ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ತಂಡ (SRH) ಇಶಾನ್ ಕಿಶನ್ (Ishan Kishan) ಅವರನ್ನು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ಹಂಗಾಮಿ ನಾಯಕನನ್ನಾಗಿ ನೇಮಿಸಿರುವ ನಿರ್ಧಾರವನ್ನು ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ ಬೆಂಬಲಿಸಿದ್ದಾರೆ. ಇಶಾನ್ ಕಿಶನ್ ಅವರ ಕಮ್‌ಬ್ಯಾಕ್ ಮಾಡಿ ನಾಯಕನಾದ ಹಾದಿಯನ್ನು ʻಸುಂದರ ಕಥೆʼಎಂದು ಅವರು ಬಣ್ಣಿಸಿದ್ದಾರೆ. ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಅವರು ಬೆನ್ನಿನ ಕೆಳಭಾಗದ ಗಾಯದ ಕಾರಣ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ದೃಢಪಡಿಸಿದೆ. ಅವರ ಅನುಪಸ್ಥಿತಿಯಲ್ಲಿ ಕಿಶನ್‌ಗೆ ಹಂಗಾಮಿ ನಾಯಕತ್ವ ನೀಡಲಾಗಿದ್ದು, ಅಭಿಷೇಕ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಎಲ್ಲಾ ಸ್ವರೂಪದಲ್ಲಿ ಮತ್ತು ವಿವಿಧ ಹಂತಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರನ ಮೇಲೆ ನಂಬಿಕೆ ಇಟ್ಟಿರುವ ಫ್ರಾಂಚೈಸಿಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ.
“ಈಗ ಇಶಾನ್ ಕಿಶನ್ ನಾಯಕನಾಗಿದ್ದಾರೆ. ಇದು ಒಂದು ಸುಂದರ ಕಥೆಯಲ್ಲವೇ? ಶಾಂತವಾಗಿ ತನ್ನ ಕೆಲಸವನ್ನು ಮಾಡುತ್ತಿದ್ದ, ತಲೆತಗ್ಗಿಸಿ ಪರಿಶ್ರಮಿಸುತ್ತಿದ್ದ ಆಟಗಾರನ ಪಯಣ ಇದು,” ಎಂದು ಆಕಾಶ್ ಚೋಪ್ರಾ ಬಣ್ಣಿಸಿದ್ದಾರೆ.
IPL 2026: ಪ್ಯಾಟ್ ಕಮಿನ್ಸ್ ಅನುಪಸ್ಥಿತಿ, ಸನ್‌ರೈಸರ್ಸ್ ಹೈದರಾಬಾದ್‌ಗೆ ಇಶಾನ್ ಕಿಶನ್ ನಾಯಕ!
“ನನ್ನ ಅಭಿಪ್ರಾಯದಲ್ಲಿ, ಅವರು ಸಂಪೂರ್ಣವಾಗಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ತಮ್ಮ ಪ್ರದರ್ಶನದ ಮೂಲಕ ಸಾಬೀತಾದ ಆಟಗಾರನನ್ನು ಆಯ್ಕೆ ಮಾಡಿದ್ದಾರೆ,” ಎಂದು ಅವರು ಸೇರಿಸಿದ್ದಾರೆ.
ಕಿಶನ್ ಅವರ ದೇಶಿ ಕ್ರಿಕೆಟ್ ಸಾಧನೆಗಳು ಮತ್ತು ಭಾರತ ತಂಡಕ್ಕೆ ಮರಳಿದ ಪಯಣವೇ ಈ ಅವಕಾಶಕ್ಕೆ ಕಾರಣವಾಗಿದೆ ಎಂದು ಚೋಪ್ರಾ ಹೇಳಿದರು.
“ಅವರು ಜಾರ್ಖಂಡ್ ತಂಡದ ಪರ ರನ್‌ಗಳನ್ನು ಗಳಿಸಿ, ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಲ್ಲಿಂದ ಅವರು ಭಾರತ ತಂಡದ ಭಾಗವಾದರು. ನಂತರ ಫಾರ್ಮ್ ಸಮಸ್ಯೆಗಳು ಎದುರಾದವು, ಪರಿಸ್ಥಿತಿಗಳು ಬದಲಾಗಿದವು, ಆದರೆ ಅವರು ಮತ್ತೆ ತಂಡಕ್ಕೆ ಮರಳಿದರು,” ಎಂದು ತಿಳಿಸಿದ್ದಾರೆ.
IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಕ್ಷರ್ ಪಟೇಲ್‌ಗೆ ಎಚ್ಚರಿಕೆ ನೀಡಿದ ಚೇತೇಶ್ವರ್ ಪೂಜಾರ!
“ಅವರು ರನ್‌ಗಳನ್ನು ಗಳಿಸುತ್ತಲೇ ಇದ್ದರು. ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್ ಸ್ಥಾನದಲ್ಲಿ ಬದಲಾವಣೆ ಬಂದರೂ ಅದಕ್ಕೆ ಹೊಂದಿಕೊಂಡು ಪ್ರದರ್ಶನ ನೀಡಿದರು. ಈಗ ಅವರು ದೊಡ್ಡ ಫ್ರಾಂಚೈಸಿಯ ನಾಯಕನಾಗಿದ್ದಾರೆ,” ಎಂದು ಆಕಾಶ್ ಚೋಪ್ರಾ ಗುಣಗಾನ ಮಾಡಿದ್ದಾರೆ.
ಇಶಾನ್ ಕಿಶನ್ ಕಮ್‌ಬ್ಯಾಕ್ ಮಾಡಿದ್ದೇಗೆ?
ಕಳೆದ ಎರಡು ವರ್ಷಗಳಲ್ಲಿ ಇಶಾನ್ ಕಿಶನ್ ಅವರ ಪಯಣ ಒಂದು “ಕೆಳಗೆ ಬಿದ್ದು ಮತ್ತೆ ಎದ್ದುಕೊಂಡ” ಕಥೆಯಂತೆ ಕಾಣುತ್ತದೆ. ಎರಡು ವರ್ಷಗಳ ಹಿಂದೆ ಭಾರತ ತಂಡದಿಂದ ಹೊರಗುಳಿದಿದ್ದರು ಹಾಗೂ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಸ್ಥಾನವನ್ನು ಕಳೆದುಕೊಂಡಿದ್ದರು. ಅಲ್ಲದೆ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವುದರ ಬದಲು ಕಿಶನ್ ಶಾಂತವಾಗಿ ಮತ್ತೆ ಪರಿಶ್ರಮದ ಮಾರ್ಗವನ್ನು ಅನುಸರಿಸಿದರು.
ʻಒಂದೇ ಒಂದು ಫೋನ್ ಕರೆ ಇಶಾನ್ ಕಿಶನ್‌ರ ಅದೃಷ್ಟ ಬದಲಿಸಿತುʼ: ಸೂರ್ಯಕುಮಾರ್ ಯಾದವ್!
ದೇಶಿ ಕ್ರಿಕೆಟ್ ಅವರ ಕೈ ಹಿಡಿಯಿತು. ಜಾರ್ಖಂಡ್ ನಾಯಕತ್ವ ವಹಿಸಿಕೊಂಡು 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಗೆದಿದ್ದಾರೆ. ಅವರು ಕೇವಲ ನಾಯಕತ್ವ ನೀಡುವುದಷ್ಟೇ ಅಲ್ಲ, ಬ್ಯಾಟಿಂಗ್‌ನಲ್ಲೂ ಪ್ರಾಬಲ್ಯ ಸಾಧಿಸಿದರು. 10 ಪಂದ್ಯಗಳಲ್ಲಿ 197 ಸ್ಟ್ರೈಕ್ ರೇಟ್‌ನೊಂದಿಗೆ 517 ರನ್‌ಗಳನ್ನು ಸಿಡಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೇ ಮೊದಲ ಬಾರಿ ಜಾರ್ಖಂಡ್ ತಂಡಕ್ಕೆ ಟಿ20 ದೇಶಿ ಟೂರ್ನಿಯನ್ನು ಗೆದ್ದುಕೊಟ್ಟಿದ್ದರು.