ಬೆಂಗಳೂರು: ಸತತ ಎರಡನೇ ಬಾರಿ ದುಲೀಪ್ ಟ್ರೋಫಿ (Duleep Trophy 2026) ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಅನುಭವಿ ಬ್ಯಾಟರ್ ಕರುಣ್ ನಾಯರ್ (Karun Nair), ಸೋಮವಾರ ಬೆಂಗಳೂರಿನಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟ್‌ನಿಂದ ಉತ್ತರ ನೀಡಿದ್ದಾರೆ. ಪೂರ್ವ ವಲಯ ವಿರುದ್ಧದ ದುಲೀಪ್ ಟ್ರೋಫಿ ಫೈನಲ್‌ಗೆ ದಕ್ಷಿಣ ವಲಯ ತಂಡದಿಂದ ಕೈಬಿಟ್ಟ ಬಳಿಕ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಖಡಕ್ ಸಂದೇಶವನ್ನೂ ಪೋಸ್ಟ್ ಮಾಡಿದ್ದಾರೆ.
ಭಾರತ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಕರುಣ್ ನಾಯರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. (ಕ್ಯಾಪ್ಟನ್) ಕೆ. ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಕೆಎಸ್‌ಸಿಎ ಸೆಕ್ರೆಟರೀಸ್ ಇಲೆವೆನ್ ಪರ ಛತ್ತೀಸ್‌ಗಢ ವಿರುದ್ಧ 183 ಎಸೆತಗಳಲ್ಲಿ 104 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
ಕರುಣ್ ನಾಯರ್ ಶತಕ ಸಿಡಿಸಿದ ದಿನವೇ ಅವರನ್ನು ಮತ್ತೊಮ್ಮೆ ಸೌತ್ ಝೋನ್ ತಂಡದಿಂದ ಹೊರಗಿಡಲಾಗಿತ್ತು. ಚೆನ್ನೈನಲ್ಲಿ ಪೂರ್ವ ವಲಯ ವಿರುದ್ಧ ದಕ್ಷಿಣ ವಲಯ ದುಲೀಪ್ ಟ್ರೋಫಿ ಫೈನಲ್ ಪಂದ್ಯ ಆಡುತ್ತಿದೆ. ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ 708 ರನ್ ಗಳಿಸಿದ್ದು, ಇಶಾನ್ ಕಿಶನ್ 270 ರನ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಕಳೆದ ವಾರ ಉತ್ತರವಲಯ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಿಂದಲೂ ಕರುಣ್ ನಾಯರ್ ಅವರನ್ನು ಕೈಬಿಡಲಾಗಿತ್ತು. ಪ್ರಸ್ತುತ ದಕ್ಷಿಣ ವಲಯ ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರರಾಗಿರುವ ನಾಯರ್, 2025-26ರ ರಣಜಿ ಟ್ರೋಫಿ ಋತುವಿನಲ್ಲಿ ಕರ್ನಾಟಕ ಪರ 699 ರನ್ ಗಳಿಸಿದ್ದರು.
Sher-E-Punjab T20 League: ಅಭಿಷೇಕ್ ಶರ್ಮಾಗೆ ಎರಡು ಸಿಕ್ಸರ್, ಒಂದು ಬೌಂಡರಿ ಬಾರಿಸಿದ ಶುಭಮನ್ ಗಿಲ್!
'ಇದು ವಿವರಿಸಲಾಗದ ಸಂಗತಿ ಎಂದ ಕರುಣ್ ನಾಯರ್
ಸಾಮಾಜಿಕ ಜಾಲತಾಣದಲ್ಲಿ ಕರುಣ್ ನಾಯರ್ ಅವರ ತಂಡದಿಂದ ಹೊರಗಿಟ್ಟಿರುವುದನ್ನು “ವಿವರಿಸಲಾಗದ ಸಂಗತಿ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದರೆ. “ವಿವರಿಸಲಾಗದು ಎನ್ನುವುದು ಕೂಡ ಕಡಿಮೆ ಮಾತಾಗುತ್ತದೆ,” ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ವಲಯ ಕೋಚ್ ಪ್ರತಿಕ್ರಿಯೆ ಏನು?
ದಕ್ಷಿಣ ವಲಯ ತಂಡದ ಕೋಚ್ ವಿಕ್ರಮ್ ವರ್ಮಾ, ಸೆಮಿಫೈನಲ್‌ನಿಂದ ಕರುಣ್ ನಾಯರ್ ಅವರನ್ನು ಕೈಬಿಡಲು ತಂಡದ ಸಂಯೋಜನೆಯೇ ಕಾರಣ ಎಂದು ವಿವರಿಸಿದ್ದಾರೆ.
“ವಾಸ್ತವವಾಗಿ, ನಾವು ಉತ್ತಮ ಸಂಯೋಜನೆಯೊಂದಿಗೆ ತಂಡವನ್ನು ಆಯ್ಕೆ ಮಾಡಿದ್ದೇವೆ. ಪ್ರತಿಯೊಂದು ತಂಡದಲ್ಲೂ ಇಬ್ಬರು ಎಡಗೈ ಸ್ಪಿನ್ನರ್‌ಗಳಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇದ್ದರೆ ಅವರನ್ನು ಎದುರಿಸಲು ನಮಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ನಾವು ಭಾವಿಸಿದ್ದೆವು” ಎಂದು ವರ್ಮಾ ಹೇಳಿದ್ದಾರೆ.
Duleep Trophy Final: ಇಶಾನ್ ಕಿಶನ್ ದಾಖಲೆಯ ದ್ವಿಶತಕ, ಬೃಹತ್ ಮೊತ್ತ ಕಲೆಹಾಕಿದ ಪೂರ್ವ ವಲಯ!
“ಹೀಗಾಗಿ ಮತ್ತೊಮ್ಮೆ ತಂಡಕ್ಕೆ ಯಾವುದು ಉತ್ತಮ ಎಂಬುದನ್ನು ನಾವು ಪರಿಗಣಿಸಿದ್ದೇವೆ. ಇದೀಗ ದೇವದತ್ ಪಡಿಕ್ಕಲ್ ಮರಳಿರುವುದರಿಂದ ತಂಡದ ಸಂಯೋಜನೆಯ ಪ್ರಶ್ನೆಯೂ ಎದುರಾಯಿತು. ಕರುಣ್ ಅವರನ್ನು ತಂಡದಿಂದ ಹೊರಗಿಡುವುದು ತುಂಬಾ ಕಷ್ಟ. ಆದರೆ ಇದೇ ನಮ್ಮ ತಂಡದ ಸಂಯೋಜನೆಯಾಗಿದೆ,” ಎಂದು ಅವರು ತಿಳಿಸಿದ್ದಾರೆ.
ವೈಯಕ್ತಿಕ ಕಾರಣದಿಂದ ಶಿಬಿರ ತೊರೆದಿದ್ದ ನಾಯರ್
ಭಾನುವಾರ ಸಂಜೆ ಕರುಣ್ ನಾಯರ್ ಸೌತ್ ಝೋನ್ ತಂಡದ ಶಿಬಿರವನ್ನು ತೊರೆದು ಬೆಂಗಳೂರಿಗೆ ಮರಳಿದ್ದರು. ಅವರ ಗೈರಿಗೆ ವೈಯಕ್ತಿಕ ಕಾರಣ ಎಂದು ಕೋಚ್ ವಿಕ್ರಮ್ ವರ್ಮಾ ತಿಳಿಸಿದ್ದರು. “ಮನೆಯಲ್ಲಿನ ವೈಯಕ್ತಿಕ ಕಾರಣಗಳಿಂದ ಅವರು ಮರಳಿದ್ದಾರೆ. ಕುಟುಂಬದ ಕಾರಣಗಳಿಂದ ಪ್ರಯಾಣಿಸಲು ಅನುಮತಿ ಕೋರಿ ಅವರು ನಮಗೆ ಇ-ಮೇಲ್ ಮಾಡಿದ್ದರು. ನಾವು ಅವರಿಗೆ ಅನುಮತಿ ನೀಡಿದ್ದೇವೆ,” ಎಂದು ವರ್ಮಾ ಹೇಳಿದ್ದಾರೆ.