IPL 2025: ʻಈ ಬಾರಿಯೂ ಕಪ್ ಗೆಲ್ಲಲ್ಲ, ಆರ್‌ಸಿಬಿಗೆ ಕೊನೆಯ ಸ್ಥಾನʼ-ಆಡಂ ಗಿಲ್‌ಕ್ರಿಸ್ಟ್ ಭವಿಷ್ಯ!
Adam Gilchrist Prediction on RCB: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22 ರಂದು ಆರಂಭವಾಗಲಿದೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಪಂದ್ಯದ ಮೂಲಕ ಐಪಿಎಲ್‌ಗೆ ಅಧಿಕೃತ ಚಾಲನೆ ಸಿಗಲಿದೆ. ಅಂದ ಹಾಗೆ ಆರ್‌ಸಿಬಿ ತಂಡ ಈ ಟೂರ್ನಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಲಿದೆ ಎಂದು ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ಭವಿಷ್ಯ ನುಡಿದಿದ್ದಾರೆ.

ಜಾಕೋಬ್ ಬೆಥೆಲ್-ಆಡಂ ಗಿಲ್‌ಕ್ರಿಸ್ಟ್

ಬೆಂಗಳೂರು: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯುರ್ ಲೀಗ್ (IPL 2025) ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22 ರಂದು ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳು ಕಾದಾಟ ನಡೆಸುವ ಮೂಲಕ ಟೂರ್ನಿಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಾರಿ ಐಪಿಎಲ್ ಟೂರ್ನಿಯ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತಮ್ಮದೇ ಆದ ಭವಿಷ್ಯವನ್ನು ನುಡಿದಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ (Adam Gilchrist) ಅವರು ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡದ ಭವಿಷ್ಯವನ್ನು ತಿಳಿಸಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಲಿದೆ ಎಂದು ಅಭಿಮಾಣಿಗಳ ಪಾಲಿಗೆ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಆಡಂ ಗಿಲ್‌ಕ್ರಿಸ್ಟ್, "ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಸ್ಥಾನಕ್ಕೆ ಕುಸಿಯಲಿದೆ. ಇಂಗ್ಲೆಂಡ್ ಕ್ರಿಕೆಟಿಗರು ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಇದಕ್ಕೆ ಕಾರಣ. ಸಾಕಷ್ಟು ಇಂಗ್ಲಿಷ್ ಆಟಗಾರರು ಆರ್‌ಸಿಬಿ ತಂಡದಲ್ಲಿದ್ದಾರೆ," ಎಂದು ಭವಿಷ್ಯ ನುಡಿದಿದ್ದಾರೆ.
ಆಡಂ ಗಿಲ್ ಕ್ರಿಸ್ಟ್ ಪಾಡ್‌ಕಾಸ್ಟ್‌ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಭಾಗವಹಿಸಿದ್ದರು. ಆರ್‌ಸಿಬಿ ತಂಡದ ಹಿನ್ನೆಡೆಗೆ ಇಂಗ್ಲೆಂಡ್ ಆಟಗಾರರು ಕಾರಣ ಎಂದು ಹೇಳುವ ಮೂಲಕ ಗಿಲ್‌ಕಿಸ್ಟ್, ಮೈಕಲ್ ವಾನ್ ಅವರ ಕಾಲೆಳೆದಿದ್ದಾರೆ. "ನನ್ನ ಭವಿಷ್ಯ ವಿರಾಟ್ ಕೊಹ್ಲಿ ವಿರುದ್ಧ ಅಲ್ಲ,ಫ್ಯಾನ್ಸ್ ವಿರುದ್ಧವೂ ಅಲ್ಲವೇ ಅಲ್ಲ. ನೀವು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿದವರ ಬಗ್ಗೆ ಇಲ್ಲಿ ಮಾತನಾಡಬೇಕಾಗುತ್ತದೆ," ಎಂದು ಆಸೀಸ್ ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.
KKR vs RCB: ಇಂದಿನ ಆರ್‌ಸಿಬಿ-ಕೆಕೆಆರ್ ಪಂದ್ಯ ಬಹುತೇಕ ರದ್ದು!
2009ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಕ್ಕನ್ ಚಾರ್ಜರ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ವೇಳೆ ಆಡಮ್ ಗಿಲ್‌ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜಸ್ ತಂಡ, ಆರ್‌ಸಿಬಿಯನ್ನು ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಕಳೆದ ವರ್ಷ ನಡೆದಿದ್ದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರನ್ನು ಖರೀದಿಸಲು ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತವನ್ನು ಖರ್ಚು ಮಾಡಿತ್ತು. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಾಕೋಬ್ ಬೆಥೆಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಈ ಮೂವರು ಆಟಗಾರರು ಕೂಡ ಆರ್‌ಸಿಬಿ ತಂಡದ ಪ್ಲೇಯಿಂಗ್ XIನಲ್ಲಿ ಆಡುವ ಸಾಮರ್ಥ್ಯವುಳ್ಳವರಾಗಿದ್ದಾರೆ.
ಮೊದಲನೇ ಎಸೆತದಲ್ಲಿಯೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಬಲ್ಲ ಇಂಗ್ಲೆಂಡ್ ತಂಡದ ಆರಂಭಿಕ ಫಿಲ್ ಸಾಲ್ಟ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗುವಲ್ಲಿ ಫಿಲ್ ಸಾಲ್ಟ್ ಅವರು ಕೂಡ ಅದ್ಭುತ ಕೊಡುಗೆಯನ್ನು ನೀಡಿದ್ದರು. ಸುನೀಲ್ ನರೇನ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಫಿಲ್ ಸಾಲ್ಟ್ ಅಬ್ಬರಿಸಿದ್ದರು. ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್ ಅವರನ್ನು ಆರ್‌ಸಿಬಿ 11.5 ಕೋಟಿ ರೂ. ಗಳಿಗೆ ಖರೀದಿಸಿತ್ತು.
KKR vs RCB: ಕೆಕೆಆರ್-ಆರ್‌ಸಿಬಿ ಐಪಿಎಲ್ ದಾಖಲೆ ಹೇಗಿದೆ?
ಇನ್ನು ಸ್ಪೋಟಕ ಬ್ಯಾಟ್ಸ್‌ಮನ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬೆಂಗಳೂರು ಫ್ರಾಂಚೈಸಿ 8.75 ಕೋಟಿ ರೂ ಹಾಗೂ ಜಾಕೋಬ್ ಬೆಥೆಲ್ ಅವರನ್ನು 2.6 ಕೋಟಿ ರೂ. ಗಳಿಗೆ ಖರೀದಿಸಿತ್ತು.
ಡೆಲ್ಲಿ ಕ್ಯಾ;ಪಿಟಲ್ಸ್‌ಗೆ ಕೊನೆಯ ಸ್ಥಾನ
ಇದೇ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಮೈಕಲ್ ವಾನ್, 2025ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಸ್ಥಾನವನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಡೆಲ್ಲಿ ತಂಡದಲ್ಲಿ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆಂದು ನಾನು ಭಾವಿಸುವುದಿಲ್ಲ ಎಂಬ ಕಾರಣವನ್ನು ಅವರು ನೀಡಿದ್ದಾರೆ.
"ಡೆಲ್ಲಿ ಕ್ಯಾಪಿಟಲ್ಸ್ ಒಳ್ಳೆಯ ತಂಡ ಎಂದು ನಾನು ಭಾವಿಸುವುದಿಲ್ಲ. ಇದಕ್ಕೆ ಕಾರಣ ಏನೆಂದರೆ ಡೆಲ್ಲಿ ವಿಕೆಟ್‌ನಲ್ಲಿ ಅಗ್ರ ದರ್ಜೆಯ ಭಾರತೀಯ ಬ್ಯಾಟ್ಸ್‌ಮನ್‌ಗಳು
ಆಡಬೇಕಾಗುತ್ತದೆ. ಅವರ ಬಳಿ ಕೆಎಲ್ ರಾಹುಲ್ ಇದ್ದಾರೆ. ಅವರನ್ನು ಹೊರತುಪಡಿಸಿ ಭಾರತೀಯ ಗುಣಮಟ್ಟದ ಬ್ಯಾಟ್ಸ್‌ಮನ್ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ," ಎಂದು ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2025: ಕೆಕೆಆರ್ ವಿರುದ್ದ ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಮೂವರು ಆಟಗಾರರು!
ಆರ್‌ಸಿಬಿ ಹಾಗೂ ಡಿಸಿ ಎರಡೂ ತಂಡಗಳು ಕೂಡ ಐಪಿಎಲ್ ಇತಿಹಾಸದಲ್ಲಿಯೇ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿ ರನ್ನರ್ ಅಪ್ ಆಗಿತ್ತು. ಆದರೆ, ಒಮ್ಮೆಯೂ ಕಪ್ ಗೆದ್ದಿಲ್ಲವೆಂಬುದು ಅಭಿಮಾನಿಗಳ ಪಾಲಿಗೆ ಬೇಸರದ ವಿಷಯವಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಮ್ಮೆ ಪೈನಲ್‌ಗೆ ಪ್ರವೇಶ ಮಾಡಿತ್ತಾದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.