ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಹೇಗಿರಲಿದೆ? ಸಂಭಾವ್ಯ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಎಲ್ಲಾ ಪಂದ್ಯಗಳಲ್ಲೂ ಆಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆಯ್ಕೆ ಸಮಿತಿ ತಂಡದ ಸಂಯೋಜನೆಗೆ ಆದ್ಯತೆ ನೀಡುವ ನಿರೀಕ್ಷೆಯಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ.

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ (IND vs NZ) ಮುಕ್ತಾಯದ ಬಳಿಕ ಭಾರತ ತಂಡ ತವರಿನಲ್ಲಿ ಸುದೀರ್ಘ ಕ್ರಿಕೆಟ್ ಋತುವಿಗೆ ಸಜ್ಜಾಗುತ್ತಿದೆ. ಡಿಸೆಂಬರ್ 13ರಿಂದ 27ರವರೆಗೆ ಶ್ರೀಲಂಕಾ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಗಳು (IND vs SL) ನಡೆಯಲಿದೆ. ಇದಾದ ಬಳಿಕ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಆಡಲಿದೆ.

ಮುಂದಿನ ವರ್ಷ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಈ ಸರಣಿಗಳು ಮಹತ್ವದ್ದಾಗಿವೆ. ಅದರಲ್ಲೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯು ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ನಡೆಯುವ ಕೊನೆಯ ಏಕದಿನ ಸರಣಿಯಾಗುವ ಸಾಧ್ಯತೆಯಿದೆ.

ಪ್ರಜ್ಞಾನ್ ಓಜಾ ನೇತೃತ್ವದ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅಲ್ಲದೆ, ಇದೇ ತಂಡವನ್ನು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ಮುಂದುವರಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಹೇಗಿರಬಹುದು ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ.

IND v NZ: ಅರ್ಧಶತಕದ ಬಳಿಕ ಧ್ರುವ್ ಜುರೆಲ್ ಸೆಲ್ಯೂಟ್ ಮಾಡೋದ್ಯಾಕೆ? ಇಲ್ಲಿದೆ ಬಲವಾದ ಕಾರಣ!

ಆರಂಭಿಕರು: ರೋಹಿತ್ ಶರ್ಮಾ, ಶುಭಮನ್ ಗಿಲ್‌ಗೆ ಸ್ಥಾನ

ಭಾರತದ ಅನುಭವಿ ಆಟಗಾರ ರೋಹಿತ್ ಶರ್ಮಾ ಹಾಗೂ ನಾಯಕ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಮತ್ತೊಮ್ಮೆ ಅವಕಾಶ ಕೈತಪ್ಪುವ ಸಾಧ್ಯತೆಯಿದೆ.

ಸೀಮಿತ ಅವಕಾಶಗಳಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿರುವ ಕೇವಲ ಆರು ಏಕದಿನ ಇನಿಂಗ್ಸ್‌ಗಳಲ್ಲಿ ಎರಡು ಶತಕಗಳನ್ನು ಸಿಡಿಸಿದ್ದಾರೆ. ಆದರೂ 2027ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ಅವರಿಗೆ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.

ಮಧ್ಯಮ ಕ್ರಮಾಂಕ: ಕೊಹ್ಲಿ, ಅಯ್ಯರ್‌ಗೆ ಸ್ಥಾನ

ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ ಮಾಡುವುದು ಖಚಿತ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವ ನಿರೀಕ್ಷೆಯಿದೆ. ಇದರ ನಡುವೆ ಋತುರಾಜ್ ಗಾಯಕ್ವಾಡ್ ಏಕದಿನ ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಮರಳಿದ್ದ ಗಾಯಕ್ವಾಡ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಇನಿಂಗ್ಸ್‌ಗಳಿಂದ ಕೇವಲ 23 ರನ್ ಗಳಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ ಅವರಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.

ಭಾರತ ತಂಡದಿಂದ ನನ್ನನ್ನು ಕಿತ್ತರು, ನನ್ನ ಬ್ಯಾಟಿಂಗ್‌ನಲ್ಲಿ ತಪ್ಪೇನಿತ್ತೆಂದು ಗೊತ್ತಿಲ್ಲ: ಸೂರ್ಯಕುಮಾರ್‌ ಅಳಲು!

ಆಲ್‌ರೌಂಡರ್‌ಗಳು: ಹರ್ಷಿತ್ ರಾಣಾ ಕಮ್‌ಬ್ಯಾಕ್ ಸಾಧ್ಯತೆ

ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಹಾಗೂ ಆಲ್‌ರೌಂಡರ್ ಹರ್ಷಿತ್ ರಾಣಾ ಏಕದಿನ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಇತ್ತೀಚೆಗೆ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಎ ತಂಡದ ಪರ ಆಡುವ ಮೂಲಕ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಇನ್ನು ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಇಬ್ಬರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, 2026ರ ಐಪಿಎಲ್ ಬಳಿಕ ಏಕದಿನ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಮತ್ತೆ ತಂಡಕ್ಕೆ ಮರಳುವುದು ಅನುಮಾನ ಎನ್ನಲಾಗಿದೆ.

ವಿಕೆಟ್ ಕೀಪರ್‌ಗಳು: ರಾಹುಲ್, ಇಶಾನ್‌ಗೆ ಅವಕಾಶ

ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ತಂಡದ ಇಬ್ಬರು ವಿಕೆಟ್ ಕೀಪರ್‌ಗಳಾಗುವ ಸಾಧ್ಯತೆಯಿದೆ. ರಾಹುಲ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, ಇಶಾನ್ ಕಿಶನ್ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಬಹುದು. ವಿಶೇಷವೆಂದರೆ, ಈ ಇಬ್ಬರೂ ಆಟಗಾರರು ಆರಂಭಿಕ ಬ್ಯಾಟರ್‌ಗಳಾಗಿಯೂ ಆಡಬಲ್ಲರು. ಹೀಗಾಗಿ ತಂಡಕ್ಕೆ ಹೆಚ್ಚುವರಿ ಬ್ಯಾಟಿಂಗ್ ಆಯ್ಕೆಯೂ ಲಭ್ಯವಾಗಲಿದೆ.

IND vs SL: ಶ್ರೀಲಂಕಾ ವಿರುದ್ಧದ ವೈಟ್‌ಬಾಲ್‌ ಸರಣಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಬಲ್ಲ ಮೂವರು ಸ್ಟಾರ್‌ ಆಟಗಾರರು!

ಬೌಲರ್‌ಗಳು: ಬುಮ್ರಾ, ಸಿರಾಜ್‌ಗೆ ಸ್ಥಾನ?

ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ಆಡುವ ಸಾಧ್ಯತೆಯಿದೆ. ಆದರೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇನ್ನು ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಗುರ್ನೂರ್‌ ಬ್ರಾರ್ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಪ್ರಮುಖ ಬೌಲರ್ ಆಗಿರಲಿದ್ದಾರೆ.

ಶ್ರೀಲಂಕಾ ಏಕದಿನ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ: ಶುಭಮನ್ ಗಿಲ್ (ನಾಯಕ) ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ನಮನ್ ಧೀರ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕೆ.ಎಲ್. ರಾಹುಲ್, ಇಶಾನ್ ಕಿಶನ್, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಗುರ್ನೂರ್‌ ಬ್ರಾರ್ ಹಾಗೂ ಕುಲ್ದೀಪ್ ಯಾದವ್