INDW vs AUSW: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಭಾರತ ವನಿತೆಯರು!
ಪ್ರಸ್ತುತ ಭಾರತೀಯ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದ ಕಾರಣ ಸೋಲು ಕಂಡಿದೆ. ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 214 ರನ್ ಕಲೆಹಾಕಿತು. ಆದರೆ, ಗುರಿ ಬೆನ್ನತ್ತಿದ ಆಸೀಸ್ ಸುಲಭವಾಗಿ ಗೆಲುವಿನ ದಡ ಸೇರಿತು.
ಭಾರತ ಮಹಿಳಾ ತಂಡಕ್ಕೆ 6 ವಿಕೆಟ್ ಸೋಲು. -
ನವದೆಹಲಿ: ಭಾರತೀಯ ಮಹಿಳಾ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಟಿ20 ಸರಣಿ ಗೆದ್ದ ಬಳಿಕ ಇದೀಗ ಮೂರು ಪಂದ್ಯಗಳ ಏಕದಿನ ಸರಣಿ (INDW vs AUSW) ಆಡುತ್ತಿದೆ. ಮಂಗಳವಾರ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಆರು ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ, ಬ್ಯಾಟಿಂಗ್ ವೈಫಲ್ಯದ ಕಾರಣ 215 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಮೃತಿ ಮಂಧಾನ (Smriti Mandhana) ಹಾಗೂ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ (India women team) ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.
ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 68 ಎಸೆತಗಳಲ್ಲಿ ಏಳು ಬೌಂಡರಿಗಳೊಂದಿಗೆ 58 ರನ್ ಗಳಿಸಿದರೆ, ಇತ್ತ ನಾಯಕಿ ಹರ್ಮನ್ ಪ್ರೀತ್ ಕೌರ್ 84 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 53 ರನ್ ಗಳಿಸಿದರು. ಆದರೆ ಇನ್ನೊಂದು ಬದಿಯಿಂದ ಬೆಂಬಲ ಸಿಗದ ಕಾರಣ ಮಂಧಾನ ಔಟಾದ ಬಳಿಕ ಉತ್ತಮ ಜೊತೆಯಾಟ ಮೂಡಿಬರಲಿಲ್ಲ.
ಟಿ20 ವಿಶ್ವಕಪ್ ರೀಲ್ ಡಿಲಿಟ್ ಮಾಡುವಂತೆ ಇನ್‌ಫ್ಲುಯೆನ್ಸರ್ ಪ್ರಿಂಸಿ ಪಾರಿಖ್‌ಗೆ ಅತ್ಯಾಚಾರದ ಬೆದರಿಕೆ!
ಆಸೀಸ್‌ಗೆ ಸುಲಭ ತುತ್ತಾದ ಭಾರತ
215 ರನ್ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮಹಿಳಾ ತಂಡ ಇನ್ನೂ 70 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತು. ತಂಡದ ಪ್ರಮುಖ ಆಟಗಾರ್ತಿಯರಾದ ಕಿಮ್ ಗರ್ತ್ ಮತ್ತು ಎಲಿಸ್ ಪೆರಿ ಅವರ ಅನುಪಸ್ಥಿತಿ ನಡುವೆಯೂ, ಬೆತ್ ಮೂನಿ ಮತ್ತು ಅಲೀಸಾ ಹೀಲಿಯವರ ಆಕರ್ಷಕ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಆರಂಭದಲ್ಲೇ ಮುಗ್ಗರಿಸಿದ ಭಾರತ
ಸ್ಮೃತಿ ಮಂಧಾನ ಅವರ ಜೊತೆ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಪ್ರತೀಕಾ ರಾವಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟ್ ಬೀಸಲು ಮೈದಾನಕ್ಕೆ ಬಂದ ಶಫಾಲಿ ವರ್ಮಾ ಅವರು ಕೂಡ ಬಹುಬೇಗನೆ ಔಟಾದ ಕಾರಣ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 50 ರನ್ ಗಡಿ ದಾಟುವ ಮುನ್ನವೇ ಜೆಮಿಮಾ ರೊಡ್ರಿಗಸ್ ಅವರೂ ಕೂಡ ವಿಕೆಟ್ ಒಪ್ಪಿಸಿದ ಕಾರಣ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು.
Australia win the 1⃣st ODI by 6 wickets.
— BCCI Women (@BCCIWomen) February 24, 2026
We shift our focus to the next match in Hobart.
Scorecard ▶️ https://t.co/yUKqC8iLON#TeamIndia | #AUSvIND pic.twitter.com/cVOLwrqqeU
ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಮಂಧಾನ
ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಬಾರಿ 50+ ರನ್ ದಾಖಲಿಸಿದ ಭಾರತದ ಏಕೈಕ ಆಟಗಾರ್ತಿ ಎಂದೆನಿಸಿಕೊಂಡರು. ಈವರೆಗೆ ಮಂಧಾನ ಅವರು ಆಸೀಸ್ ವಿರುದ್ಧ 22 ಏಕದಿನ ಪಂದ್ಯಗಳನ್ನಾಡಿದ್ದು ಏಳು ಅರ್ಧಶತಕ ಬಾರಿಸಿದ್ದಾರೆ. ಇನ್ನೂ, ಮಿಥಾಲಿ ರಾಜ್ ಬಳಿಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 1000 ರನ್ ಪೂರೈಸಿದ ಭಾರತದ ಎರಡನೇ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗಾಯಕ್ಕೆ ತುತ್ತಾದ ನಾಯಕಿ ಹರ್ಮನ್ ಪ್ರೀತ್ ಕೌರ್
ಇನ್ನೂ, ತಂಡ 215 ರನ್ ಗಡಿ ದಾಟುವಲ್ಲಿ ಅರ್ಧಶತಕ ಬಾರಿಸಿ ಪ್ರಮುಖ ಪಾತ್ರ ವಹಿಸಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಇನಿಂಗ್ಸ್ ಮಧ್ಯೆ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಹೊರನಡೆದಿರುವುದು ಭಾರತ ತಂಡಕ್ಕೆ ಆತಂಕ ಹುಟ್ಟುಹಾಕಿದೆ. ಅವರ ಮೈದಾನದಿಂದ ಹೊರನಡೆದ ಬಳಿಕ ಸ್ಮೃತಿ ಮಂಧಾನ ಅವರು ತಂಡವನ್ನು ಮುನ್ನಡೆಸಿದರು. ಸದ್ಯಕ್ಕೆ ಅವರು ಮುಂದಿನ ಪಂದ್ಯಕ್ಕೆ ಲಭ್ಯರಾಗುವ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ.