ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ʻನನ್ನ ಪ್ರದರ್ಶನ ಮುಖ್ಯವಲ್ಲ, ತಂಡ ಗೆಲ್ಲುವುದು ಮುಖ್ಯʼ-ಹಾರ್ದಿಕ್‌ ಪಾಂಡ್ಯ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಐ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಟೀಮ್‌ ಇಂಡಿಯಾ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ, ತಂಡದ ಅಗತ್ಯಗಳಿಗೆ ನಾನು ಯಾವಾಗಲೂ ಆದ್ಯತೆ ನೀಡುತ್ತೇನೆ. ತಂಡ ತನ್ನಿಂದ ಬಯಸುವ ಯಾವುದೇ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಾಗಿರುತ್ತೇನ ಎಂದು ಹೇಳಿದ್ದಾರೆ.

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ.

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ(IND vs SA) ಗೆಲುವು ಸಾಧಿಸಿದ ಭಾರತ ತಂಡ, ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಇನ್ನು ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಕಟಕ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದು, ಮೊದಲ ಪಂದ್ಯದಲ್ಲಿಯೇ ಆಲ್‌ರೌಂಡರ್‌ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ನೆರವು ನೀಡಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಂಡ್ಯ, ತಂಡದ ಅಗತ್ಯಗಳಿಗೆ ನಾನು ಯಾವಾಗಲೂ ಆದ್ಯತೆ ನೀಡುತ್ತೇನೆ. ತಂಡ ತನ್ನಿಂದ ಬಯಸುವ ಯಾವುದೇ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಾಗಿರುತ್ತೇನೆ. ವೈಯಕ್ತಿಕ ಆದ್ಯತೆಗಳಿಗಿಂತ ತಂಡದ ಅಗತ್ಯತೆಗಳು ತುಂಬಾ ಮುಖ್ಯ ಎಂದು ಹೇಳಿದ್ದಾರೆ.

ಕಟಕ್‌ನ ಬಾರಬತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತವಾಗಿತ್ತು. 78 ರನ್‌ಗಳಿಗೆ 4 ಹಾಗೂ 105 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸ್ಪೋಟಕ ಬ್ಯಾಟ್‌ ಮಾಡಿದ ಹಾರ್ದಿಕ್‌ ಪಾಂಡ್ಯ 28 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 59 ರನ್‌ ಸಿಡಿಸಿದ್ದರು. ಆ ಮೂಲಕ ಟೀಮ್‌ ಇಂಡಿಯಾ 175 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಬೌಲಿಂಗ್‌ನಲ್ಲಿಯೂ ಅವರು ಒಂದು ವಿಕೆಟ್‌ ಕಿತ್ತಿದ್ದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IND vs SA: ಹಾರ್ದಿಕ್‌ ಪಾಂಡ್ಯ ಸ್ಫೋಟಕ ಅರ್ಧಶತಕದ ಬಲದಿಂದ ಮೊದಲನೇ ಟಿ20ಐ ಗೆದ್ದ ಭಾರತ!

ತಂಡ ನನಗೆ ತುಂಬಾ ಮುಖ್ಯ: ಹಾರ್ದಿಕ್‌

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, "ಒಬ್ಬ ಕ್ರಿಕೆಟಿಗನಾಗಿ, ನನಗೆ ಮೈದಾನದಲ್ಲಿ ನೀಡಲಾದ ಪಾತ್ರಗಳ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ನಾನು ಮೈದಾನಕ್ಕೆ ಬಂದಾಗಲೆಲ್ಲಾ ಪ್ರೇರಿತನಾಗಿರುತ್ತೇನೆ ಹಾಗೂ ನನಗೆ ನೀಡಲಾದ ಪಾತ್ರಗಳನ್ನು ನಾನು ನಿರ್ವಹಿಸುತ್ತೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಹಾರ್ದಿಕ್ ಪಾಂಡ್ಯ ಏನು ಬಯಸುತ್ತಾರೆ ಎಂಬುದು ಮುಖ್ಯವಲ್ಲ. ಭಾರತ ತಂಡ ಏನು ಬಯಸುತ್ತದೆ ಎಂಬುದು ಮುಖ್ಯ. ನನಗೆ ಅವಕಾಶಗಳು ಸಿಕ್ಕಾಗಲೆಲ್ಲಾ, ನಾನು ಹೊರಬಂದು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಕೆಲವೊಮ್ಮೆ ಅದು ಬರುತ್ತದೆ, ಕೆಲವೊಮ್ಮೆ ಅದು ಆಗುವುದಿಲ್ಲ. ನನ್ನ ವೃತ್ತಿಜೀವನದುದ್ದಕ್ಕೂ ನನ್ನ ತಂಡ ಮೊದಲು, ದೇಶ ಮೊದಲು ಹಾಗೂ ನಾನು ಯಾವುದೇ ತಂಡಕ್ಕಾಗಿ ಆಡಿದ್ದರೂ ಸಹ, ಅದನ್ನು ಮೊದಲು ಇರಿಸಲು ಪ್ರಯತ್ನಿಸಿದ್ದೇನೆ. ಅದು ಯಾವಾಗಲೂ ನನಗೆ ಸಹಾಯ ಮಾಡಿದೆ." ಎಂದು ಹೇಳಿದರು.

ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಆಲ್‌ರೌಂಡರ್‌

"ನಾನು ನನ್ನ ಹೊಡೆತಗಳನ್ನು ಬೆಂಬಲಿಸಬೇಕಾಯಿತು. ಅದೇ ಸಮಯದಲ್ಲಿ, ಪಿಚ್‌ ಮೇಲೆ ಸ್ವಲ್ಪ ಮಸಾಲೆ ಇದೆ ಎಂದು ನಾನು ಅರಿತುಕೊಳ್ಳಬೇಕಾಯಿತು. ಆದ್ದರಿಂದ, ನಾನು ಸ್ವಲ್ಪ ಧೈರ್ಯಶಾಲಿಯಾಗಿರಬೇಕು. ಸಮಯಕ್ಕೆ ತಕ್ಕಂತೆ ಬೌಲ್‌ ಮಾಡುವುದು ಹಚ್ಚು ಮುಖ್ಯವಾಗಿತ್ತು. ಹೌದು, ನಾನು ಇಂದು ರಾತ್ರಿ ಬ್ಯಾಟಿಂಗ್ ನಡೆಸಿದ ರೀತಿಯಿಂದ ನನಗೆ ತುಂಬಾ ತೃಪ್ತಿ ಸಿಕ್ಕಿದೆ," ಎಂದು ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

IND vs SA: ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪೂರ್ಣಗೊಳಿಸಿದ ಜಸ್‌ಪ್ರೀತ್‌ ಬುಮ್ರಾ!

ತಮ್ಮ ಕಠಿಣ ದಿನಗಳನ್ನು ನೆನೆದ ಪಾಂಡ್ಯ

ಕಳೆದ ಕೆಲವು ದಿನಗಳಿಂದ ನನ್ನ ಪರಿಶ್ರಮದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ನನಗೆ ಗಾಯದ ಸಮಯದಲ್ಲಿ ತಂಡದಿಂದ ದೂರ ಇರುವುದು ಸ್ವಲ್ಪ ಕಷ್ಟವಾಯಿತೆಂದು ಅವರು ಹೇಳಿಕೊಂಡಿದ್ದಾರೆ.

"ಕಳೆದ 6-7 ತಿಂಗಳುಗಳು ಫಿಟ್ನೆಸ್ ದೃಷ್ಟಿಕೋನದಿಂದ ನನಗೆ ಅದ್ಭುತವಾಗಿವೆ. ತೆರೆಮರೆಯಲ್ಲಿ ನಡೆಯುವ ಕಠಿಣ ಪರಿಶ್ರಮವನ್ನು ನಾನು ದೊಡ್ಡದಾಗಿ ಪರಿಗಣಿಸುವುದಿಲ್ಲ. ಅದೇ ಸಮಯದಲ್ಲಿ ಈ 50 ದಿನಗಳಲ್ಲಿ ನಿಮ್ಮ ಪ್ರೀತಿಪಾತ್ರರಿಂದ ದೂರವಿರುವುದು, ಎಸ್‌ಸಿಎನಲ್ಲಿ ಸಮಯ ಕಳೆಯುವುದು ಮತ್ತು ಎಲ್ಲವನ್ನೂ ಒಳಗೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು, ಇಲ್ಲಿಗೆ ಬರುವುದು ತುಂಬಾ ತೃಪ್ತಿಕರವಾಗಿದೆ. ಇದರಿಂದ ಫಲಿತಾಂಶ ಈ ರೀತಿ ಹೊರಬರುತ್ತದೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಡಿಸೆಂಬರ್ 11 ರಂದು ಗುರುವಾರ ಪಂಜಾಬ್‌ನ ಮುಲ್ಲಾನ್‌ಪುರದ ಮಹರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.