IPL 2025: ಪಂಜಾಬ್ ಕಿಂಗ್ಸ್ ವಿರುದ್ದದ ಸೋಲಿನ ಬೆನ್ನಲ್ಲೆ ಪಿಚ್ ಕ್ಯುರೇಟರ್‌ಗಳನ್ನು ದೂರಿದ ಜಹೀರ್ ಖಾನ್!
Zaheer Khan on Lucknow Pitch: ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತಂಡ ಸೋಲು ಅನುಭವಿಸಿದ ಬಳಿಕ ಲಖನೌ ಫ್ರಾಂಚೈಸಿಯ ಮೆಂಟರ್ ಜಹೀರ್ ಖಾನ್ ಅವರು ಏಕನಾ ಕ್ರಿಕೆಟ್ ಗ್ರೌಂಡ್ ಪಿಚ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತು.

ಜಹೀರ್ ಖಾನ್

ಲಖನೌ: ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಲಖನೌ ಸೂಪರ್ ಕಿಂಗ್ಸ್ ( LSG) ಸೋಲು ಅನುಭವಿಸಿದ ಬಳಿಕ ಎಲ್‌ಎಸ್‌ಜಿ ಮೆಂಟರ್ ಜಹೀರ್ ಖಾನ್ (Zaheer Khan) ಅವರು ಲಖನೌದ ಏಕನಾ ಕ್ರಿಕೆಟ್ ಗ್ರೌಂಡ್ ಪಿಚ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಏಕನಾ ಕ್ರೀಡಾಂಗಣದ ಪಿಚ್ ತವರು ಕಂಡೀಷನ್ಸ್ ರೀತಿ ಕಾಣುತ್ತಿಲ್ಲ ಎಂದು ದೂರಿದ್ದಾರೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದ ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ಎಂಟು ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಇಲ್ಲಿ ತನಕ ಆಡಿದ ಮೂರು ಪಂದ್ಯಗಳಲ್ಲಿ ಎಲ್‌ಎಸ್‌ಜಿ ತಂಡ ಒಂದರಲ್ಲಿ ಗೆದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ.
ಮಂಗಳವಾರ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 171 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಂಜಾಬ್ ಕಿಂಗ್ಸ್, 16.2 ಓವರ್‌ಗಳಿಗೆ 177 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಸತತ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
IPL 2025: ಐಪಿಎಲ್ ಅಭಿಮಾನಿಗಳಿಗೆ ಬಿಎಂಟಿಸಿಯಿಂದ ವಿಶೇಷ ಬಸ್ ಸೌಲಭ್ಯ
ಪಂದ್ಯದ ಬಳಿಕ ಮಾತನಾಡಿದ ಜಹೀರ್ ಖಾನ್, "ಇಲ್ಲಿ ನನಗೆ ತುಂಬಾ ಬೇಸರವಾದ ವಿಷಯ ಏನೆಂದರೆ, ಇದನ್ನು ತವರು ಪಂದ್ಯವೆಂದು ಪರಿಗಣಿಸುವುದು. ಈ ಐಪಿಎಲ್ ಟೂರ್ನಿಯಲ್ಲಿ ತಂಡಗಳು ತಮ್ಮ ತವರು ಅಂಗಣದ ಲಾಭವನ್ನು ಪಡೆದುಕೊಳ್ಳುತ್ತಿವೆ. ಆದರೆ, ಈ ವಿಷಯದಲ್ಲಿ ನಮಗೆ ಯಾವುದೇ ಲಾಭವಾಗಿಲ್ಲ. ಇಲ್ಲಿನ ಪಿಚ್ ಕ್ಯುರೇಟರ್‌ಗಳು ಇದನ್ನು ತವರು ಪಂದ್ಯ ಎಂಬ ರೀತಿ ಯೋಚಿಸುತ್ತಿಲ್ಲ. ಇದನ್ನು ನೋಡುತ್ತಿದ್ದರೆ ಪಂಜಾಬ್ ಪಿಚ್ ಕ್ಯುರೇಟರ್ ತರ ಕಾಣುತ್ತಿದೆ," ಎಂದು ಹೇಳಿದ್ದಾರೆ.
"ನಾನು ಕಂಡುಕೊಳ್ಳಬೇಕಾದ ಸಂಗತಿ ಇದಾಗಿದ. ಲಖನೌ ತಂಡದ ಎಲ್ಲಾ ಆಟಗಾರರು ಕೂಡ ಹೊಸಬರು. ಆದರೆ. ಇಲ್ಲಿ ಮೊದಲನೇ ಹಾಗೂ ಕೊನೆಯ ಪಂದ್ಯಗಳನ್ನು ಆಡಿದಾಗ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಇದೀಗ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಲಖನೌ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ತವರಿನಲ್ಲಿ ಮೊದಲನೇ ಪಂದ್ಯವನ್ನು ಗೆಲ್ಲುತ್ತೇವೆಂಬ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಅಂಗಣದಲ್ಲಿ ಆಗಮಿಸುತ್ತಾರೆ," ಎಂದು ಜಹೀರ್ ಖಾನ್ ತಿಳಿಸಿದ್ದಾರೆ.
IPL 2025: ಪಂತ್‌ಗೆ ಮತ್ತೆ ಎಚ್ಚರಿಕೆ ಕೊಟ್ಟ ಸಂಜೀವ್ ಗೋಯೆಂಕಾ
ಎರಡನೇ ಸ್ಥಾಕ್ಕೇರಿದ ಪಂಜಾಬ್
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ತನ್ನ ಮೊದಲನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 11 ರನ್‌ಗಳಿಂದ ಗೆದ್ದಿದ್ದ ಪಂಜಾಬ್ ಕಿಂಗ್ಸ್, ಎರಡನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ದ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದೀಗ ನಾಲ್ಕು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ಪರ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ತಲಾ ಅರ್ಧಶತಕಗಳನ್ನು ಬಾರಿಸಿದ್ದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಪ್ರಭ್‌ಸಿಮ್ರಾನ್ ಕೇವಲ 34 ಎಸೆತಗಳಲ್ಲಿ 69 ರನ್‌ಗಳನ್ನು ಸಿಡಿಸಿದ್ದರು. 9 ಬೌಂಡರಿಗಳು ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.