ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

RCBW vs MIW: ರಿಚಾ ಘೋಷ್‌ ಏಕಾಂಗಿ ಹೋರಾಟ ವ್ಯರ್ಥ, ಮುಂಬೈ ಎದುರು ಎಡವಿದ ಆರ್‌ಸಿಬಿ!

RCBW vs MIW Match Highlights: ರಿಚಾ ಘೋಷ್‌ ಕಠಿಣ ಹೋರಾಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್‌ ಎದುರು 15 ರನ್‌ಗಳಿಂದ ಸೋಲು ಅನುಭವಿಸಿತು. ಅದ್ಭುತ ಶತಕ ಬಾರಿಸಿದ ನ್ಯಾಟ್‌ ಸೀವರ್‌ ಬ್ರಂಟ್‌ ಮುಂಬೈ ಇಂಡಿಯನ್ಸ್‌ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿಗೆ ಸೋಲು.

ವಡೋದರ: ರಿಚಾ ಘೋಷ್ ಕಠಿಣ ಹೋರಾಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ನ್ಯಾಟ್‌ ಸೀವರ್‌ ಬ್ರಂಟ್‌ (Nat Sciver-Brunt) ಚೊಚ್ಚಲ ಶತಕದ ಬಲದಿಂದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ, 15 ರನ್‌ಗಳಿಂದ ಗೆದ್ದು ಟೂರ್ನಿಯ ನಾಕ್‌ಔಟ್‌ ರೇಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹ್ಯಾಟ್ರಿಕ್‌ ಸೋಲಿಕ ಬಳಿಕ ಮೂರನೇ ಗೆಲುವು ದಾಖಲಿಸಿದ ಮುಂಬೈ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಈಗಾಗಲೇ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿರುವ ಆರ್‌ಸಿಬಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ.

ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 200 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್‌ ಒಪ್ಪಿಸಿದ ಪೆವಿಲಿಯನ್‌ ಸೇರಿದರು. ಇನ್‌ಫಾರ್ಮ್‌ ಸ್ಮೃತಿ ಮಂಧಾನಾ ಕೂಡ 6 ರನ್‌ಗೆ ಔಟ್‌ ಆದರು. ಆ ಮೂಲಕ ಆರ್‌ಸಿಬಿ 35 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.

ಜೇಸನ್‌ ಹೋಲ್ಡರ್‌ ಕಮ್‌ಬ್ಯಾಕ್‌, 2026ರ ಟಿ20 ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

ರಿಚಾ ಘೋಷ್‌ ಹೋರಾಟ ವ್ಯರ್ಥ

ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್‌ ಮಾಡಿದ ರಿಚಾ ಘೋಷ್‌, 50 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 90 ರನ್‌ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೂ ಆರ್‌ಸಿಬಿ ಕೇವಲ 15 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು. ನದಿನ್‌ ಡಿ ಕ್ಲರ್ಕ್‌ 28 ರನ್‌ ಗಳಿಸಿ ಆರ್‌ಸಿಬಿ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ ನಷ್ಟಕ್ಕೆ 184 ರನ್‌ಗಳಿಗೆ ತನ್ನ ಇನಿಂಗ್ಸ್‌ ಅನ್ನು ಮುಗಿಸಿತು. ಮುಂಬೈ ಪರ ಹೇಯ್ಲಿ ಮ್ಯಾಥ್ಯೂಸ್‌ 3 ವಿಕೆಟ್‌ ಕಿತ್ತರೆ, ಶಬ್ನಿಮ್‌ ಇಸ್ಮಾಯಿಲ್‌ ಹಾಗೂ ಆಮೇಲಿಯಾ ಕೆರ್‌ ತಲಾ ಎರಡು ವಿಕೆಟ್‌ ಕಿತ್ತರು.



199 ರನ್‌ ಕಲೆ ಹಾಕಿದ ಮುಂಬೈ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಯೋಜನೆಯನ್ನು ಮುಂಬೈ ಇಂಡಿಯನ್ಸ್‌ ವಿಫಲಗೊಳಿಸಿತು. ನ್ಯಾಟ್‌ ಸೀವರ್‌ ಬ್ರಂಟ್‌ ಶತಕ ಹಾಗೂ ಹೇಯ್ಲಿ ಮ್ಯಾಥ್ಯೂಸ್‌ ಅವರ ಅರ್ಧಶತಕದ ಬಲದಿಂದ ಮುಂಬೈ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 200 ರನ್‌ಗಳ ಗುರಿಯನ್ನು ನೀಡಿತು.



ಹೇಯ್ಲಿ ಮ್ಯಾಥ್ಯೂಸ್‌-ನ್ಯಾಟ್‌ ಸೀವರ್‌ ಬ್ರಂಟ್‌ ಜುಗಲ್‌ಬಂದಿ

ಮುಂಬೈ ಇಂಡಿಯನ್ಸ್‌ ತಂಡದ ಸಂಜೀವನ್‌ ಸಂಜನಾ ಅವರನ್ನು ಬೇಗ ಔಟ್‌ ಮಾಡಿದರೂ ಆರ್‌ಸಿಬಿ ಬೌಲರ್‌ಗಳು, ಎರಡನೇ ವಿಕೆಟ್‌ಗೆ 131 ರನ್‌ ಕಲೆ ಹಾಕಿದ್ದ ಹೇಯ್ಲಿ ಮ್ಯಾಥ್ಯೂಸ್‌ ಹಾಗೂ ನ್ಯಾಟ್‌ ಸೀವರ್‌ ಬ್ರಂಟ್‌ ಜೋಡಿಯನ್ನು ಬೇರ್ಪಡಿಸಲು ವಿಫಲರಾದರು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಹೇಯ್ಲಿ ಮ್ಯಾಥ್ಯೂಸ್‌, 39 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 56 ರನ್‌ಗಳನ್ನು ಕಲೆ ಹಾಕಿದರು. ನಂತರ ಅವರು ಲಾರೆನ್‌ ಬೆಲ್‌ಗೆ ಕ್ಲೀನ್‌ ಬೌಲ್ಡ್‌ ಆದರು.



ಚೊಚ್ಚಲ ಶತಕ ಬಾರಿಸಿದ ನ್ಯಾಟ್‌ ಸೀವರ್‌

ಮುಂಬೈ ಇಂಡಿಯನ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು, ನ್ಯಾಟ್‌ ಸೀವರ್‌ ಬ್ರಂಟ್‌. ಅವರು ತಮ್ಮ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಶತಕವನ್ನು ಬಾರಿಸಿದರು. ಅವರು ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಅವರು ಆಡಿದ 57 ಎಸೆತಗಳಲ್ಲಿ ಒಂದು ಶತಕ ಹಾಗೂ 16 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ತಂಡ 200ರ ಗಡಿ ದಾಟಲು ನೆರವು ನೀಡಿದ್ದರು.

ಆರ್‌ಸಿಬಿ ಪರ ಲಾರೆನ್‌ ಬೆಲ್‌ ಅವರು ಬೌಲ್‌ ಆಡಿದ ನಾಲ್ಕು ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ ಎರಡು ವಿಕೆಟ್‌ ಕಿತ್ತಿದ್ದಾರೆ. ಆದರೆ, ಇನ್ನುಳಿದ ಆರ್‌ಸಿಬಿ ಬೌಲರ್‌ಗಳು 10ಕ್ಕೂ ಅಧಿಕ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು.