ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಯೂ ಟ್ರೋಫಿ ಗೆಲ್ಲಲಿದೆ ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್ (AB De Villiers) ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ, ಫೈನಲ್ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಸತತ ಎರಡನೇ ಬಾರಿಯೂ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣವಾಗಿ ವಿರಾಟ್ ಕೊಹ್ಲಿ ಮೇಲೆ ಮಾತ್ರ ಅವಲಂಬಿತವಾಗಿಲ್ಲ. 2011ರಿಂದ 2021ರವರೆಗೆ ಆರ್‌ಸಿಬಿ ಪರ 11 ಸೀಸನ್‌ಗಳಲ್ಲಿ ಆಡಿದ್ದ ಎಬಿ ಡಿ ವಿಲಿಯರ್ಸ್, ಇದೀಗ ವಿರಾಟ್ ಕೊಹ್ಲಿಗೆ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಂಡದಲ್ಲಿ ಈಗ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಬಲ್ಲ ಹಲವು ಆಟಗಾರರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
IPL 2026: ʻವಿರಾಟ್ ಕೊಹ್ಲಿ ಆರ್‌ಸಿಬಿಯ ಹೃದಯ ಬಡಿತʼ-ಎಬಿಡಿ ಮಾತು ಒಪ್ಪಬಹುದಾ?
“ಆರ್‌ಸಿಬಿಯ ಎಲ್ಲಾ ಹೊಣೆಗಾರಿಗೆ ನನ್ನ ಮೇಲೆ ಎಂದು ವಿರಾಟ್ ಕೊಹ್ಲಿ ಇದೀಗ ಮುಕ್ತವಾಗಿ ಆಡಬಹುದು. ಅವರ ಸುತ್ತಲೂ ಟ್ರೋಫಿಗಾಗಿ ಹೋರಾಡುವ ಆಟಗಾರರ ತಂಡ ಇದೆ. ಈ ತಂಡ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ಹೆಚ್ಚಿನ ಬದಲಾವಣೆಗಳ ಅಗತ್ಯವಿಲ್ಲ, ಇದೇ ತಂಡ ಮತ್ತೊಮ್ಮೆ ಕಿರೀಟ ಗೆಲ್ಲುವ ವಿಶ್ವಾಸ ಹೊಂದಿದೆ,” ಎಂದು ಅವರು ಜಿಯೊಹಾಟ್‌ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆರ್‌ಸಿಬಿ ತಂಡದ ಸಮತೋಲನ ಅತ್ಯುತ್ತಮವಾಗಿದೆ
ಬೆಂಗಳೂರು ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರು. ಗಳಿಗೆ ಮತ್ತು ಮಂಗೇಶ್ ಯಾದವ್ ಅವರನ್ನು 5.2 ಕೋಟಿ ರು. ಗಳಿಗೆ ಪಡೆದುಕೊಂಡಿದೆ. ಇದರ ಜೊತೆಗೆ ಜೋರ್ಡನ್ ಕಾಕ್ಸ್ ಅವರನ್ನು 75 ಲಕ್ಷ ರು. ಗಳಿಗೆ ಮತ್ತು ಜಾಕೋಬ್ ಬೆತೆಲ್ ಅವರನ್ನು 2 ಕೋಟಿ ರು. ಗಳಿಗೆ ಸೇರಿಸಿಕೊಂಡಿದೆ. ಇದರೊಂದಿಗೆ, ಯುವ ಪ್ರತಿಭೆಗಳಾದ ಸಾತ್ವಿಕ್ ದೇಶ್ವಾಲ್, ವಿಕ್ಕಿ ಒತ್ಸಾವಾಲ್ , ವಿಹಾನ್ ಮೆಲ್ಹೋತ್ರಾ ಮತ್ತು ಕಾನಿಷ್ಕ ಚೌವ್ಹಾಣ್ ಅವರನ್ನು ತಲಾ 30 ಲಕ್ಷ ರು. ಗಳಿಗೆ ತಂಡದಲ್ಲಿ ಸೇರಿಸಿಕೊಂಡಿದೆ. ಈ ಸೇರ್ಪಡೆಗಳೊಂದಿಗೆ ಆರ್‌ಸಿಬಿ ಮತ್ತಷ್ಟು ಸಮತೋಲನಗೊಂಡ ಹಾಗೂ ಬಲಿಷ್ಠ ತಂಡವಾಗಿ 2026ರ ಸೀಸನ್‌ಗೆ ಸಜ್ಜಾಗಿದೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್ ಅಸಮಾಧಾನ? ಎಚ್ ಬದ್ರಿನಾಥ್ ಹೇಳಿದ್ದಿದು!
ವಿರಾಟ್ ಕೊಹ್ಲಿ ಹೇಳಿಕೆಗೆ ಎಬಿಡಿ ಬೆಂಬಲ
ಎಬಿ ಡಿ ವಿಲಿಯರ್ಸ್ ಅವರು ವಿರಾಟ್ ಕೊಹ್ಲಿಯ ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಆರ್‌ಸಿಬಿ ಈಗ ನಿರಂತರವಾಗಿ ಟ್ರೋಫಿಗಳನ್ನು ಗೆಲ್ಲುವ ಗತಿಯಲ್ಲಿದೆ ಎಂದು ಹೇಳಿದ್ದಾರೆ.
“ಕೊಹ್ಲಿ ಡ್ರೆಸಿಂಗ್ ರೂಮ್‌ನಲ್ಲಿ ಆಗಾಗ ಹೇಳುತ್ತಿದ್ದರು — ‘ಒಮ್ಮೆ ಗೆದ್ದರೆ, ನಂತರ ಎರಡು, ಮೂರು, ನಾಲ್ಕು ಟ್ರೋಫಿಗಳನ್ನು ತ್ವರಿತವಾಗಿ ಗೆಲ್ಲಬಹುದು.’ ನಾನು ಅದನ್ನು ನಿಜವಾಗಿಯೂ ನಂಬುತ್ತೇನೆ. ಆರ್‌ಸಿಬಿ ಈಗ ಆ ಹಂತದಲ್ಲಿದೆ — ಒಂದರ ಹಿಂದೆ ಒಂದಾಗಿ ಜಯಗಳಿಸುವ ಸಾಮರ್ಥ್ಯ ಹೊಂದಿದೆ. ಬಹುಶಃ ಎರಡು ಅಥವಾ ಮೂರು ಸೀಸನ್‌ಗಳಲ್ಲಿಯೇ ನಿರಂತರವಾಗಿ ಟ್ರೋಫಿ ಗೆಲ್ಲಬಹುದು,” ಎಂದು ಅವರು ತಿಳಿಸಿದ್ದಾರೆ.