ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಸಿಬಿ ಪಂದ್ಯಕ್ಕೂ ಮೊದಲೇ ಕಮ್‌ಬ್ಯಾಕ್‌ಗೆ ಸಜ್ಜಾದ ಎಂಎಸ್‌ ಧೋನಿ!

ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಎಂಎಸ್‌ ಧೋನಿ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿರುವಂತೆ ಕಂಡುಬಂದಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ ಅಭ್ಯಾಸಕ್ಕೆ ಮರಳಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಪುಟಿದೇಳಲು ಬೇಕಿರುವ ಆತ್ಮವಿಶ್ವಾಸಕ್ಕೆ ಬೂಸ್ಟ್ ಸಿಕ್ಕಂತ್ತಾಗಿದೆ.

ಸಿಎಸ್‌ಕೆ ಮಾಜಿ ನಾಯಕ ಎಂಎಸ್‌ ಧೋನಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಚೆನ್ನೈ ಸೂಪ್‌ ಕಿಂಗ್ಸ್‌ ತಂಡ ಹೀನಾಯ ಆರಂಭ ಕಂಡಿದ್ದು, ಮಾಜಿ ಚಾಂಪಿಯನ್ಸ್‌ ಇದೀಗ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ತಂಡಕ್ಕೆ ದೊಡ್ಡ ಬೂಸ್ಟ್ ಸಿಕ್ಕಂತ್ತಾಗಿದ್ದು, ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ, ತವರಿನಲ್ಲಿ ನಡೆಯಲಿರುವ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ ಅಭ್ಯಾಸಕ್ಕೆ ಹಾಜರಾಗಿದ್ದಾರೆ. ಈ ಮೂಲಕ ಭಾನುವಾರ (ಏಪ್ರಿಲ್‌ 5) ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಹೈ-ವೋಲ್ಟೇಜ್‌ ಕದನಕ್ಕೆ ಸಿಎಸ್‌ಕೆ ಫುಲ್‌ ಪವರ್‌ನೊಂದಿಗೆ ಕಣಕ್ಕಿಳಿಯಲು ಸಮರಾಭ್ಯಾಸದಲ್ಲಿ ತೊಡಗಿದಂತ್ತಾಗಿದೆ.

ಇನ್ನು ಚೆನ್ನೈನ ಎಂ. ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಧೋನಿ ಅಭ್ಯಾಸ ನಡೆಸಿರುವುದು, ಅವರ ಗಾಯದ ಸಮಸ್ಯೆ ಮತ್ತು ಫಿಟ್ನೆಸ್‌ ಬಗ್ಗೆ ಇದ್ದ ಆತಂಕವನ್ನು ಕಡಿಮೆ ಮಾಡಿದೆ.

44 ವರ್ಷದ ಅನುಭವಿ ಆಟಗಾರ ಧೋನಿ, ರಾಜಸ್ಥಾನ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಎರಡು ವಾರಗಳ ಕಾಲ ಹೊರಗುಳಿಯಬೇಕಾಗಿತ್ತು ಎಂದು ವರದಿಯಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆದರೆ ಈಗ ಅವರು ಮತ್ತೆ ಅಭ್ಯಾಸಕ್ಕೆ ಮರಳಿರುವುದು ಸೂಪರ್‌ ಕಿಂಗ್ಸ್‌ ತಂಡಕ್ಕೆ ಧೈರ್ಯ ನೀಡಿದೆ. ಮೀನ ಖಂಡದ ಸ್ನಾಯು ಸೆಳೆತದ ಸಮಸ್ಯೆಗೆ ಧೋನಿ ತುತ್ತಾಗಿದ್ದರು.

ಇದರ ನಡುವೆ, ತಂಡಕ್ಕೆ ಇನ್ನೂ ಕೆಲವು ಆಟಗಾರರ ಗಾಯದ ಸಮಸ್ಯೆಗಳು ತಲೆನೋವಾಗಿ ಪರಿಣಮಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬೆನ್ನೆಲುಬಾಗಿ ನಿಲ್ಲಬಲ್ಲ ಆಟಗಾರ ದಕ್ಷಿಣ ಆಫ್ರಿಕಾದ ಯುವ ತಾರೆ ಡೆವಾಲ್ಡ್‌ ಬ್ರೆವಿಸ್‌ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆ. ಅಲ್ಲದೆ ವೇಗದ ಬೌಲರ್‌ ನೇಥನ್‌ ಎಲ್ಲೀಸ್‌ ಗಾಯಗೊಂಡಿರುವುದು ಕೂಡ ಬೌಲಿಂಗ್‌ ವಿಭಾಗಕ್ಕೆ ಹಿನ್ನಡೆ ತಂದೊಡ್ಡಿದೆ.

IPL 2026: ಎಎಸ್‌ ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆಗೆ ಆಘಾತ, ರಾಜಸ್ಥಾನ್‌ ರಾಯಲ್ಸ್‌ ಶುಭಾರಂಭ!

ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಮೈದಾನದಲ್ಲಿ ಕಿಟ್ ಬ್ಯಾಗ್ ಹೊತ್ತು ಬರುತ್ತಿರುವ ವಿಡಿಯೋ ಹಂಚಿಕೊಂಡಿದೆ. ಜೊತೆಗೆ ಅಧಿಕೃತ ಪ್ರಸಾರಕ ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಕೂಡ ಧೋನಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿದೆ. ಒಟ್ಟಾರೆ ಪಂಜಾಬ್‌ ವಿರುದ್ಧ ಕಣಕ್ಕಿಳಿಯದೇ ಇದ್ದರೂ, ಆರ್‌ಸಿಬಿ ವಿರುದ್ಧದ ಸೌತ್‌ ಡರ್ಬಿಯಲ್ಲಿ ಎಂಎಸ್‌ಡಿ ಆಡುವುದು ಬಹುತೇಕ ಖಾತ್ರಿಯಾದಂತ್ತಿದೆ.

IPL 2026: ಐಪಿಎಲ್‌ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್‌ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!

ಅಂದಹಾಗೆ ಐಪಿಎಲ್‌ 2026 ಟೂರ್ನಿಯಲ್ಲಿ ಸಿಎಸ್‌ಕೆ ಆಡಿದ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಬ್ಯಾಟಿಂಗ್‌ ವೈಫಲ್ಯ ಕಂಡು ಕೇವಲ 127 ರನ್ ಗಳಿಸಿ ಹೀನಾಯ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಧೋನಿ ಮರಳುವಿಕೆ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಆನೆ ಬಲ ನೀಡಲಿದೆ ಎಂಬ ನಿರೀಕ್ಷೆ ಇದೆ. 2019ರ ಬಳಿಕ ಎಂಎಸ್‌ ಧೋನಿ ತಂಡದ ಆಡುವ 11ರ ಬಳಗದಿಂದ ಹೊರಗುಳಿದದ್ದು, ಇದೇ ಮೊದಲಾಗಿತ್ತು. ಹೀಗಾಗಿ ಧೋನಿ ಆಟ ನೋಡಲು ಅಭಿಮಾನಿಗಳು ಕೂಡ ಕಾತುರದಿಂದ ಎದುರು ನೋಡುತ್ತಿದ್ದಾರೆ.