ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ (IND vs ENG) ತೀವ್ರ ಕೂತೂಹಲವನ್ನು ಕೆರಳಿಸಿದೆ. ಮೂರನೇ ದಿನವಾದ ಶನಿವಾರ ಕೆಎಲ್ ರಾಹುಲ್ (KL rahul) ಶತಕ ಮತ್ತು ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravidra Jadeja) ಅವರ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆತೀಥೇಯ ಇಂಗ್ಲೆಂಡ್ ತಂಡದ ಮೊತ್ತವನ್ನು ಸರಿದೂಗಿಸಿತು. ಮುನ್ನಡೆ ಸಾಧಿಸುವ ಅವಕಾಶವಿದ್ದರೂ ಭಾರತ ತಂಡ, ಕೆಳ ಕ್ರಮಾಂಕದ ಕುಸಿತದಿಂದಾಗಿ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ಕೈಚೆಲ್ಲಿಕೊಂಡಿತು.
ಮೂರನೇ ದಿನ ಬೆಳಗ್ಗೆ ಮೂರು ವಿಕೆಟ್ ನಷ್ಟಕ್ಕೆ 145 ರನ್‌ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ್ದ ಭಾರತ ತಂಡ ಉತ್ತಮ ಆರಂಭವನ್ನು ಕಂಡಿತ್ತು. ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಮೂರನೇ ದಿನವೂ ಉತ್ತಮ ಆಟವನ್ನು ಪ್ರದರ್ಶಿಸಿದರು. ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 141 ರನ್‌ಗಳನ್ನು ಕಲೆ ಹಾಕಿದ್ದರು. ಗಾಯದ ಹೊರತಾಗಿಯೂ ಪಂತ್, ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದರು. ಇವರು ಆಡಿದ 112 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಆ ಮೂಲಕ ಮತ್ತೊಂದು ಶತಕವನ್ನು ಸಿಡಿಸುವ ಭರವಸೆ ಮೂಡಿಸಿದ್ದರು. ಆದರೆ, ಭೋಜನ ವಿರಾಮಕ್ಕೂ ಮುನ್ನ ಕೆಎಲ್ ರಾಹುಲ್ ಅವರ ಅನಿರೀಕ್ಷಿತ ಕರೆಯಿಂದ ಪಂತ ರನ್‌ಔಟ್ ಆದರು. ಆ ಮೂಲಕ ಬೇಸರದೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
IND vs ENG: ಚೆಂಡು ಬದಲಿಸುವಾಗ ಸಮಯ ವ್ಯರ್ಥ ಮಾಡಿದ ಅಂಪೈರ್ ವಿರುದ್ಧ ರವಿ ಶಾಸ್ತ್ರಿ ಕಿಡಿ!
ಕೆಎಲ್ ರಾಹುಲ್ ಭರ್ಜರಿ ಶತಕ
ಭೋಜನ ವಿರಾಮ ಮುಗಿಸಿಕೊಂಡು ಕ್ರೀಸ್‌ಗೆ ಬಂದ ಕೆಎಲ್ ರಾಹುಲ್, ತಮ್ಮ ಶತಕವನ್ನು ಪೂರ್ಣಗೊಳಿಸಲು ಇನ್ನು ಕೇವಲ ಒಂದೇ ಒಂದು ರನ್ ಬಾಕಿ ಇತ್ತು. ಅದರಂತೆ ಕ್ರೀಸ್‌ಗೆ ಬಂದ ತಕ್ಷಣ ಒಂದು ರನ್ ಗಳಿಸಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 10ನೇ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಲಾರ್ಡ್ಸ್ ಅಂಗಣದಲ್ಲಿ ಎರಡನೇ ಶತಕವನ್ನು ಸಿಡಿಸಿದರು. ಆ ಮೂಲಕ ಲಾರ್ಡ್ಸ್ ಅಂಗಣದಲ್ಲಿ ಎರಡು ಶತಕವನ್ನು ಸಿಡಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಬರೆದರು.
ರವೀಂದ್ರ ಜಡೇಜಾ ಅರ್ಧಶತಕ
ಕಳೆದ ಪಂದ್ಯದಲ್ಲಿನ ಲಯವನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿದ ರವೀಂದ್ರ ಜಡೇಜಾ ಅರ್ಧಶತಕವನ್ನು ಬಾರಿಸಿದರು. ಅವರು ಹಾಗೂ ನಿತೀಶ್ ಕುಮಾರ್ ರೆಡ್ಡಿ ದೀರ್ಘಾವಧಿ ಬ್ಯಾಟ್ ಮಾಡಿ 72 ರನ್‌ಗಳ ಜೊತೆಯಾಟವನ್ನು ಆಡಿದರು. 30 ರನ್ ಗಳಿಸಿದ ಬಳಿಕ ನಿತೀಶ್ ವಿಕೆಟ್ ಒಪ್ಪಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ ರವೀಂದ್ರ ಜಡೇಜಾ, 131 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 72 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 370ರ ಗಡಿಯನ್ನು ದಾಟಿಸಿದ್ದರು. ಆದರೆ, ಅವರನ್ನು ಕ್ರಿಸ್ ವೋಕ್ಸ್ ಔಟ್ ಮಾಡಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಕೇವಲ 17 ರನ್‌ಗಳ ಅಂತರದಲ್ಲಿ ಔಟ್ ಆದರು. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 119.2 ಓವರ್‌ಗಳಿಗೆ 387 ರನ್‌ಗಳಿಗೆ ಆಲೌಟ್ ಆಯಿತು.
IND vs ENG: ಬೆನ್ ಸ್ಟೋಕ್ಸ್ ಬೌನ್ಸರ್‌ನಲ್ಲಿ ತೆಲೆಗೆ ಪೆಟ್ಟು ತಿಂದ ನಿತೀಶ್ ಕುಮಾರ್ ರೆಡ್ಡಿ!
ಇಂಗ್ಲೆಂಡ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಕ್ರಿಸ್ ವೋಕ್ಸ್ 3 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ತಲಾ ಎರಡೆರಡು ವಿಕೆಟ್ ಕಿತ್ತರು.
ಇಂಗ್ಲೆಂಡ್: 2-0
ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮೂರನೇ ದಿನದಾಟದಾಂತ್ಯಕ್ಕೆ ಒಂದು ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ. ಝ್ಯಾಕ್ ಕ್ರಾವ್ಲಿ ಹಾಗೂ ಬೆನ್ ಡಕೆಟ್ ಅಜೇಯರಾಗಿ ಉಳಿದಿದ್ದಾರೆ. ಮೊದಲನೇ ಓವರ್ ಬೌಲ್ ಮಾಡಿದ ಜಸ್‌ಪ್ರೀತ್‌ಬುಮ್ರಾ ವಿಕೆಟ್ ಪಡೆಯಲು ಪ್ರಯತ್ನಿಸಿದರು. ಆದರೆ, ಇವರ ಯೋಜನೆ ಸಕಾರವಾಗಲಿಲ್ಲ. ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲ್‌ಔಟ್ ಆಗಿತ್ತು.