ಸುನೀಲ್ ನರೇನ್ ಔಟ್ ಮಾಡಲು ರೂಪಿಸಿದ್ದ ರಣತಂತ್ರವನ್ನು ರಿವೀಲ್ ಮಾಡಿದ ರಿಕಿ ಪಾಂಟಿಂಗ್!
Ricky Ponting on Sunil Narine's dismissal: ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಕಡಿಮೆ ಮೊತ್ತದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 16 ರನ್‌ಗಳ ರೋಚಕ ಗೆಲುವು ಪಡೆದಿತ್ತು. ಪಂದ್ಯದ ಬಳಿಕ ಅಪಾಯಕಾರಿ ಬ್ಯಾಟ್ಸ್‌ಮನ್ ಸುನೀಲ್ ನರೇನ್ ಅವರನ್ನು ಔಟ್ ಮಾಡಲು ರೂಪಿಸಿದ್ದ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂದು ಹೆಡ್ ಕೋಚ್ ರಿಕಿ ಪಾಂಟಿಂಗ್ ರಿವೀಲ್ ಮಾಡಿದ್ದಾರೆ.

ಸುನೀಲ್ ನರೇನ್-ರಿಕಿ ಪಾಂಟಿಂಗ್

ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಸುನೀಲ್ ನರೇನ್ (Sunil Narine) ಅವರನ್ನು ಔಟ್ ಮಾಡಲು ರೂಪಿಸಿದ್ದ ಬೌಲಿಂಗ್ ರಣತಂತ್ರವನ್ನು ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ (Ricky Ponting) ರಿವೀಲ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಎದುರಾಳಿ ಕೆಕೆಆರ್‌ಗೆ ಕಡಿಮೆ ಮೊತ್ತದ ಗುರಿ ನೀಡಿದ್ದರ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿಯ ಬಲದಿಂದ 16 ರನ್‌ಗಳ ರೋಚಕ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆದಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ರಿಕಿ ಪಾಂಟಿಂಗ್ ತಮ್ಮ ತಂಡದ ಬೌಲಿಂಗ್ ಪ್ಲ್ಯಾನ್ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.
ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 31ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ಕೇವಲ 111 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಈ ವೇಳೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಸುಲಭವಾಗಿ ಚೇಸ್ ಮಾಡಿ ಗೆಲ್ಲಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸುನೀಲ್ ನರೇನ್, ಕ್ವಿಂಟನ್ ಡಿ ಕಾಕ್, ಅಜಿಂಕ್ಯ ರಹಾನೆ, ಆಂಡ್ರೆ ರಸೆಲ್, ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪಂಜಾಬ್ ಕಿಂಗ್ಸ್ ಬೌಲರ್‌ಗಳ ಕಟ್ಟಿ ಹಾಕಿದ್ದರು.
ಅದರಲ್ಲಿಯೂ ವಿಶೇಷವಾಗಿ ಅಪಾಯಕಾರಿ ಬ್ಯಾಟ್ಸ್‌ಮನ್ ಸುನೀಲ್ ನರೇನ್ ಅವರನ್ನು ಮಾರ್ಕೊ ಯೆನ್ಸನ್ ಬುದ್ದಿವಂತಿಕೆಯಿಂದ ಔಟ್ ಮಾಡಿದ್ದರು. ಮಾರ್ಕೊ ಯೆನ್ಸನ್ 3 ವಿಕೆಟ್ ಕಿತ್ತರೆ, ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತರು. ಆ ಮೂಲಕ ಕೆಕೆಆರ್ ತಂಡ ಕೇವಲ 95 ರನ್‌ಗಳಿಗೆ ಆಲ್‌ಔಟ್ ಆಯಿತು. ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IPL 2025: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್ ಕಿಂಗ್ಸ್
ಸುನೀಲ್ ನರೇನ್ ವಿಕೆಟ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?
ಪಂಜಾಬ್ ಕಿಂಗ್ಸ್ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ರಿಕಿ ಪಾಂಟಿಂಗ್,"ಚೆಂಡಿನಲ್ಲಿ ಮಾರ್ಕೊ ಯೆನ್ಸನ್ ಅವರ ಆರಂಭಿಸಿದ ರೀತಿ. ಎಲ್ಲಿದ್ದೀರಾ ಮಾರ್ಕೊ? ಎಲ್ಲಾ ಪಂದ್ಯದಂತೆ ಈ ಪಂದ್ಯದ ಬೌಲಿಂಗ್ ಬಗ್ಗೆಯೂ ಇವತ್ತಿನ ಮೀಟಿಂಗ್‌ನಲ್ಲಿ ಮಾತನಾಡಬೇಕು. ಅಂದ ಹಾಗೆ ಸುನೀಲ್ ನರೇನ್ ಅವರನ್ನು ಮಾರ್ಕೊ 5 ಎಸೆತಗಳಲ್ಲಿ ಎರಡು ಬಾರಿ ಔಟ್ ಮಾಡಿದ್ದರು ಅಲ್ವಾ? ಬ್ರೇಕ್‌ನಲ್ಲಿ ನಾವು ನಾಯಕನ ಬಳಿ ಮಾತನಾಡಿದ್ದೆವು. ನರೇನ್ ಅವರನ್ನು ಔಟ್ ಮಾಡಲು ಮಾರ್ಕೊ ಮೊದಲ ಓವರ್ ಬೌಲ್ ಮಾಡಬೇಕೆಂಬ ಯೋಜನೆಯನ್ನು ಅವರು (ಶ್ರೇಯಸ್ ಅಯ್ಯರ್) ಹೊಂದಿದ್ದರು. ಎರಡನೇ ಓವರ್ ಯಾರೇ ಬೌಲ್ ಮಾಡಿದರೂ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಬೇಕೆಂಬ ಪ್ಲ್ಯಾನ್ ಇತ್ತು ಹಾಗೂ ಇದು ಒಳ್ಳೆಯ ಕ್ಯಾಚ್,"ಎಂದು ತಿಳಿಸಿದ್ದಾರೆ.
𝑾𝒆 𝒃𝒆𝒍𝒊𝒆𝒗𝒆𝒅 𝒕𝒉𝒆𝒓𝒆 𝒘𝒂𝒔 𝒂 𝒘𝒂𝒚 𝒕𝒐 𝒘𝒊𝒏, 𝒂𝒏𝒅 𝒘𝒆 𝒎𝒂𝒅𝒆 𝒊𝒕 𝒉𝒂𝒑𝒑𝒆𝒏! ✅💪 pic.twitter.com/SfXix4H4r1
— Punjab Kings (@PunjabKingsIPL) April 16, 2025
ಮೊದಲನೇ ಓವರ್‌ನ ಕೊನೆಯ ಎಸೆತದಲ್ಲಿ ಸುನೀಲ್ ನರೇನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್ ಇಟ್ಟಿದ್ದ ನಂಬಿಕೆನ್ನು ಮಾರ್ಕೊ ಯೆನ್ಸನ್ ಉಳಿಸಿಕೊಂಡಿದ್ದರು. ಇದಾದ ಬಳಿಕ ಅವರು ಹರ್ಷಿತ್ ರಾಣಾ ಹಾಗೂ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿದ್ದರು. ತಾವು ಬೌಲ್ ಮಾಡಿದ 3.1 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಅಂತಿಮವಾಗಿ ಕೆಕೆಆರ್ 95ಕ್ಕೆ ಆಲ್‌ಔಟ್ ಆಗಿತ್ತು.
"ಈ ಪಂದ್ಯದ ಫಲಿತಾಂಶದಿಂದ ನಮ್ಮ ಉದ್ದೇಶ ನಮಗೆ ಮನವರಿಕೆಯಾಗಿದೆ ಹಾಗೂ ಬಿಟ್ಟುಕೊಡದ ಮನಸ್ಥಿತಿ ಮತ್ತು ಪಂದ್ಯದಲ್ಲಿ ಉಳಿದುಕೊಳ್ಳುವುದನ್ನು ಇದು ತೋರಿಸುತ್ತದೆ. ನೀವು ಈ ಕೆಲಸವನ್ನು ಪೂರ್ಣವಾಗಿ ಮುಗಿಸಿದರೆ, ಪಂದ್ಯ ನಿಮ್ಮ ಹಾದಿಯಲ್ಲಿರುತ್ತದೆ. ಉದ್ದೇಶ ಹಾಗೂ ಶಕ್ತಿ ಹುಡುಗರಲ್ಲಿ ಇದೆ. ಒಮ್ಮೆ ಇನ್‌ಸೈಡ್ ಎಡ್ಜ್ ಆಗಿ ಚೆಂಡು ಸ್ಟಂಪ್ಸ್‌ಗೆ ಅಪ್ಪಳಿಸಿದ ಬಳಿಕ ಎಲ್ಲರ ಮನಸ್ಥಿತಿ ಬದಲಾಯಿತು, ಎಲ್ಲಾರೂ ಆಟಕ್ಕೆ ಬಂದರು. ಪಂದ್ಯದಲ್ಲಿ ಯಾವುದೇ ಸನ್ನಿವೇಶ ಇರಲಿ, ಅದನ್ನು ನೀವು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಟವನ್ನು ಆಡಬೇಕು ಹಾಗೂ ಪಂದ್ಯದ ಗೆಲುವನ್ನು ಕಂಡುಕೊಳ್ಳಬೇಕು," ಎಂದು ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ.