ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕಹಿ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲʼ: ಗೌತಮ್‌ ಗಂಭಿರ್‌ ಮೇಲಿನ ಟೀಕೆಗಳಿಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ಭಾರತ ತಂಡದ ಹೆಡ್‌ ಕೋಚ್‌ ಗೌತಮ್ ಗಂಭೀರ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ. ಗಂಭೀರ್ ಅವರು ಜನರು ಒಪ್ಪಿಕೊಳ್ಳಲು ಕಷ್ಟಪಡುವ ಕಹಿ ಸತ್ಯವನ್ನು ನೇರವಾಗಿ ಹೇಳುತ್ತಾರೆ ಎಂದು ಹರ್ಭಜನ್ ಹೇಳಿದ್ದಾರೆ. ಅವರ ನೇರ ಮತ್ತು ಸ್ಪಷ್ಟವಾಗಿ ಮಾತನಾಡುವ ಶೈಲಿಯನ್ನು ಹಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗೌತಮ್‌ ಗಂಭೀರ್‌ ಮೇಲಿನ ಟೀಕೆಗಳಿಗೆ ಹರ್ಭಜನ್‌ ಸಿಂಗ್‌ ತಿರುಗೇಟು!

ಗೌತಮ್‌ ಗಂಭೀರ್‌ಗೆ ಹರ್ಭಜನ್‌ ಸಿಂಗ್‌ ಬೆಂಬಲ. -

Profile
Ramesh Kote Aug 13, 2026 7:29 PM

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ವಿರುದ್ಧ ಕೇಳಿಬರುತ್ತಿರುವ ಟೀಕೆಗಳ ನಡುವೆ, ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ Harbhajan Singh) ಅವರು ತಮ್ಮ ಮಾಜಿ ಸಹ ಆಟಗಾರನ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಹಲವರು ಒಪ್ಪಿಕೊಳ್ಳಲು ಕಷ್ಟಪಡುವ “ಕಹಿ ಸತ್ಯವನ್ನು” ಗಂಭಿರ್‌ ನೇರವಾಗಿ ಹೇಳುತ್ತಾರೆ. ಅವರ ನೇರ ಹಾಗೂ ಆಕ್ರಮಣಕಾರಿ ವ್ಯಕ್ತಿತ್ವವನ್ನು ಕೆಲವರು ಅಹಂಕಾರ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಹರ್ಭಜನ್ ಹೇಳಿದ್ದಾರೆ. ಪಿಟಿಐ ಜೊತೆಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಹರ್ಭಜನ್, ಗಂಭೀರ್ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಎಂದಿಗೂ ಹೆದರದ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ.

“ಗಂಭೀರ್ ಹೇಳುವುದನ್ನು ಕೇಳಲು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಅವರು ಹೇಳುವುದು ಕಹಿ ಸತ್ಯವಾಗಿರುತ್ತದೆ. ಅದನ್ನು ಸ್ವೀಕರಿಸಲು ಹಲವರಿಗೆ ಕಷ್ಟವಾಗುತ್ತದೆ,” ಎಂದು ಹರ್ಭಜನ್ ಸಿಂಗ್‌ ಹೇಳಿದ್ದಾರೆ. ಗಂಭೀರ್ ಅವರ ಸ್ಪಷ್ಟ ಮತ್ತು ನೇರ ಮಾತಿನ ಶೈಲಿಯನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಅದನ್ನು ಅಹಂಕಾರವೆಂದು ಭಾವಿಸುತ್ತಾರೆ. ಆದರೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹರ್ಭಜನ್ ತಿಳಿಸಿದ್ದಾರೆ.

IND vs SL: ʻಭಾರತ ತಂಡವನ್ನು ಶ್ರೀಲಂಕಾ ಮಣಿಸಲಿದೆʼ-ಶುಭಮನ್‌ ಗಿಲ್‌ ಬಳಗಕ್ಕೆ ಧನಂಜಯ್‌ ಡಿ ಸಿಲ್ವಾ ಎಚ್ಚರಿಕೆ!

“ಗೌತಮ್ ಒಬ್ಬ ಅತ್ಯುತ್ತಮ ವ್ಯಕ್ತಿ. ಅವರು ತುಂಬಾ ನೇರವಾಗಿ ಮಾತನಾಡುತ್ತಾರೆ. ಹಲವರಿಗೆ ಗೌತಮ್ ಹೇಳುವ ಮಾತುಗಳು ಕಹಿಯಾಗಿ ಕಾಣಬಹುದು. ಆದರೆ ಅವರು ಹೇಳುವುದು ಕಹಿ ಸತ್ಯ. ಈಗಿನ ಪರಿಸ್ಥಿತಿಯಲ್ಲಿ ಅನೇಕ ಜನರಿಗೆ ಆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಗಂಭೀರ್ ಅವರ ಈ ನೇರ ಮತ್ತು ಸ್ಪಷ್ಟವಾದ ಮಾತಿನ ಶೈಲಿ ಅವರು ಆಟಗಾರರಾಗಿದ್ದ ದಿನಗಳಿಂದಲೇ ಅವರೊಂದಿಗೆ ಬಂದಿದೆ. ಭಾರತ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಬಳಿಕವೂ ಅವರು ತಮ್ಮ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂದೇಟು ಹಾಕಿಲ್ಲ. ಆಟಗಾರರ ಆಯ್ಕೆ, ತಂಡದ ಪ್ರದರ್ಶನ ಅಥವಾ ಆಟಗಾರರ ಮೇಲಿನ ನಿರೀಕ್ಷೆಗಳು—ಯಾವುದೇ ವಿಷಯವಾಗಿರಲಿ, ಗಂಭೀರ್ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವುದರಲ್ಲಿ ಹಿಂದೆ ಸರಿದಿಲ್ಲ ಎಂದು ಹರ್ಭಜನ್ ಹೇಳಿದ್ದಾರೆ.

"ಗೌತಮ್ ಗಂಭೀರ್ ಅವರ ಮಾತಿನ ಶೈಲಿ ಕೆಲವೊಮ್ಮೆ ಅವರು ಹೇಳಲು ಬಯಸುವ ಸಂದೇಶವನ್ನೇ ಮರೆಮಾಚಬಹುದು. ಬಹುಶಃ ಅವರ ಮಾತಿನ ಧಾಟಿ ಕೆಲವರಿಗೆ ಅವರು ಸ್ವಲ್ಪ ಕಠಿಣ ವ್ಯಕ್ತಿ ಎಂಬ ಭಾವನೆ ಮೂಡಿಸಬಹುದು,” ಎಂದು ಹರ್ಭಜನ್ ಹೇಳಿದ್ದಾರೆ.

IND vs SL: ಪ್ರಸಿಧ್‌ ಕೃಷ್ಣ-ಆಕಿಬ್‌ ನಬಿ ನಡುವೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಬಳಿಕ ಗಂಭೀರ್ ವಿರುದ್ಧದ ಟೀಕೆಗಳು ಮತ್ತಷ್ಟು ತೀವ್ರಗೊಂಡಿವೆ. ಗಂಭೀರ್ ಅವರ ಅವಧಿಯಲ್ಲಿ ಭಾರತ ಮೂರು ಪ್ರಮುಖ ವೈಟ್-ಬಾಲ್ ಪ್ರಶಸ್ತಿಗಳನ್ನು ಗೆದ್ದಿದ್ದರೂ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ದ ಭಾರೀ ಸೋಲುಗಳನ್ನು ಅನುಭವಿಸಿತು. ನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಸರಣಿ ಸೋತಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಫಲಿತಾಂಶಗಳು ಬಾರದ ಹಿನ್ನೆಲೆಯಲ್ಲಿ ಗಂಭೀರ್ ಅವರ ಕಾರ್ಯವಿಧಾನ ಮತ್ತು ಟೆಸ್ಟ್ ತಂಡದ ನಿರ್ವಹಣೆ ಈಗ ಹೆಚ್ಚು ಪರಿಶೀಲನೆಗೆ ಒಳಗಾಗಿದೆ.

“ಗೌತಮ್ ಗಂಭೀರ್‌ ಅವರನ್ನು ಏಕೆ ಇಷ್ಟೊಂದು ಟೀಕಿಸಲಾಗುತ್ತಿದೆ? ತಂಡ ಉತ್ತಮವಾಗಿ ಆಡದಾಗ ಜನರು ಯಾವಾಗಲೂ ಕೋಚ್‌ ಅನ್ನೇ ಏಕೆ ದೂಷಿಸುತ್ತಾರೆ ಎಂಬುದು ನನಗೆ ಎಂದಿಗೂ ಅರ್ಥವಾಗಿಲ್ಲ. ಅವರು ಯುವ ಆಟಗಾರನಾಗಿ ತಂಡಕ್ಕೆ ಬಂದಾಗ, ಕೆಲವೇ ಆಟಗಾರರೊಂದಿಗೆ ಮಾತ್ರ ಹೆಚ್ಚು ಬೆರೆಯುತ್ತಿದ್ದರು. ಅವರೊಂದಿಗೆ ಸಮಯ ಕಳೆಯುತ್ತಿದ್ದರು. ವೀರೇಂದ್ರ ಸೆಹ್ವಾಗ್, ಅಮಿತ್ ಮಿಶ್ರಾ ಮತ್ತು ಮುನಾಫ್ ಪಟೇಲ್ ಅವರ ಆಪ್ತ ಸಹ ಆಟಗಾರರಾಗಿದ್ದರು,” ಎಂದು ಹರ್ಭಜನ್ ನೆನಪಿಸಿಕೊಂಡಿದ್ದಾರೆ.

“ಪುಸ್ತಕದ ಮುಖಪುಟ ನೋಡಿ ಅದರ ಒಳಗಿನ ವಿಷಯವನ್ನು ನಿರ್ಣಯಿಸಬೇಡಿ. ಅವರು ಅದ್ಭುತ ವ್ಯಕ್ತಿ. ಆಟವನ್ನು ಹೇಗೆ ಆಡಬೇಕು ಎಂಬುದರ ಬಗ್ಗೆ ಅವರಿಗೆ ಉತ್ತಮ ತಿಳುವಳಿಕೆ ಇದೆ. ಒಂದು ವಿಷಯ ನನಗೆ ಖಚಿತವಾಗಿ ಗೊತ್ತು. ಈಗ ಅವರು ಕೋಚ್ ಆಗಿರುವುದರಿಂದ, ತಮ್ಮ ತಂಡದಲ್ಲಿ ಒಂದೇ ಒಂದು ತತ್ವವನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ. ಅದು ‘ಗೆಲ್ಲಲು ಆಡಿ’ ಎಂಬುದೇ,” ಎಂದು ಅವರು ಹೇಳಿದ್ದಾರೆ.