IPL 2026: ಎಸ್‌ಆರ್‌ಎಚ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ, ನುವಾನ್ ತುಷಾರ್ ಔಟ್?
IPL 2026: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶ್ರೀಲಂಕಾ ತಂಡದ ನುವಾನ್ ತುಷಾರ ಅವರು 19ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆಂದು ವರದಿಯಾಗಿದೆ. ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಎನ್‌ಒಸಿ ನೀಡಲು ನಿರಾಕರಿಸಿದೆ.
2026ರ ಐಪಿಎಲ್ ಟೂರ್ನಿಯಿಂದ ನುವಾನ್ ತುಷಾರ ಔಟ್? -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಶ್ರೀಲಂಕಾ ತಂಡದ ವೇಗದ ಬೌಲರ್ ನುವಾನ್ ತುಷಾರ್ (Nuwan Thushar) ಅವರು 2026ರ ಐಪಿಎಲ್ ಟೂರ್ನಿಯಿಂದ ಹೊರ ನಡೆಯುವ ಸಾಧ್ಯತೆ ಇದೆ. ಫಿಟ್‌ನೆಸ್ ನಿಯಮಗಳ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ನುವಾನ್ ತುಷಾರಾಗೆ ಎನ್‌ಒಸಿ ನೀಡಲು ನಿರಾಕರಿಸಿದೆ ಎಂದು ವರದಿಯಾಗಿದೆ. ಹಾಗಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತವಾಗಿದೆ.
ಈ ಬೆಳವಣಿಗೆ ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ, ಏಕೆಂದರೆ ಮುಂಬರುವ ಸೀಸನ್‌ನಲ್ಲಿ ಅವರ ವಿದೇಶಿ ವೇಗದ ಬೌಲರ್ ಸೇವೆ ಅಲಭ್ಯವಾಗಬಹುದು. ವರದಿಗಳ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಹೊಸದಾಗಿ ಜಾರಿಗೊಳಿಸಿರುವ ದೈಹಿಕ ಸಾಮರ್ಥ್ಯ ಮಾನದಂಡಗಳನ್ನು ಪೂರೈಸಿದ ಆಟಗಾರರಿಗೆ ಮಾತ್ರ ವಿದೇಶಿ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತಿದೆ. ಇದು ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್ ಮಟ್ಟವನ್ನು ಹೆಚ್ಚಿಸಲು ಕೈಗೊಳ್ಳಲಾದ ಸಮಗ್ರ ಪ್ರಯತ್ನದ ಭಾಗವಾಗಿದೆ.
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್ ಹೇಝಲ್‌ವುಡ್!
ಸದ್ಯ ನುವಾನ್ ತುಷಾರ್ ಅವರು ಯಾವುದೇ ಗಾಯದ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ, ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಯಮಗಳ ಪ್ರಕಾರ ಅಗತ್ಯವಾದ ಫಿಟ್‌ನೆಸ್ ಅವರಲ್ಲಿ ಸ್ಬಲ್ಪ ವ್ಯತ್ಯಾಸವಾಗಿರಬಹುದು. ಈ ಕಾರಣದಿಂದ ನುವಾನ್‌ಗೆ ಎನ್‌ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹಿಂದೇಟು ಹಾಕುತ್ತಿರಬಹುದು. ಇದರ ಪರಿಣಾಮ ಅವರು 2026ರ ಐಪಿಎಲ್ ಟೂರ್ನಿಗೆ ಅಲಭ್ಯರಾಗಬಹುದು.
ಶ್ರೀಲಂಕಾ ಕ್ರಿಕೆಟ್ ಆಟಗಾರರು ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುವುದಕ್ಕೂ ಮುನ್ನ ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆಗಳನ್ನು ಉತ್ತೀರ್ಣರಾಗಬೇಕು ಎಂದು ನಿಯಮನ್ನು ತಿದ್ದುಪಡಿ ಮಾಡಲಾಗಿದೆ. ನುವಾನ್ ತುಷಾರ್ ಅವರ ಪಾಲ್ಗೊಳ್ಳುವಿಕೆ ಈ ಮಾನದಂಡಗಳನ್ನು ಪೂರೈಸುವುದರ ಮೇಲೆ ಅವಲಂಬಿತವಾಗಿತ್ತು. ಆದರೆ ವರದಿಗಳ ಪ್ರಕಾರ, ಅವರು ಅಗತ್ಯ ಮಟ್ಟವನ್ನು ತಲುಪಲು ವಿಫಲರಾಗಿದ್ದಾರೆ.
ಈ ನಿರ್ಧಾರವು ಶ್ರೀಲಂಕಾ ಆಟಗಾರನಿಗೆ ಆರ್ಥಿಕವಾಗಿ ಪರಿಣಾಮ ಬೀರಬಹುದಾಗಿದೆ. ಸುಮಾರು 1.6 ಕೋಟಿ ಮೌಲ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗಿನ ಒಪ್ಪಂದವನ್ನು ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕಿಂತಲೂ ಮುಖ್ಯವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸವಾಲಿನ ಅವಧಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ವೇಗದ ಬೌಲರ್ ನುವಾನ್ ತುಷಾರ್ ಅವರು 2025ರ ಏಷ್ಯಾ ಕಪ್ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಪರ ಪ್ರಮುಖ ಪಾತ್ರವಹಿಸಿದ್ದರು ಹಾಗೂ ಪ್ರಮುಖ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದರು. ಆದರೆ, ನಂತರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಅನೇಕ ಗಾಯ ಸಮಸ್ಯೆಗಳಿದ್ದರೂ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು.