IPL 2025: ʻಸೋತ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿʼ-ರಿಷಭ್ ಪಂತ್‌ಗೆ ಸಂದೇಶ ರವಾನಿಸಿದ ಸುನೀಲ್ ಗವಾಸ್ಕರ್!
Sunil Gavaskar backs Rishabh Pant: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ತೀವ್ರ ನಿರಾಶೆಗೊಂಡ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್‌ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಬೆಂಬಲಿಸಿದ್ದಾರೆ. 210 ರನ್‌ಗಳ ಗುರಿ ನೀಡಿದ್ದರ ಹೊರತಾಗಿಯೂ ಡೆಲ್ಲಿ ತಂಡದ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಲಖನೌ ಬೌಲರ್‌ಗಳು ವಿಫಲವಾಗಿದ್ದರು. ಇದರ ಪರಿಣಾಮ ಎಲ್‌ಎಸ್‌ಜಿ ಸೋಲು ಅನುಭವಿಸಿತ್ತು.

ರಿಷಭ್ ಪಂತ್ ಬೆಂಬಲ ವ್ಯಕ್ತಪಡಿಸಿದ ಸುನೀಲ್ ಗವಾಸ್ಕರ್.

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಕೇವಲ ಒಂದು ವಿಕೆಟ್‌ನಿಂದ ಸೋತ ಬಳಿಕ ನಿರಾಶೆಗೆ ಒಳಗಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ (Rishabh Pant) ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಇನ್ನೂ 13 ಪಂದ್ಯಗಳು ಬಾಕಿ. ಮೊದಲನೇ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಆಡಿ ಎಂದು ಸಲಹೆ ನೀಡಿದ್ದಾರೆ. ಈ ಪಂದ್ಯದಲ್ಲಿ ರಿಷಭ್ ಪಂತ್ ಡಕ್‌ಔಟ್ ಆಗಿದ್ದರ ಜೊತೆಗೆ ಸುಲಭವಾಗಿ ಮಾಡುಬಹುದಾದ ಸ್ಟಂಪ್ ಔಟ್ ಅನ್ನು ಕೈ ಚೆಲ್ಲಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರನಾಗಿ ರಷಭ್ ಪಂತ್ ಆಡುತ್ತಿದ್ದಾರೆ. ಅವರನ್ನು ಮೆಗಾ ಹರಾಜಿನಲ್ಲಿ ಲಖನೌ ಫ್ರಾಂಚೈಸಿ 27 ಕೋಟಿ ರೂ. ಗಳಿಗೆ ಖರೀದಿಸಿತ್ತು ಹಾಗೂ ನಾಯಕತ್ವವನ್ನು ನೀಡಿದೆ. ಆದರೆ, ಮೊದಲನೇ ಪಂದ್ಯದಲ್ಲಿ ಆಡಿದ 6 ಎಸೆತಗಳನ್ನು ಆಡಿದ್ದ ರಿಷಭ್ ಪಂತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ತಂಡ 65 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಲಖನೌ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್ ಹಾಗೂ ಆಶುತೋಷ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಲಖನೌ ತಂಡದಿಂದ ಗೆಲುವನ್ನು ಕಸಿದುಕೊಂಡಿದ್ದರು.
IPL 2025: ಗೋಯೆಂಕಾ ವೈಲೆಂಟ್; ಸಪ್ಪೆ ಮೋರೆ ಹಾಕಿ ನಿಂತ ಪಂತ್
ಅಂದ ಹಾಗೆ ಕೊನೆಯ ಓವರ್‌ನಲ್ಲಿಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 6 ರನ್ ಅಗತ್ಯವಿತ್ತು ಹಾಗೂ ಲಖನೌ ಸೂಪರ್ ಜಯಂಟ್ಸ್‌ಗೆ ಕೇವಲ ಒಂದು ವಿಕೆಟ್ ಬೇಕಿತ್ತು. ಅದರಂತೆ ಶಹಬಾಝ್ ಅಹ್ಮದ್ ಎಸೆದ ಮೊದಲನೇ ಎಸೆತದಲ್ಲಿಯೇ ಮೋಹಿತ್ ಶರ್ಮಾ ಕ್ರೀಸ್‌ಗೆ ತೊರೆದಿದ್ದರು. ಆದರೆ, ಸ್ಟಂಪ್ ಔಟ್ ಮಾಡಬಹುದಾದ ಅವಕಾಶವನ್ನು ರಿಷಭ್ ಪಂತ್ ಕೈ ಚೆಲ್ಲಿದ್ದರು. ಒಂದು ವೇಳೆ ಸ್ಟಂಪ್ ಔಟ್ ಮಾಡಿದ್ದರೆ, ಎಲ್‌ಎಸ್‌ಜಿ ತಂಡ ಗೆಲ್ಲುತ್ತಿತ್ತು. ಈ ವೇಳೆ ರಿಷಭ್ ಪಂತ್ ತುಂಬಾ ನಿರಾಶೆಗೊಂಡಿರುವಂತೆ ಕಂಡಿದ್ದರು.
ವಿಶ್ವಾಸ ಕಳೆದುಕೊಳ್ಳಬೇಡಿ
"ಏನು ಮಾಡಬೇಕೆಂದು ರಿಷಭ್ ಪಂತ್‌ಗೆ ಗೊತ್ತಿದೆ. ಸಕ್ಸಸ್‌ಗಿಂತ ನಿಮ್ಮ ತಪ್ಪುಗಳಿಂದ ನೀವು ಜಾಸ್ತಿ ಕಲಿಯಬೇಕಾಗುತ್ತದೆ ಎಂದು ಪೋಸ್ಟ್ ಮ್ಯಾಚ್ ಸಂದರ್ಶನದಲ್ಲಿ ಅವರು ತಿಳಿಸಿದ್ದರು. ನೀವು ಬ್ಯಾಟಿಂಗ್‌ನಲ್ಲಿ ಚೆನ್ನಾಗಿ ಆಡಿದರೆ, ಅದು ನಿಮ್ಮನ್ನು ಹೆಚ್ಚು ಪ್ರತಿಬಿಂಬಿಸುವುದಿಲ್ಲ, ಆದರೆ ಬ್ಯಾಟಿಂಗ್ ಅಥವಾ ಬೌಲಿಂಗ್ ಉತ್ತಮ ಪ್ರದರ್ಶನ ತೋರಿಲ್ಲವಾದರೆ, ಆಗ ನೀವು ಯಾವ ಜಾಗದಲ್ಲಿ ಸುಧಾರಣೆ ಕಾಣಬೇಕೆಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇದು ಮೊದಲನೇ ಪಂದ್ಯ ಹಾಗೂ ಇನ್ನೂ 13 ಪಂದ್ಯಗಳು ಬಾಕಿ ಇವೆ," ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
IPL 2025: ʻಈ ಬಾರಿಯೂ ಕಪ್ ಗೆಲ್ಲಲ್ಲ, ಆರ್‌ಸಿಬಿಗೆ ಕೊನೆಯ ಸ್ಥಾನʼ-ಆಡಂ ಗಿಲ್‌ಕ್ರಿಸ್ಟ್ ಭವಿಷ್ಯ!
ರಿಷಭ್ ಪಂತ್ ಬುದ್ದಿವಂತಿಕೆಯ ಕ್ರಿಕೆಟಿಗ
"ರಿಷಭ್ ಪಂತ್ ಒಬ್ಬ ಬುದ್ಧಿವಂತ ಕ್ರಿಕೆಟಿಗ ಮತ್ತು ಅವರು ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆದುಕೊಂಡಿರುತ್ತಾರೆ. ಅವರಿಂದ ಸುಧಾರಿತ ಪ್ರದರ್ಶನವನ್ನು ನೋಡುತ್ತೇವೆ ಎಂದು ನಾನು ನಂಬುತ್ತೇನೆ. ಹೆಚ್ಚುವರಿಯಾಗಿ ಒಬ್ಬ ನಾಯಕ ರನ್ ಗಳಿಸಿದಾಗ ಅಥವಾ ವಿಕೆಟ್ ಪಡೆದಾಗ, ಅದು ಬೌಲಿಂಗ್ ಬದಲಾವಣೆಗಳನ್ನು ಮಾಡುವ ಮತ್ತು ಕ್ಷೇತ್ರರಕ್ಷಣೆಯನ್ನು ಹೊಂದಿಸುವಲ್ಲಿ ಅವರ ಆತ್ಮವಿಶ್ವಾಸವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ವೈಯಕ್ತಿಕವಾಗಿ ಕೆಲ ರನ್‌ಗಳನ್ನು ಕಲೆ ಹಾಕಿದ ಬಳಿಕ ನಾಯಕತ್ವವು ಇನ್ನಷ್ಟು ಖಚಿತವಾಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.