ಮಹಿಳೆಯ ಮನೆಗೆ ನುಗ್ಗಿ, ಆಕೆಯ ಬಟ್ಟೆ ಎತ್ತುವುದು ಅತ್ಯಾಚಾರ ಯತ್ನವಲ್ಲ: ಹೈಕೋರ್ಟ್ ತೀರ್ಪು
High Court Verdict: ಅಕ್ರಮವಾಗಿ ನುಗ್ಗಿ ಮಹಿಳೆಯ ಬಟ್ಟೆಯನ್ನು ಎಳೆಯುವುದು ಅಥವಾ ಮೇಲೆತ್ತುವುದು ಭಾರತೀಯ ದಂಡ ಸಂಹಿತೆಯ (IPC) ಪ್ರಕಾರ ಅತ್ಯಾಚಾರ ಅಥವಾ ಅತ್ಯಾಚಾರದ ಯತ್ನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 26 ವರ್ಷಗಳ ಹಿಂದಿನ ಪ್ರಕರಣದ ಬಗ್ಗೆ ಕೋರ್ಟ್ ಈ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ -
ರಾಂಚಿ, ಸೆ.10: ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ 1999ರಲ್ಲಿ ನಡೆದಿತ್ತು. 26 ವರ್ಷಗಳ ನಂತರ, ನ್ಯಾಯಾಲಯವು ಅತ್ಯಾಚಾರ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ರಾತ್ರಿ ವೇಳೆ ಅಕ್ರಮವಾಗಿ ನುಗ್ಗಿ ಆಕೆಯ ಬಟ್ಟೆಯನ್ನು ಎಳೆಯುವುದು ಅಥವಾ ಮೇಲೆತ್ತುವುದು ಭಾರತೀಯ ದಂಡ ಸಂಹಿತೆಯ (IPC) ಪ್ರಕಾರ ಅತ್ಯಾಚಾರ ಅಥವಾ ಅತ್ಯಾಚಾರದ ಯತ್ನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ (Jharkhand High Court) ಮಹತ್ವದ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ, ರಾತ್ರಿ ವೇಳೆ ಮಹಿಳೆಯ ಮನೆಗೆ ನುಗ್ಗಿ ಬಟ್ಟೆ ಎತ್ತುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧವಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ತೀರ್ಪು ನೀಡಿದೆ. 1999ರ ಡಿಸೆಂಬರ್‌ನಲ್ಲಿ ಈ ಪ್ರಕರಣ ನಡೆದಿತ್ತು. ವ್ಯಕ್ತಿಯೊಬ್ಬ ರಾತ್ರಿ ವೇಳೆ ತನ್ನ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ನಂತರ 2006ರಲ್ಲಿ ಸೆಷನ್ಸ್ ನ್ಯಾಯಾಲಯವು ಆತನಿಗೆ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್, ಸಂತ್ರಸ್ತೆಯ ಹೇಳಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಆರೋಪಿಯು ಅತ್ಯಾಚಾರ ಎಸಗಲು ನೇರವಾದ ದೈಹಿಕ ಪ್ರಯತ್ನ ನಡೆಸಿರುವುದು ಸಾಬೀತಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಆದರೆ, ಆರೋಪಿಯ ನಡವಳಿಕೆಯು ಅತ್ಯಂತ ಅಸಭ್ಯ ಹಾಗೂ ಆಕ್ಷೇಪಾರ್ಹವಾಗಿದ್ದು, ಮಹಿಳೆಯ ಶೀಲಕ್ಕೆ ಧಕ್ಕೆ ತರುವಂಥದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಈ ಪ್ರಕರಣವನ್ನು ಅತ್ಯಾಚಾರ ಯತ್ನದ ವ್ಯಾಪ್ತಿಯಿಂದ ಹೊರಗಿಟ್ಟ ಹೈಕೋರ್ಟ್, ಇದನ್ನು ಮಹಿಳೆಯ ಶೀಲಕ್ಕೆ ಧಕ್ಕೆ ತರುವುದು ಮತ್ತು ಬಲಪ್ರಯೋಗ ಕಾಯ್ದೆಯಡಿ ಮಾರ್ಪಡಿಸಿದೆ. ಅಲ್ಲದೆ, ಆರೋಪಿಯು ಈಗಾಗಲೇ ವಿಚಾರಣೆಯ ಅವಧಿಯಲ್ಲಿ ಸುಮಾರು ಎಂಟು ತಿಂಗಳ ಕಾಲ ಜೈಲು ವಾಸ ಅನುಭವಿಸಿರುವುದರಿಂದ, ಆತನ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದೆ.
ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ರಾವ್ ಅಪ್ರೂವ್ ಆಗಲು ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರದೋಷ್ ಹೇಳಿಕೆ ದಾಖಲಿಸಲು ಕೆಳಹಂತದ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್, ಒಂದು ವಾರದೊಳಗೆ ಮರು ಆದೇಶ ಹೊರಡಿಸುವಂತೆ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಈ ಮೂಲಕ ನಟ ದರ್ಶನ್‌ಗೆ ಕಾನೂನು ಹೋರಾಟದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.