IND vs ZIM: ಭಾರತ ಟಿ20ಐ ತಂಡದ ಇತ್ತೀಚಿನ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ತಿಲಕ್ ವರ್ಮಾ!
ಯುಕೆ ಪ್ರವಾಸದಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿದೆ, ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಪೈಕಿ 4 ರಲ್ಲಿ ಸೋಲು ಅನುಭವಿಸಿತ್ತು. ಇದಕ್ಕೆ ಕಾರಣವೇನೆಂದು ಭಾರತ ತಂಡದ ಉಪ ನಾಯಕ ತಿಲಕ್ ವರ್ಮಾ ತಿಳಿಸಿದ್ದಾರೆ.
ಭಾರತ ತಂಡದ ವೈಫಲ್ಯಕ್ಕೆ ಕಾರಣ ತಿಳಿಸಿದ ತಿಲಕ್ ವರ್ಮಾ. -
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಭಾರತ, ಯುನೈಟೆಡ್ ಕಿಂಗ್‌ಡಮ್ ಪ್ರವಾಸದಲ್ಲಿ ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಎರಡು ಪ್ರತ್ಯೇಕ ಸರಣಿಗಳಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತು. ಭಾರತ (Indian Cricket team) ಮೊದಲು ಡಬ್ಲಿನ್‌ನಲ್ಲಿ ನಡೆದ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ವೈಟ್‌ವಾಶ್ ಆಘಾತ ಅನುಭವಿಸಿತ್ತು. ಇದಾದ ಬಳಿಕ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ಸಂಪೂರ್ಣ ವಿಫಲವಾಗಿತ್ತು. ಈ ಬಗ್ಗೆ ಭಾರತ ತಂಡದ ಉಪ ನಾಯಕ ತಿಲಕ್ ವರ್ಮಾ (Tilak Verma) ಇದಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಮುನ್ನ ಮಾತನಾಡಿದ ಭಾರತ ತಂಡದ ಉಪನಾಯಕ ತಿಲಕ್ ವರ್ಮಾ, ತಂಡದ ಇತ್ತೀಚಿನ ಕಳಪೆ ಪ್ರದರ್ಶನಕ್ಕೆ ವಿದೇಶಿ ಪರಿಸ್ಥಿತಿಗಳ ಅನುಭವದ ಕೊರತೆಯೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.
"ನಿಜ ಹೇಳಬೇಕೆಂದರೆ, ಈಗ ಶ್ರೇಯಸ್ ಭಾಯ್ (ಶ್ರೇಯಸ್ ಅಯ್ಯರ್) ಯಶಸ್ವಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಸಹಜವಾಗಿಯೇ ಜವಾಬ್ದಾರಿ ಮತ್ತು ನಿರೀಕ್ಷೆಗಳು ಇರುತ್ತವೆ. ಅದೇ ಸಮಯದಲ್ಲಿ, ಐರ್ಲೆಂಡ್‌ನಲ್ಲಿ ಪರಿಸ್ಥಿತಿಗಳು ಸಂಪೂರ್ಣ ವಿಭಿನ್ನವಾಗಿದ್ದವು. ಕಳೆದ ಎರಡು ವರ್ಷಗಳನ್ನು ಗಮನಿಸಿದರೆ, ನಾವು ಹೆಚ್ಚಿನ ಪಂದ್ಯಗಳನ್ನು ಏಷ್ಯಾದಲ್ಲೇ ಆಡಿದ್ದೇವೆ," ಎಂದು ತಿಲಕ್ ವರ್ಮಾ ಸರಣಿ ಆರಂಭಕ್ಕೂ ಮುನ್ನ ಹೇಳಿದ್ದಾರೆ.
ವೈಭವ್ ಇನ್; ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
"ಎರಡು ವರ್ಷಗಳ ಬಳಿಕ ನಾವು ನೇರವಾಗಿ ವಿದೇಶಿ ಪರಿಸ್ಥಿತಿಗಳಲ್ಲಿ ವಿಶೇಷವಾಗಿ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧಆಡಲು ಬಂದೆವು. ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹೇಗೆ ಆಡಿತು ಎಂಬುದನ್ನು ಎಲ್ಲರೂ ನೋಡಿದ್ದೇವೆ. ಹೀಗಾಗಿ ಉತ್ತಮ ಪರಿಸ್ಥಿತಿಗಳಲ್ಲಿ ಬಲಿಷ್ಠ ತಂಡದ ವಿರುದ್ಧ ಆಡುವುದು ಸಹಜವಾಗಿಯೇ ಸವಾಲಿನ ಸಂಗತಿ," ಎಂದು ತಿಳಿಸಿದ್ದಾರೆ.
ಆದರೆ, ತಿಲಕ್ ವರ್ಮಾ ಅವರ ಈ ವಾದವನ್ನು ಎಲ್ಲರೂ ಒಪ್ಪುವಂತಿಲ್ಲ. ಏಕೆಂದರೆ 2026ರ ಟಿ20 ವಿಶ್ವಕಪ್‌ಗೆ ಮುನ್ನ ಭಾರತ ದಕ್ಷಿಣ ಆಫ್ರಿಕಾ (ನವೆಂಬರ್ 2024) ಮತ್ತು ಆಸ್ಟ್ರೇಲಿಯಾ (ಅಕ್ಟೋಬರ್ 2025) ಪ್ರವಾಸಗಳಲ್ಲಿ ಟಿ20 ಸರಣಿಗಳನ್ನು ಆಡಿತ್ತು. ಜೊತೆಗೆ ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ ತವರಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧವೂ ಟಿ20 ಸರಣಿಗಳನ್ನು ಆಯೋಜಿಸಿತ್ತು. ಹೀಗಾಗಿ ವಿದೇಶಿ ಪರಿಸ್ಥಿತಿಗಳ ಅನುಭವದ ಕೊರತೆಯೇ ಏಕೈಕ ಕಾರಣ ಎಂಬ ವಾದದ ಬಗ್ಗೆ ಪ್ರಶ್ನೆಗಳು ಎದ್ದಿವೆ.
IND vs ZIM: ಜಿಂಬಾಬ್ವೆಗೆ ಆಗಮಿಸಿದ ವೈಭವ್ ಸೂರ್ಯವಂಶಿ ಬಗ್ಗೆ ಸಿಕಂದರ್ ರಾಝಾ ದೊಡ್ಡ ಹೇಳಿಕೆ!
ಭಾರತ ತಂಡದ ಉಪನಾಯಕ ತಿಲಕ್ ವರ್ಮಾ ಕೂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಟೀಕೆಗೆ ಗುರಿಯಾಗಿದ್ದಾರೆ. ತಿಲಕ್ ವರ್ಮಾ ಅವರನ್ನು ಅವರ ನೆಚ್ಚಿನ ಮೂರನೇ ಕ್ರಮಾಂಕದಿಂದ ಕೆಳಗಿಳಿಸಿ ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಗಿತ್ತು. ಈ ಸ್ಥಾನಗಳು ಅವರ ಸಹಜ ಆಟದ ಶೈಲಿಗೆ ಹೊಂದಿಕೆಯಾಗದ ಕಾರಣ, ಅವರ ಪ್ರದರ್ಶನದ ಮೇಲೂ ಅದರ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ತಮ್ಮ ಬ್ಯಾಟಿಂಗ್ ಕ್ರಮದ ಕುರಿತು ಮಾತನಾಡಿದ ತಿಲಕ್ ವರ್ಮಾ, ತಂಡದ ಅಗತ್ಯಕ್ಕೆ ತಕ್ಕಂತೆ ಯಾವುದೇ ಪಾತ್ರವನ್ನು ನಿರ್ವಹಿಸಲು ತಾವು ಸಿದ್ಧ ಎಂದು ಹೇಳಿದರು.
"ಈ ಆಟದಲ್ಲಿ ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ನಡೆಸಬೇಕಾಗುತ್ತದೆ. ಅದರಲ್ಲೂ ಇಂತಹ ಪರಿಸ್ಥಿತಿಗಳಲ್ಲಿ ಅದು ಸುಲಭದ ಕೆಲಸವಲ್ಲ. ಆದರೆ ನಾನು ಯಾವಾಗಲೂ ಒಂದು ಮಾತು ಹೇಳುತ್ತೇನೆ—ತಂಡಕ್ಕೆ ಏನು ಬೇಕೋ ಅದನ್ನೇ ಮಾಡುತ್ತೇನೆ. ತಂಡಕ್ಕಾಗಿ ತಾಳ್ಮೆಯಿಂದ ಆಡಬೇಕಾದರೆ ಹಾಗೆಯೇ ಆಡುತ್ತೇನೆ. ಆಕ್ರಮಣಕಾರಿ ಆಟ ಬೇಕಾದರೆ ಅದನ್ನೂ ಮಾಡುತ್ತೇನೆ," ಎಂದರು.
"ಆ ಸಮಯದಲ್ಲಿ ತಂಡದ ಪರಿಸ್ಥಿತಿಯನ್ನು ನೋಡಿದರೆ, ಐರ್ಲೆಂಡ್‌ನಿಂದ ಇಂಗ್ಲೆಂಡ್ ಸರಣಿವರೆಗೆ ಪವರ್‌ಪ್ಲೇಯಲ್ಲೇ ನಾಲ್ಕು ಅಥವಾ ಐದು ವಿಕೆಟ್‌ಗಳು ಬೀಳುತ್ತಿದ್ದವು. ಅಂತಹ ಸಂದರ್ಭದಲ್ಲಿ ಕ್ರೀಸ್‌ಗೆ ಬಂದು ಅಜಾಗರೂಕವಾಗಿ ಹೊಡೆದು ಔಟಾಗುವುದಕ್ಕೆ ಯಾವುದೇ ಅರ್ಥವಿಲ್ಲ," ಎಂದು ತಿಲಕ್ ವರ್ಮಾ ಹೇಳಿದರು.