T20 World Cup 2026: ತಿಲಕ್ ವರ್ಮಾ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಸೂಚಿಸಿದ ಆಕಾಶ್ ಚೋಪ್ರಾ!
Aakash chopra on Tilak Verma's Replacement: ಗಾಯದಿಂದ ಗುಣಮುಖರಾಗುತ್ತಿರುವ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಅಲ್ಲದೆ ಮುಂದಿನ ತಿಂಗಳು ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಇವರ ಲಭ್ಯತೆ ಬಗ್ಗೆ ಇನ್ನು ಯಾವುದೇ ಖಚಿತತೆ ಇಲ್ಲ.
ತಿಲಕ್ ವರ್ಮಾ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಸೂಚಿಸಿದ ಚೋಪ್ರಾ. -
ನವದೆಹಲಿ: ಮುಂದಿನ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೂ ಒಂದು ತಿಂಗಳ ಮುನ್ನ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma) ಹೊಟ್ಟೆಯ ಭಾಗದ ಗಾಯಕ್ಕೆ ತುತ್ತಾಗಿದ್ದರು ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ (IND vs NZ) ಮೊದಲ ಮೂರು ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿದೆ. ಇದಲ್ಲದೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅವರಲಭ್ಯತೆ ಬಗ್ಗೆ ಅನುಮಾನವಿದೆ. ಟಿ20 ವಿಶ್ವಕಪ್ ವೇಳೆಗೆ ತಿಲಕ್ ಫಿಟ್‌ನೆಸ್‌ಗೆ ಮರಳಲು ಸಾಧ್ಯವಾಗದಿದ್ದರೆ, ಅವರ ಸ್ಥಾನಕ್ಕೆ ಯಾವ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಬಹುದು ಎಂದು ನೋಡಬೇಕಾಗಿದೆ. ಅದರಂತೆ ಮಾಜಿ ಭಾರತೀಯ ಆಟಗಾರ ಆಕಾಶ್ ಚೋಪ್ರಾ, ತಿಲಕ್ ವರ್ಮಾ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಸೂಚಿಸಿದ್ದಾರೆ.
ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಪ್ರಸ್ತುತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ "ಅವರು (ಬಿಸಿಸಿಐ) ಹೊಸ ಆಟಗಾರನನ್ನು ಹುಡುಕಬೇಕಾಗಿದೆ. ಅದು ಶುಭಮನ್ ಗಿಲ್ ಆಗಿರಬಹುದೇ? ಇಲ್ಲ, ಅವರು ಹಾಗೆ ಇರಬಾರದು. ಯಶಸ್ವಿ ಜೈಸ್ವಾಲ್ ಕೂಡ ಹಾಗೆ ಇರಬಾರದು. ನಿಮಗೆ ಓಪನರ್ ಅಗತ್ಯವಿಲ್ಲ. ತಿಲಕ್ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ನಿಮಗೆ ನಂ. 3 ಅಥವಾ ನಂ. 4 ರಲ್ಲಿ ಬ್ಯಾಟ್ ಮಾಡಬಲ್ಲ ಯಾರಾದರೂ ಬೇಕು ಮತ್ತು ಅವರು ಬೌಲ್ ಮಾಡಬಲ್ಲರಾದರೆ, ಅದು ಅದ್ಭುತ. ಆದರೆ ನಿಮಗೆ ಓಪನರ್ ಅಗತ್ಯವಿಲ್ಲ," ಎಂದು ಹೇಳಿದ್ದಾರೆ.
"ಈ ಚರ್ಚೆಯಲ್ಲಿ ಅವರು ಇಲ್ಲದಿದ್ದರೆ, ಯಾರಾಗಬೇಕು? ಶ್ರೇಯಸ್ ಅಯ್ಯರ್. ಅವರು ಸ್ವಯಂಚಾಲಿತ ಆಯ್ಕೆಯಾಗಿರಬೇಕು. ಅವರು ಈಗಾಗಲೇ ಅದ್ಭುತವಾಗಿ ಆಡುತ್ತಿದ್ದಾರೆ. ಅವರು ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಏಷ್ಯಾ ಕಪ್ ಟೂರ್ನಿಗೆ ಅವರನ್ನು ಆಯ್ಕೆ ಮಾಡದಿದ್ದಾಗ, ಅದು ತಪ್ಪೆಂದು ಭಾವಿಸಲಾಯಿತು. ಆದರೆ ಈಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಐಪಿಎಲ್‌ಗೆ ಬೆಂಕಿ ಹಚ್ಚಿದ ಹಿರಿಯ ಬ್ಯಾಟ್ಸ್‌ಮನ್‌ನ ಸಮಯ. ಶ್ರೇಯಸ್ ಅಯ್ಯರ್ ನನ್ನ ಮತವನ್ನು ಪಡೆಯುತ್ತಾರೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಿಯಾನ್ ಪರಾಗ್‌ಗೂ ಚೋಪ್ರಾ ಬೆಂಬಲ
"ನೀವು ಶ್ರೇಯಸ್ ಅಯ್ಯರ್ ಜೊತೆ ಹೋಗಲು ಬಯಸದಿದ್ದರೆ, ನಾನು ರಿಯಾನ್ ಪರಾಗ್ ಅವರನ್ನು ಸೂಚಿಸುತ್ತೇನೆ ಏಕೆಂದರೆ ಅವರು ಭಾರತದ ಟಿ20 ತಂಡದ ಭಾಗವಾಗಿದ್ದರು ಮತ್ತು ಅವರು ಬೌಲ್ ಕೂಡ ಮಾಡಬಲ್ಲರು. ನಿಮಗೆ ಆಲ್‌ರೌಂಡರ್, ಎರಡೂ ಕೌಶಲಗಳನ್ನು ಹೊಂದಿರುವ ಆಟಗಾರ ಬೇಕಾದರೆ, ರಿಯಾನ್ ಪರಾಗ್ ಅದಕ್ಕೆ ಸೂಕ್ತ. ಆದಾಗ್ಯೂ, ನನ್ನ ಮೊದಲ ಆಯ್ಕೆ ಶ್ರೇಯಸ್ ಅಯ್ಯರ್," ಎಂದರು.
Tilak Verma is injured and could even miss out on the T20 World Cup. Who could replace him in the squad? Here are my picks. What’s yours? #cricket pic.twitter.com/ap0CwWYCki
— Aakash Chopra (@cricketaakash) January 8, 2026
"ಜಿತೇಶ್ ಶರ್ಮಾ ಅವರನ್ನು ನೀವು ಹೊರಗಿನ ಅವಕಾಶವೆಂದು ಪರಿಗಣಿಸಬಹುದು, ಏಕೆಂದರೆ ನಿಮಗೆ ಇನ್ನೂ ಆರಂಭಿಕ ಆಟಗಾರ ಇಲ್ಲ. ಋತುರಾಜ್ ಗಾಯಕ್ವಾಡ್ ಅಲ್ಲ, ಶುಭಮನ್ ಗಿಲ್ ಅಲ್ಲ, ಯಶಸ್ವಿ ಜೈಸ್ವಾಲ್ ಅಲ್ಲ. ನಾನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ನನ್ನು ಹುಡುಕುತ್ತಿದ್ದೇನೆ. ಜಿತೇಶ್ ಶರ್ಮಾ ಇತ್ತೀಚೆಗೆ ತಂಡದಲ್ಲಿದ್ದರು. ಅವರು ವಿಕೆಟ್ ಕೀಪರ್ ಮತ್ತು ನಿಮಗೆ ಮೂವರು ವಿಕೆಟ್ ಕೀಪರ್‌ಗಳು ಅಗತ್ಯವಿಲ್ಲ ಎಂಬುದು ಅವರಿಗೆ ವಿರುದ್ಧವಾಗಿತ್ತು. ಆದ್ದರಿಂದ ನಾನು ಶ್ರೇಯಸ್ ಅಯ್ಯರ್ ಅವರನ್ನು ಸೂಚಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.