ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) 19ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 28 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಕಾದಾಟ ನಡೆಸಲಿವೆ. ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 30 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಾದಾಟ ನಡೆಸಲಿದೆ. ಅಂದ ಹಾಗೆ ಸ್ಪಿನ್ ದಿಗ್ಗಜ ಆರ್ ಅಶ್ವಿನ್ (R Ashwin), ಸಿಎಸ್‌ಕೆ ತಂಡದ ಬೆಸ್ಟ್ ಬ್ಯಾಟ್ಸ್‌ಮನ್ ಯಾರೆಂದು ಬಹಿರಂಗಪಡಿಸಿದ್ದಾರೆ. ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರು ಸಿಎಸ್‌ಕೆಯ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.
2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್ ಅವರು 82.60ರ ಸರಾಸರಿಯಲ್ಲಿ 413 ರನ್‌ಗಳನ್ನು ಬಾರಿಸಿದ್ದರು ಹಾಗೂ ಎರಡು ಶತಕಗಳು ಹಾಗೂ ಒಂದು ಅರ್ಧಶತಕವನ್ನು ಸಿಡಿಸಿದ್ದರು. ಅದೇ ಲಯವನ್ನು ಅವರು 2026ರ ಐಪಿಎಲ್ ಟೂರ್ನಿಯಲ್ಲಿಯೂ ಮುಂದುವರಿಸಲು ಬಯಸುತ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಗಾಯಕ್ವಾಡ್, ಐದು ಪಂದ್ಯಗಳ ಬಳಿಕ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ನಡೆದಿದ್ದರು. ಆದರೆ, ಈ ಬಾರಿ ಅವರು ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಗಾಯಕ್ವಾಡ್ ಮುನ್ನಡೆಸಲಿದ್ದಾರೆ.
IPL 2026: ಆರ್‌ಸಿಬಿ ಇನ್, ಸಿಎಸ್‌ಕೆ ಔಟ್! ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್ ಚೋಪ್ರಾ
ಸಿಎಸ್‌ಕೆ ತಂಡದ ಬೆಸ್ಟ್ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, "ಅತ್ಯುತ್ತಮ ಬ್ಯಾಟರ್ –ಋತುರಾಜ್ ಗಾಯಕ್ವಾಡ್. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ. ಅವರ ಪಾತ್ರ ಅಂತ್ಯದವರೆಗೆ ಕ್ರೀಸ್‌ನಲ್ಲಿ ಉಳಿಯುವುದಾಗಿದೆ. ಅವರು ಇನಿಂಗ್ಸ್‌ನ್ನು ಆಂಕರ್ ಪಾತ್ರವನ್ನು ಮಾಡುವಾಗ, ಇತರರು ಅವರ ಸುತ್ತ ಆಕ್ರಮಣಾತ್ಮಕವಾಗಿ ಆಡಬಹುದು. ಅದಕ್ಕಾಗಿ ಅವರು ಹೆಚ್ಚು ರನ್‌ಗಳನ್ನು ಗಳಿಸುವ ಸಾಧ್ಯತೆ ಇದೆ,” ಎಂದು ಹೇಳಿದ್ದಾರೆ.
ಸಿಎಸ್‌ಕೆ ತಂಡ ಸ್ಪರ್ಧಾತ್ಮಕವಾಗಿರಲು ಖಂಡಿತ ಪ್ರಯತ್ನಿಸಲಿದೆ ಮತ್ತು ಪ್ಲೇಆಫ್ ಸ್ಥಾನಕ್ಕೆ ಬಲವಾದ ಸ್ಪರ್ಧಿಯಾಗಿ ಹೊರಹೊಮ್ಮಬಹುದು. ಅಶ್ವಿನ್ ಅವರ ಮಾತಿನ ಪ್ರಕಾರ, ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಟಾಪ್-3 ಬ್ಯಾಟ್ಸ್‌ಮನ್‌ಗಳಲ್ಲಿ ಕನಿಷ್ಠ ಇಬ್ಬರು ತಲಾ 500 ರನ್‌ಗಳನ್ನು ಗಳಿಸುವುದು ಅತ್ಯವಶ್ಯಕವಾಗಿದೆ. ಇದೇ ವೇಳೆ, ಕಾಗದದ ಮೇಲೆ ಅಷ್ಟಾಗಿ ಬಲಿಷ್ಠವಾಗಿ ಕಾಣಿಸದ ಬೌಲಿಂಗ್ ದಾಳಿಯಿಂದಲೂ ಅತ್ಯುತ್ತಮ ಪ್ರದರ್ಶನ ಪಡೆಯಲು ತಂಡವು ಮಾರ್ಗಗಳನ್ನು ಕಂಡುಹಿಡಿಯಬೇಕು ಎಂದು ಅವರು ಸೇರಿಸಿದ್ದಾರೆ.
IPL 2026: ಎಸ್‌ಆರ್‌ಎಚ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ, ನುವಾನ್ ತುಷಾರ್ ಔಟ್?
“ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೂರನೇ ಅಥವಾ ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ನೀಡಲಿದೆ. ನನ್ನ ಅನಿಸಿಕೆಯಲ್ಲಿ, ಅವರು ಮೂರರಿಂದ ಆರು ಸ್ಥಾನಗಳ ನಡುವೆ ಇರುವ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. ಅವರ ಟಾಪ್-3 ಅಥವಾ ಕನಿಷ್ಠ ಇಬ್ಬರು ಬ್ಯಾಟ್ಸ್‌ಮನ್‌ಗಳು ತಲಾ 500 ರನ್‌ಗಳನ್ನು ಗಳಿಸಿದರೆ ಮತ್ತು ಬೌಲರ್‌ಗಳು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಉತ್ತಮ ಪ್ರದರ್ಶನ ನೀಡಿದರೆ, ಅವರು ಖಂಡಿತವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಬಹುದು. ಬೌಲಿಂಗ್ ದಾಳಿ ಕಾಗದದ ಮೇಲೆ ಬಲಿಷ್ಠವಾಗಿ ಕಾಣಿಸದಿದ್ದರೂ, ಹಿಂದಿನ ಸಂದರ್ಭಗಳಲ್ಲಿ ಅವರು ಕೆಲಸ ಮಾಡಬಲ್ಲ ಬೌಲರ್‌ಗಳನ್ನು ಕಂಡುಹಿಡಿದಿದ್ದಾರೆ. ಆದ್ದರಿಂದ, ಅವರು ಇನ್ನೂ ಸ್ಪರ್ಧೆಯಲ್ಲಿ ಇದ್ದಾರೆ,” ಎಂದು ಅಶ್ವಿನ್ ಹೇಳಿದರು.
“ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜಾಶ್ ಹೇಝಲ್‌ವುಡ್ ಅವರು ಬರುವುದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನವನ್ನು ತೋರಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳನ್ನು ಹಿಡಿಯಬಹುದು. ನೀವು ಆರಂಭದಲ್ಲಿ ನೆಲ ಕಚ್ಚಿದರೆ, ಕೊನೆಯಲ್ಲಿ ಮುನ್ನಡೆ ಸಾಧಿಸಲು ಆಗುವುದಿಲ್ಲ. ಹಾಗಾಗಿ ಉತ್ತಮ ಆರಂಭ ಪಡೆದರೆ, ಉತ್ತಮವಾಗಿ ಮುಗಿಸಬಹುದು," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.