ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿ ಗೆದ್ದಿರುವುದು ಸೌಹಾರ್ದತೆ ಮೂಡುವ ಮುನ್ಸೂಚನೆ!

ಕಳೆದ ಕೆಲವು ವರ್ಷಗಳಿಂದ ಭಯೋತ್ಪಾದನೆಯಂತಹ ಕೃತ್ಯಗಳಿಂದ ಸುದ್ದಿಯಾಗುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಇದೀಗ ರಣಜಿ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆ ಭಯೋತ್ಪಾದಕದಂತಹ ಕೃತ್ಯಗಳೇ ಹೆಚ್ಚು ನಡೆಯುತ್ತಿದ್ದ ಈ ರಾಜ್ಯದಲ್ಲಿ ಮತ್ತೆ ಕ್ರೀಡಾ ಗಾಳಿ ಬೀಸಿದ್ದು, ಇಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಯೂರಲು ಮುನ್ನುಡಿ ಬರೆದಂತಿದೆ. ಈ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿ ಕೆ ಎನ್ ರಂಗನಾಥ್ ಚಿತ್ರದುರ್ಗ ತಮ್ಮ ಅಂಕಣದಲ್ಲಿ ವಿವರಿಸಿದ್ದಾರೆ.

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡದ ಸಂಭ್ರಮ.

ಅಂಕಣ: ಕೆ ಎನ್ ರಂಗನಾಥ್, ಚಿತ್ರದುರ್ಗ

ತುಟಿ ಸೀಳಿ ಬಿಳಿ ಹಿಮದ ಮೇಲೆ ಕಡುಗೆಂಪು ರಕ್ತ ತೊಟ್ಟಿಕ್ಕುವಷ್ಟು ಚಳಿಯಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಕಳೆದ ಹಲವು ವರ್ಷಗಳಿಂದ ಗುಂಡಿನ ದಾಳಿಗೆ ಎದೆಯರಿದು ಹರಿದ ನೆತ್ತರಿಗೆ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲ ಶಕ್ತಿಗಳಿಗೆ, ಹಿಂಸಾಚಾರಕ್ಕೆ, ಗಡಿ ಉದ್ವಿಘ್ನತೆಗೆ ಮತ್ತು ಧರ್ಮದ ಹೆಸರಿನಲ್ಲಿ ಅಧರ್ಮ ತಾಂಡವವಾಡುತ್ತಿದ್ದ ಕಾರಣಕ್ಕೆ ಸುದ್ದಿಯಾಗುತ್ತಿತ್ತು. ಆದರೆ, ಈ ಬಾರಿ ಸುದ್ದಿಯಾಗಿರುವುದು ಗುಂಡಿನ ಸದ್ದಿನಿಂದಲ್ಲ. ಕ್ರಿಕೆಟ್ ಆಟಗಾರರ ಬ್ಯಾಟ್‌-ಬಾಲ್‌ನ ಸದ್ದಿನಿಂದ. ಇದು ಭಯೋತ್ಪಾದಕರ ಕರಿ ನೆರಳಲ್ಲ. ಬದಲಾಗಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಿನುಗುತ್ತಿರುವ ಕ್ರೀಡಾ ಬೆಳಕು.

ಹೌದು, ಇಲ್ಲಿ ಕ್ರೀಡೆ ಮತ್ತೊಮ್ಮೆ ಜೀವ ಪಡೆದಿದೆ. ಕಣಿವೆ ರಾಜ್ಯದ ಕ್ರೀಡೆಯ ಇತಿಹಾಸ ಬಹಳ ದೊಡ್ಡದು. ಆದರೆ ಭಯೋತ್ಪಾದಕದಂತಹ ಶಕ್ತಿಗಳು ಇಲ್ಲಿ ಜೋರಾಗಿ ಲೊಡ ಲೊಡ ಸದ್ದು ಮಾಡುತ್ತಿದ್ದ ಕಾರಣ ಕ್ರೀಡೆಯ ಸೆಲೆ ಬತ್ತಿ ಹೋಗಿತ್ತು. ಆದರೆ ಜಮ್ಮು ಕಾಶ್ಮೀರ ತಂಡ ದೇಶಿ ಟೂರ್ನಿಯಾದ ರಣಜಿ ಟ್ರೋಫಿ ಗೆಲ್ಲುವ ಮೂಲಕ ಬತ್ತಿ ಹೋಗಿದ್ದ ದೀಪದ ಹತ್ತಿ ಮತ್ತೆ ಉರಿಯಲಾರಾಂಭಿಸಿರುವ ಮುನ್ಸೂಚನೆ ನೀಡುತ್ತಿದೆ.

ಕ್ರೀಡೆಯು ಯಾವಾಗಲೂ ಸಮಾಜದ ಕನ್ನಡಿಯಿದ್ದಂತೆ. ಎಲ್ಲಿ ಶಾಂತಿ ಸೌಹಾರ್ದಕ್ಕೆ ಜಾಗ ಇರುತ್ತದೋ ಅಲ್ಲಿ ಕ್ರೀಡೆ ಖಂಡಿತ ನೆಲೆಯೂರುತ್ತದೆ. ಯಾವಾಗ ಇಳಿ ಸಂಜೆಯ ಮೊಬ್ಬು ಕತ್ತಲಿನಂತೆ ಅಶಾಂತಿ ಆವರಿಸುತ್ತೋ ಅಂತಹ ಜಾಗಗಳಲ್ಲಿ ಕ್ರೀಡೆ ಸದ್ದಿಲ್ಲದೇ ಎದ್ದು ಓಡುತ್ತದೆ. ಕಾಶ್ಮೀರದಲ್ಲಿ ಉಂಟಾಗಿದ್ದ ದೀರ್ಘಕಾಲದ ಅಶಾಂತಿ ಕ್ರೀಡಾಂಗಣಗಳನ್ನು ಖಾಲಿ ಮಾಡಿಸಿತ್ತು. ಪ್ರತಿಭೆಗಳು ಹುಟ್ಟಿದರೂ, ಬೆಳೆಸುವ ನೆಲೆ ಇರಲಿಲ್ಲ. ಮಕ್ಕಳು ಬ್ಯಾಟ್ ಹಿಡಿಯುವುದಕ್ಕಿಂತ ಭಯೋತ್ಪಾದಕದಂತಹ ದಾರಿ ಹಿಡಿಯುತ್ತಿದ್ದದ್ದೇ ಹೆಚ್ಚು. ಇಂತಹ ಸನ್ನಿವೇಶದಲ್ಲಿ ಕಣಿವೆ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯ ಗೆದ್ದು ಚಾಂಪಿಯನ್ಸ್ ಆಗಿ ಹೊರ ಹೊಮ್ಮಿರುವುದು ಕೇವಲ ಕ್ರೀಡಾ ಸಾಧನೆ ಮಾತ್ರವಲ್ಲ. ಅಲ್ಲಿ ಸೌಹಾರ್ದತೆ ಮನೆ ಮಾಡುವ ಮುನ್ಸೂಚನೆ ಕಾಣುತ್ತಿದೆ.

T20 World Cup: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!

ಭಾರತೀಯ ದೇಶೀಯ ಕ್ರಿಕೆಟ್‌ ನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾದ ರಣಜಿ ಟ್ರೋಫಿಯ ಗರಿಯನ್ನು ಮುಡಿಗೇರಿಸಿಕೊಳ್ಳುವುದು ಯಾವುದೇ ರಾಜ್ಯದ ಕನಸು. ದಶಕಗಳಿಂದ ಕ್ರಿಕೆಟ್ ಸಂಸ್ಕೃತಿ ಗಟ್ಟಿಯಾಗಿ ನೆಲೆಗೊಂಡಿರುವ ಮಹಾರಾಷ್ಟ್ರ, ಮುಂಬೈ, ಕರ್ನಾಟಕ, ತಮಿಳುನಾಡುಗಳಂತಹ ಬಲಿಷ್ಠ ಕ್ರಿಕೆಟ್ ತಂಡಗಳ ನಡುವೆ ಕಾಶ್ಮೀರ ಚಾಂಪಿಯನ್ ಆಗಿರುವುದು ಸಣ್ಣ ವಿಚಾರವಲ್ಲ.

ಅಲ್ಲಿರುವ ವಿಶಾಲ ಕಣಿವೆಗಳು ಯುವಕರಿಗೆ "ನಿಮ್ಮ ಭವಿಷ್ಯ ಬಂದೂಕಿನಿಂದ ನುಸುಳುವ ಗುಂಡುಗಳಲ್ಲಿಲ್ಲ. ಬದಲಾಗಿ ಇಲ್ಲಿನ ಮರಗಳಿಂದ ತಯಾರಾಗುವ ಕ್ರಿಕೆಟ್ ಬ್ಯಾಟ್ ಗಳಲ್ಲಿದೆ" ಎಂಬ ಸಂದೇಶವನ್ನು ರವಾನಿಸಿದಂತಿವೆ. ಇನ್ನು ಮುಂದೆ ಸುದ್ದಿ ವಾಹಿನಿಗಳು ‘ಹಿಂಸಾಚಾರ, ಭಯೋತ್ಪಾದನೆ ಹಾಗೂ ಗುಂಡಿನ ದಾಳಿಯ ಕುರಿತ ಚರ್ಚೆಗೆ’ ಸೀಮಿತವಾಗದೆ ‘ಕ್ರೀಡಾ ವಿಶ್ಲೇಷಣೆ, ಅಮೋಘ ಸೆಂಚುರಿ, ಉತ್ತಮ ಬೌಲಿಂಗ್, ಅದ್ಭುತ ಜೊತೆಯಾಟ, ಕ್ರೀಡಾಳುಗಳ ಯಶೋಗಾಥೆಯ’ ಕುರಿತು ಸುದ್ದಿ ಪ್ರಸಾರ ಮಾಡುವ ಕಾಲ ದೂರವಿಲ್ಲ. ಇಂತಹ ಕೆಲ ಬದಲಾವಣೆಗಳು ಸೌಹಾರ್ದತೆ ಗಟ್ಟಿಯಾಗಿ ನೆಲೆಯೂರಲು ಬಹುಮುಖ್ಯ ಪಾತ್ರ ವಹಿಸುತ್ತವೆ.

ಶ್ರೀಲಂಕಾದಲ್ಲಿ ದಶಕಗಳ ಕಾಲ ಹಿಂಸಾಚಾರ ಮತ್ತು ಭಿನ್ನಾಭಿಪ್ರಾಯಗಳಿಗೆ ಸುದ್ದಿಯಾಗುತ್ತಿದ್ದ ಸಿಂಹಳ ಮತ್ತು ತಮಿಳು ಸಮುದಾಯಗಳು ಸದಾ ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳುತ್ತಿದ್ದವು. ಒಂದು ಸಮುದಾಯವನ್ನು ಕಂಡರೆ ಇನ್ನೊಂದು ಸಮುದಾಯಕ್ಕೆ ಸುತರಾಂ ಆಗುತ್ತಿರಲಿಲ್ಲ. ಆ ಬಳಿಕ ಶ್ರೀಲಂಕಾದಲ್ಲಿ ಕ್ರಿಕೆಟ್ ಸಂಸ್ಕೃತಿ ದಟ್ಟವಾಗಿ ಬೆಳೆಯಿತು. ಆ ವೇಳೆ ಉಭಯ ಸಮುದಾಯಗಳ ಆಟಗಾರರು ಒಂದೇ ತಂಡದಲ್ಲಿ ಆಡುವ ಮೂಲಕ ಅವರಲ್ಲಿ ಒಂದೊಳ್ಳೆ ಬಾಂಧವ್ಯ ಬೆಳೆಯಿತು. ಈ ಮೂಲಕ ಶ್ರೀಲಂಕಾ 1996 ವಿಶ್ವಕಪ್ ಗೆದ್ದು ತನ್ನ ರಾಷ್ಟದ ಏಕತೆಯ ಭಾವನೆಗೆ ಪುಷ್ಟಿ ನೀಡಿತು. ಹೀಗೆ ಕ್ರೀಡೆಗೆ ಎಂತಹ ಹಾವು ಮುಂಗುಸಿಗಳನ್ನು ಕೂಡ ಒಂದು ಮಾಡಿಸುವ ತಾಕತ್ತಿದೆ.

T20 World Cup: ಬೌಲಿಂಗ್‌ ವೈಫಲ್ಯ ಅನುಭವಿಸುತ್ತಿರುವ ವರುಣ್‌ ಚಕ್ರವರ್ತಿ ಬಗ್ಗೆ ವೀರೇಂದ್ರ ಸೆಹ್ವಾಗ್‌ ದೊಡ್ಡ ಹೇಳಿಕೆ!

ಇನ್ನೊಂದು ಇದೇ ರೀತಿಯ ಉದಾಹರಣೆ ನೋಡುವುದಾದರೆ, ಐರ್ಲೆಂಡ್‌ನಲ್ಲಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಸಮುದಾಯಗಳ ತಿಕ್ಕಾಟ ಮತ್ತು ಸಂಘರ್ಷದಿಂದ ಕೆಲ ವರ್ಷಗಳ ಕಾಲ ಅಲ್ಲಿ ಮಳೆಗಾಲದಲ್ಲಿ ಕೆಡಕು ಸಂಭವಿಸುವ ಮುನ್ಸೂಚನೆಯಾಗಿ ಬೀಸುವ ಕೆಟ್ಟ ತಂಗಾಳಿಯಂತಹ ಅಶಾಂತಿಯ ಗಾಳಿ ಬೀಸಿತ್ತು. ಆದರೆ ಅಲ್ಲಿ ಫುಟ್ಬಾಲ್ ಕ್ರೀಡೆ ಎರಡೂ ಸಮುದಾಯಗಳ ನಡುವೆ ಸೌಹಾರ್ದತೆ ಹುಟ್ಟಿಕೊಳ್ಳಲು ವೇದಿಕೆಯಾಯಿತು. ಕಡೆಗೆ ರಾಷ್ಟೀಯ ತಂಡಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಎರಡೂ ಸಮುದಾಯಗಳು ಒಟ್ಟಾದವು. ಹೀಗೆ ಕ್ರೀಡೆಗೆ ಒಂದು ಅಗಾಧ ಶಕ್ತಿ ಇದೆ. ಆ ಶಕ್ತಿ ಇದೀಗ ಜಮ್ಮುವಿನಲ್ಲಿ ಮನೆ ಮಾಡುತ್ತಿರುವುದು ಸಂತಸದ ವಿಚಾರ.

ಹೇಗೆ ಮಹಾಭಾರತದಲ್ಲಿರುವಂತೆ ಕುರುಕ್ಷೇತ್ರದ ರಾಣಾಂಗಣದಲ್ಲಿ ಅರ್ಜುನ ಗಾಂಡೀವವನ್ನು ಕೆಳಗಿಳಿಸುತ್ತಿದ್ದಂತೆ ಯುದ್ಧದ ದಿಕ್ಕು ಬದಲಾಯಿತು. ಇತ್ತ ಶ್ರೀ ಕೃಷ್ಣ ಪರಮಾತ್ಮ ಗೀತೋಪದೇಶ ನೀಡಿದ ಬಳಿಕ ನಿಜವಾದ ಯುದ್ಧ ಪ್ರಾರಂಭವಾಯಿತು. ಇನ್ನೂ, ರಾಮಾಯಣದಲ್ಲಿ ವನವಾಸಕ್ಕೆಂದು ಅರಣ್ಯದ ಜಾಡು ಹಿಡಿದು ಕಾನನ ಹೊಕ್ಕ ಶ್ರೀರಾಮ ನ್ಯಾಯ, ನೀತಿ, ಸತ್ಯ ಮತ್ತು ಧರ್ಮದ ದೀಪವನ್ನು ಪ್ರಕಾಶಮಾನವಾಗಿ ಬೆಳಗಿಸಿದನೋ ಹಾಗೆ ಜಮ್ಮುವಿನಲ್ಲಿ ನಿರಂತರವಾಗಿ ತಾಂಡವವಾಡುತ್ತಿದ್ದ ಭಯೋತ್ಪಾದಕ ಕೃತ್ಯಗಳಿಗೆ ಅಲ್ಲಿನ ಕ್ರೀಡೆಯ ಸದ್ದು ಸೌಹಾರ್ದತೆಯ ಗೀತೆ ಹಾಡಿ ತೆರೆ ಎಳೆದಂತೆ ಕಾಣುತ್ತಿದೆ. ರಣರಂಗವಾಗಿದ್ದ ನೆಲದಲ್ಲಿ ಇನ್ನು ಮುಂದೆ ಕ್ರೀಡೆ ಅರಳುತ್ತದೆ. ಗುಂಡು ಸ್ಫೋಟಗೊಂಡ ಸದ್ದಿನ ಬದಲು ಕ್ರೀಡಾಭಿಮಾನಿಗಳ ಕೇಕೆ, ಶಿಳ್ಳೆಗಳು ಮೊಳಗುವ ಭರವಸೆ ಇದೆ.

ಹೇಗೆ ಸೂಜಿ-ದಾರ ಜೊತೆಯಾಗಿ ಹರಿದು ಚಿಂದಿಯಾದ ಬಟ್ಟೆಗಳನ್ನು ಹೊಲಿದು ತೇಪೆ ಹಚ್ಚಿ ಒಂದು ಮಾಡುತ್ತೋ ಹಾಗೆ ಕ್ರೀಡೆ ಸಮಾಜವನ್ನು ಜೋಡಿಸಿ ಸೌಹಾರ್ದತೆಯ ಭಾವ ಮೂಡಿಸುತ್ತೆ. ಕಾಶ್ಮೀರದ ಕ್ರಿಕೆಟ್ ತಂಡ ರಣಜಿ ಟ್ರೋಫಿ ಗೆದ್ದಿರುವುದು ಒಂದು ಅಧ್ಯಾಯದ ಆರಂಭ. ಆದರೆ ಈ ಸುಂದರ ಅಧ್ಯಾಯವನ್ನು ಪಾಲನೆ ಮತ್ತು ಪೋಷಣೆ ಮಾಡುವ ಸವಾಲು ನಮ್ಮೆದುರಿಗಿದೆ. ಕ್ರೀಡೆಗೆ ಅಗತ್ಯವಿರುವ ಮೂಲ ಸೌಕರ್ಯ, ನಿರಂತರ ತರಬೇತಿ ಹಾಗೂ ಅಲ್ಲಿನ ಕ್ರಿಕೆಟ್ ಸಂಸ್ಕೃತಿಗೆ ಅಗತ್ಯವಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಭಾರತೀಯ ಕ್ರಿಕೆಟ್ ಮಂಡಳಿಯ ಕೆಲಸ. ಅಲ್ಲಿ ಕ್ರಿಕೆಟ್ ಸಂಸ್ಕೃತಿಯನ್ನು ನೆಲೆ ನಿಲ್ಲಿಸಲು ಶ್ರಮಿಸಿದರೆ ಶಾಂತಿ ತಾನಾಗಿಯೇ ಅಲ್ಲಿ ಮನೆ ಮಾಡುತ್ತದೆ.

IND vs NZ: ಜಸ್‌ಪ್ರೀತ್‌ ಬುಮ್ರಾ ತಂಡದಲ್ಲಿರುವುದು ಭಾರತದ ಅದೃಷ್ಟ ಎಂದ ಫಾಫ್‌ ಡು ಪ್ಲೆಸಿಸ್‌!

ಕಣಿವೆ ರಾಜ್ಯದ ಕ್ರೀಡಾ ಹಿನ್ನೆಲೆ

ದೇಶದ ಎಲ್ಲಾ ರಾಜ್ಯಗಳಂತೆಯೇ ಕಾಶ್ಮೀರದಲ್ಲಿ ಕ್ರಿಕೆಟ್ ಗೆ ಬಹಳ ಹಿಂದಿನಿಂದಲೂ ಮನ್ನಣೆ ಇದೆ. 1950-1960ರ ದಶಕಗಳಲ್ಲಿಯೇ ಕ್ರಿಕೆಟ್ ಇಲ್ಲಿ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಆಗಿನಿಂದಲೂ ಕಣಿವೆ ರಾಜ್ಯ ರಣಜಿ ಟ್ರೋಫಿಯಲ್ಲಿ ಸ್ಪರ್ಧೆಸುತ್ತಿದೆ. ಸ್ಪರ್ಧಿಸಿದರೂ, ಗುಂಪು ಹಂತದಲ್ಲಿಯೇ ಸೋತು ಟೂರ್ನಿಯಿಂದ ಹೊರ ಬೀಳುತ್ತಿತ್ತು. ಆದರೆ 2014-15ರ ಆವೃತ್ತಿಯಲ್ಲಿ ಕಾಶ್ಮೀರ ತಂಡ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಕ್ರಿಕೆಟ್ ಮಾತ್ರವಲ್ಲ, ಇಲ್ಲಿ ಫುಟ್ ಬಾಲ್ ಕೂಡ ಅಷ್ಟೇ ದಟ್ಟವಾಗಿ ಬೆಳೆದಿತ್ತು. ಹಿಮದ ಅಂಚಿನಲ್ಲಿರುವ ಇಲ್ಲಿ ವಿಂಟರ್ ಸೀಸನ್ ಕ್ರೀಡೆಗಳಿಗೂ ಮಹತ್ವದ ಸ್ಥಾನವಿದೆ. ಆದರೆ ಭಯೋತ್ಪಾದನೆಯಂತಹ ಕೃತ್ಯಗಳು ಸಂಭವಿಸಿದ ಕಾರಣ ಸಂಪೂರ್ಣವಾಗಿ ಅಲ್ಲದಿದ್ದರೂ ಅಲ್ಲಿನ ಬಹುತೇಕ ಕ್ರೀಡೆಗಳು ಮಕಾಡೆ ಮಲಗಿದ್ದವು. ಇಂತಹ ಸಂಕಷ್ಟದಲ್ಲೂ ಅಲ್ಲಿನ ಕ್ರೀಡಾಳುಗಳು ಅಭ್ಯಾಸ ಬಿಡಲಿಲ್ಲ. ಅದರ ಪ್ರತಿಫಲವಾಗಿ ಇಂದು ಕ್ರೀಡೆ ಜಮ್ಮುವಿನಲ್ಲಿ ಮತ್ತೆ ಉಸಿರಾಡುತ್ತಿದೆ.