‌ ಸಿಂಧೂರ್‌ ಪಾಕ್ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ ಸಲ್ಮಾನ್‌ ಆಘಾ.

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಫೈನಲ್‌ ಪಂದ್ಯದಲ್ಲಿ (IND vs PAK Match Highlights) ಭಾರತದ ವಿರುದ್ಧ ಪಾಕಿಸ್ತಾನ 5 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು. ಫೈನಲ್ ಪಂದ್ಯದ ನಂತರ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೈಡ್ರಾಮಾ ನಡೆದಿತ್ತು. ಪಂದ್ಯದ ನಂತರ ಪಾಕಿಸ್ತಾನ ತಂಡದ ಆಟಗಾರರು ತಮ್ಮ ಡ್ರೆಸ್ಸಿಂಗ್ ಕೊಠಡಿಯಲ್ಲಿ ವಿಶ್ರಾಂತಿ ಪಡೆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿದ್ದರು. ಸುಮಾರು ಅರ್ಧ ಗಂಟೆ ವಿಳಂಬದ ನಂತರ, ಪಾಕಿಸ್ತಾನ ತಂಡದ ಆಟಗಾರರು ತಮ್ಮ ಪದಕಗಳು ಮತ್ತು ರನ್ನರ್ ಅಪ್ ಚೆಕ್‌ಗಳನ್ನು ಪಡೆಯಲು ಮೈದಾನಕ್ಕೆ ಮರಳಿದರು. ಆದರೆ, ಪಾಕ್‌ ನಾಯಕ ಸಲ್ಮಾನ್ ಅಲಿ ಆಘಾ (Salman Ali Agha) ಅವರು ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ಅವರನ್ನು ಅನುಸರಿಸಿದರು.

ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಸಂಭಾವನೆಯನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ನೀಡುವುದಾಗಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್‌ ಅಲಿ ಆಘಾ ಅವರು ಕೂಡ ಏಷ್ಯಾ ಕಪ್‌ ಟೂರ್ನಿಯ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಆಘಾ ಹೇಳಿದ್ದೇನು?

ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಸೋತ ನಂತರ ಸಲ್ಮಾನ್ ಆಘಾ, "ಪಾಕಿಸ್ತಾನ ತಂಡವು ತನ್ನ ಪಂದ್ಯದ ಶುಲ್ಕವನ್ನು ಭಾರತದ ಆಪರೇಷನ್ ಸಿಂಧೂರ್‌ನಿಂದ ಬಾಧಿತರಾದ ನಾಗರಿಕರು ಮತ್ತು ಮಕ್ಕಳಿಗೆ ದಾನ ಮಾಡುತ್ತದೆ. ಒಂದು ತಂಡವಾಗಿ, ನಾವು ನಮ್ಮ ಪಂದ್ಯದ ಶುಲ್ಕವನ್ನು ಭಾರತೀಯ ದಾಳಿ ಸಂತ್ರಸ್ತರಿಗೆ ದಾನ ಮಾಡಲು ನಿರ್ಧರಿಸಿದ್ದೇವೆ," ಎಂದು ತಿಳಿಸಿದ್ದಾರೆ.

IND vs PAK: ಟಾಸ್‌ ವೇಳೆ ರವಿ ಶಾಸ್ತ್ರಿ ಜೊತೆ ಮಾತನಾಡಲು ಸಲ್ಮಾನ್‌ ಆಘಾ ನಿರಾಕರಣೆ!

ಸೂರ್ಯಕುಮಾರ್ ಯಾದವ್ ಘೋಷಣೆ

ಸಲ್ಮಾನ್ ಆಘಾ ಅವರಿಗೂ ಮುನ್ನ ಭಾರತದ ನಾಯಕ ಸೂರ್ಯಕುಮಾರ್ ಯಾದವ್, ಏಷ್ಯಾ ಕಪ್‌ನ ಸಂಪೂರ್ಣ ಪಂದ್ಯ ಶುಲ್ಕವನ್ನು ದೇಶದ ಸಶಸ್ತ್ರ ಪಡೆಗಳಿಗೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ದಾಳಿಯಲ್ಲಿ ಹಲವು ಮಂದಿ ಪ್ರವಾಸಿಗರು ಹುತಾತ್ಮರಾಗಿದ್ದರು. ಪ್ರತೀಕಾರವಾಗಿ, ಭಾರತ ಎರಡು ವಾರಗಳ ನಂತರ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತ್ತು, ಗಡಿಯುದ್ದಕ್ಕೂ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು, ಹಲವಾರು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ನೆಲೆಗಳು ಮತ್ತು ವಾಯುನೆಲೆಯನ್ನು ನಾಶಪಡಿಸಿತ್ತು.

ಭಾರತ ತಂಡವನ್ನು ಟೀಕಿಸಿದ ಪಾಕ್‌ ನಾಯಕ

ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸರಾದ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿದ ಭಾರತ ಕ್ರಿಕೆಟ್‌ ತಂಡವನ್ನು ಪಾಕ್‌ ನಾಯಕ ಸಲ್ಮಾನ್‌ ಅಲಿ ಆಘಾ ಟೀಕಿಸಿದ್ದಾರೆ. ಭಾರತ ತಂಡದ ನಡೆಯಿಂದ ನಮಗೆ ತುಂಬಾ ನಿರಾಶಾದಾಯಕವಾಗಿದೆ ಎಂದಿದ್ದಾರೆ.

"ಅವರು ಕೈಕುಲುಕದೆ ನಮಗೆ ಅಗೌರವ ತೋರಿಸುತ್ತಿಲ್ಲ, ಕ್ರಿಕೆಟ್‌ಗೆ ಅಗೌರವ ತೋರಿಸುತ್ತಿದ್ದಾರೆ. ಒಳ್ಳೆಯ ತಂಡಗಳು ಅವರು ಮಾಡಿದ್ದನ್ನು ಮಾಡುವುದಿಲ್ಲ. ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಟ್ರೋಫಿಯೊಂದಿಗೆ (ಫೋಟೋ ಶೂಟ್) ಪೋಸ್ ನೀಡಲು ಹೋದೆವು. ನಾವು ಅಲ್ಲಿ ನಿಂತು ನಮ್ಮ ಪದಕಗಳನ್ನು ತೆಗೆದುಕೊಂಡೆವು. ನಾನು ಕಠಿಣ ಪದಗಳನ್ನು ಬಳಸಲು ಬಯಸುವುದಿಲ್ಲ ಆದರೆ ಅವರು ತುಂಬಾ ಅಗೌರವ ತೋರಿದ್ದಾರೆ," ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.