ಅಂತಾರಾಷ್ಟ್ರೀಯ ಕ್ರಿಕೆಟ್ ಹಠಾತ್ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್!
ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವೈದ್ಯಕೀಯ ಸಲಹೆಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಟೆಸ್ಟ್ ಹಾಗೂ 50 ಓವರ್‌ಗಳ ಏಕದಿನ ಕ್ರಿಕೆಟ್‌ನಲ್ಲಿ ಆಡುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ವಿಶೇಷವಾಗಿ ವಿಶ್ವಕಪ್ ಟೂರ್ನಿಗಳು ಮತ್ತು ಆ್ಯಷಸ್ ಸರಣಿಗಳಲ್ಲಿ ಇಂಗ್ಲೆಂಡ್ ತಂಡದ ಯಶಸ್ಸಿನಲ್ಲಿ ವುಡ್ ಪ್ರಮುಖ ಪಾತ್ರ ವಹಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮಾರ್ಕ್ ವುಡ್. -
ನವದೆಹಲಿ: ಇಂಗ್ಲೆಂಡ್‌ನ (England Cricket) ವೇಗದ ಬೌಲರ್ ಮಾರ್ಕ್ ವುಡ್ (Mark Wood) ತಮ್ಮ 36ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ. ಅತಿವೇಗದ ಬೌಲಿಂಗ್, ಸ್ಮರಣೀಯ ಪ್ರದರ್ಶನಗಳು ಹಾಗೂ ಹಲವು ವರ್ಷಗಳ ಗಾಯದ ಸಮಸ್ಯೆಗಳೊಂದಿಗೆ ಸಾಗಿದ ಅವರ ವೃತ್ತಿಜೀವನ ಇದೀಗ ಅಂತ್ಯಗೊಂಡಿದೆ. ವುಡ್ ಇಂಗ್ಲೆಂಡ್ ಪರ 38 ಟೆಸ್ಟ್ ಪಂದ್ಯಗಳಲ್ಲಿ 119 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ, ಇಂಗ್ಲೆಂಡ್‌ನ ವಿಶ್ವಕಪ್ ಮತ್ತು ಆ್ಯಷಸ್ ಸರಣಿಗಳಲ್ಲೂ ಪ್ರಮುಖ ಕೊಡುಗೆ ನೀಡಿದ್ದಾರೆ.
ಸೋಮವಾರ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ ವುಡ್, ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. “ಕಳೆದ ಒಂದು ವರ್ಷದ ಬೆಳವಣಿಗೆಗಳನ್ನು ಗಮನಿಸಿದರೆ ಈ ನಿರ್ಧಾರ ಅಚ್ಚರಿ ಎನಿಸದೇ ಇರಬಹುದು. ನನ್ನ ಒಪ್ಪಂದದ ಅಂತ್ಯದಲ್ಲಿ ಇದು ಸರಿಯಾದ ಸಮಯ ಎನಿಸುತ್ತಿದೆ,” ಎಂದು ಮಾರ್ಕ್ ವುಡ್ ತಿಳಿಸಿದ್ದಾರೆ.
IND vs JAP ನಡುವಣ ಏಕೈಕ ಪಂದ್ಯದಲ್ಲಿ ಟಾಸ್ ಗೆದ್ದು ವಿಶಿಷ್ಠ ದಾಖಲೆ ಬರೆದ ಶ್ರೇಯಸ್ ಅಯ್ಯರ್!
“ನಾನು ಯಾವಾಗಲೂ ಗಾಯದಿಂದ ಚೇತರಿಸಿಕೊಂಡು ಮರಳಿ ಬಂದು, ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಉತ್ತರ ನೀಡಲು ಪ್ರಯತ್ನಿಸಿದ್ದೇನೆ. ಆದರೆ ಈ ಬಾರಿ ನಾನು ಆ ಹೋರಾಟದಲ್ಲಿ ಸೋತಿದ್ದೇನೆ. ವೈದ್ಯರ ಸಲಹೆಯಂತೆ ಇನ್ನು ಮುಂದೆ ಟೆಸ್ಟ್ ಹಾಗೂ 50 ಓವರ್‌ಗಳ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ. ಕಳೆದ ಒಂದು ವರ್ಷದಲ್ಲಿ ಇಂಗ್ಲೆಂಡ್ ಪರ ಆಡುವ ಕನಸು ನಿಧಾನವಾಗಿ ನನ್ನಿಂದ ದೂರವಾಗಿದೆ," ಎಂದು ನೋವು ತೋಡಿಕೊಂಡ ಮಾರ್ಕ್ ವುಡ್, “ಇಂಗ್ಲೆಂಡ್ ಪರ ಆಡುವುದು ನನ್ನ ಜೀವನದಲ್ಲಿ ಸಿಗಬಹುದಾದ ಅತ್ಯಂತ ದೊಡ್ಡ ಗೌರವ ಮತ್ತು ನನ್ನ ಕನಸು ನನಸಾದ ಕ್ಷಣವಾಗಿತ್ತು,” ಎಂದು ಅವರು ಭಾವುಕರಾಗಿದ್ದಾರೆ.
2015ರಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಾರ್ಕ್ ವುಡ್, ಶೀಘ್ರದಲ್ಲೇ ತಂಡದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಗಂಟೆಗೆ ಸುಮಾರು 97 ಮೈಲುಗಳ ವೇಗದವರೆಗೆ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದ ಅವರು, ಚೆಂಡಿನ ವೇಗದ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದರು. ಆದರೆ ಅವರ ವೃತ್ತಿಜೀವನದಲ್ಲಿ ಗಾಯಗಳು ಪದೇ-ಪದೇ ಅಡ್ಡಿಯಾಗಿದ್ದವು. ಪಾದದ ಮೂಳೆ, ಮೊಣಕಾಲು ಹಾಗೂ ಮೊಣಕೈ ಗಾಯಗಳಿಂದ ಹಲವು ಬಾರಿ ತಂಡದಿಂದ ಹೊರಗುಳಿದರೂ, ಪ್ರತಿ ಬಾರಿ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿದ್ದರು.
Mark Wood has announced his retirement from international cricket
— England Cricket (@englandcricket) September 22, 2026
He always gave everything for the Three Lions, on and off the field 🦁
What a career, what a player 🙌 pic.twitter.com/d9keObjqbt
2019ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ
2019ರ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದ ವುಡ್, ಟೂರ್ನಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದರು. ಬಳಿಕ 2022ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲೂ ಅವರು ಕಾಣಿಸಿಕೊಂಡಿದ್ದರು. 2023ರ ಆ್ಯಷಸ್ ಸರಣಿಯಲ್ಲಿನ ಅವರ ಪುನರಾಗಮನವೂ ಗಮನಾರ್ಹವಾಗಿತ್ತು. ಸರಣಿಯ ಅಂತಿಮ ಮೂರು ಟೆಸ್ಟ್‌ಗಳಲ್ಲಿ 14 ವಿಕೆಟ್‌ಗಳನ್ನು ಪಡೆದು, ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ತಂಡ ಸರಣಿಯಲ್ಲಿ ತಿರುಗೇಟು ನೀಡಲು ನೆರವಾದರು.
ವುಡ್ ಇಂಗ್ಲೆಂಡ್ ಪರ 70 ಏಕದಿನ ಪಂದ್ಯಗಳಲ್ಲಿ 80 ವಿಕೆಟ್ ಹಾಗೂ 38 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 54 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅವರು ಆರನೇ ಸ್ಥಾನದಲ್ಲಿದ್ದಾರೆ.
Fast and furious 🚀
— England Cricket (@englandcricket) September 22, 2026
Our Rocketman! ❤️
Thank you, Woody 🙏 pic.twitter.com/uCQAgA3BA3
ಕೊನೆಗೂ ಗಾಯದ ವಿರುದ್ಧ ಸೋತ ವುಡ್
15 ತಿಂಗಳ ಕಾಲ ಮೊಣಕೈ ಶಸ್ತ್ರಚಿಕಿತ್ಸೆ ಹಾಗೂ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವುಡ್, ಇತ್ತೀಚಿನ ಆ್ಯಷಸ್ ಸರಣಿಯ ಪರ್ತ್ ಟೆಸ್ಟ್‌ನಲ್ಲಿ ತಂಡಕ್ಕೆ ಮರಳಿದ್ದರು. ಆದರೆ ಕೇವಲ 11 ಓವರ್‌ಗಳನ್ನು ಬೌಲ್ ಮಾಡಿದ ಬಳಿಕ ಎಡ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡ ಕಾರಣ ಮತ್ತೊಮ್ಮೆ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆ ಬಳಿಕ ಅವರು ಇಂಗ್ಲೆಂಡ್ ಪರ ಆಡಿಲ್ಲ.