ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ: ಬಾಬರ್ ಆಝಮ್ಗೆ ನಾಯಕತ್ವ, ರಿಜ್ವಾನ್ಗೆ ಕೊಕ್!
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡಕ್ಕೆ ಸಲ್ಮಾನ್ ಅಲಿ ಆಘಾ ಮತ್ತು ಅಲಿ ಉಸ್ಮಾನ್ ಮರಳಿದ್ದಾರೆ. ಮೊಹಮ್ಮದ್ ರಿಜ್ವಾನ್ ಹಾಗೂ ಇಮಾಮ್ ಉಲ್ ಹಕ್ ಅವರನ್ನು ಕೈಬಿಡಲಾಗಿದೆ. ಹೊಸ ಆಟಗಾರರಾದ ಮೊಹಮ್ಮದ್ ತಾಹಾ, ಮೊಹಮ್ಮದ್ ಸುಲೇಮಾನ್ ಮತ್ತು ಸಮೀರ್ ಮಿನ್ಹಾಸ್ಗೆ ಮೊದಲ ಅವಕಾಶ ಸಿಕ್ಕಿದ್ದು, ಬಾಬರ್ ಆಝಮ್ ನಾಯಕನಾಗಿ ಮುಂದುವರಿದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಪ್ರಕಟ. -
ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ (PAK vs SL) ಟೆಸ್ಟ್ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket team) ತಂಡವನ್ನು ಪ್ರಕಟಿಸಿದೆ. ಮಾಜಿ ನಾಯಕ ಸಲ್ಮಾನ್ ಅಲಿ ಆಘಾ ಮತ್ತು ಅಲಿ ಉಸ್ಮಾನ್ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ, ಮೂವರು ಹೊಸ ಆಟಗಾರರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್ ಉಲ್ ಹಕ್ 14 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ತಂಡದಿಂದ ತವರಿಗೆ ಕಳುಹಿಸಲಾದ ಏಳು ಆಟಗಾರರ ಪೈಕಿ ರಿಜ್ವಾನ್ ಮತ್ತು ಇಮಾಮ್ ಕೂಡ ಸೇರಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೂ ಇವರನ್ನು ಆಯ್ಕೆ ಮಾಡಲಾಗಿಲ್ಲ. ಮೊಹಮ್ಮದ್ ರಿಜ್ವಾನ್ ತಂಡದಿಂದ ಹೊರಗುಳಿದಿರುವ ವಿಚಾರ ಮತ್ತಷ್ಟು ಕುತೂಹಲ ಮೂಡಿಸಿದೆ. ಪಾಕಿಸ್ತಾನದ ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ ರಿಜ್ವಾನ್ಗೆ ಸಂಬಂಧಿಸಿದ ಪ್ರಕರಣವೊಂದರ ತನಿಖೆ ನಡೆಸುತ್ತಿದೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಮುಕ್ತಾಯದ ದಿನ ಲಂಡನ್ನಲ್ಲಿ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಮೊಬೈಲ್ ಫೋನ್ ಮರಳಿ ನೀಡುವಂತೆ ರಿಜ್ವಾನ್ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರೂ, ಅದನ್ನು ಹಿಂತಿರುಗಿಸಲು ನಿರಾಕರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿರಾಟ್ ಕೊಹ್ಲಿ ಔಟ್; ಭಾರತ ತಂಡದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XI ಆರಿಸಿದ ಅಜಿಂಕ್ಯ ರಹಾನೆ!
ಮೂವರು ಹೊಸ ಆಟಗಾರರಿಗೆ ಅವಕಾಶ
ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ತಾಹಾ, ಮೊಹಮ್ಮದ್ ಸುಲೇಮಾನ್ ಮತ್ತು ಸಮೀರ್ ಮಿನ್ಹಾಸ್ ಅವರಿಗೆ ಪಾಕಿಸ್ತಾನ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. 26ರ ವಯಸ್ಸಿನ ಎಡಗೈ ಬ್ಯಾಟರ್ ಮೊಹಮ್ಮದ್ ತಾಹಾ ಪ್ರಸಕ್ತ ಪ್ರೆಸಿಡೆಂಟ್ಸ್ ಟ್ರೋಫಿ ಗ್ರೇಡ್-1 ಟೂರ್ನಿಯಲ್ಲಿ ಏಳು ಪಂದ್ಯಗಳಿಂದ 730 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿದ್ದು, ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 225 ರನ್ ಆಗಿದೆ.
ಮೊಹಮ್ಮದ್ ಸುಲೇಮಾನ್ ಏಳು ಪಂದ್ಯಗಳಲ್ಲಿ 652 ರನ್ ಗಳಿಸಿದ್ದು, ಮೂರು ಶತಕಗಳನ್ನು ಬಾರಿಸಿದ್ದಾರೆ. ಮತ್ತೊಂದೆಡೆ, ಸಮೀರ್ ಮಿನ್ಹಾಸ್ ತಮ್ಮ ಚೊಚ್ಚಲ ಪ್ರಥಮ ದರ್ಜೆ ಕ್ರಿಕೆಟ್ ಋತುವಿನಲ್ಲಿ ಏಳು ಪಂದ್ಯಗಳಿಂದ 405 ರನ್ ಗಳಿಸಿದ್ದಾರೆ. ಅವರು ಪಾಕಿಸ್ತಾನದ ಅಂಡರ್-19 ತಂಡದ ಮೂಲಕ ಬೆಳೆದು ಬಂದಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಬಾಬರ್ ಆಝಮ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಸಲ್ಮಾನ್ ಅಲಿ ಆಘಾ ಅವರನ್ನು ಪಾಕಿಸ್ತಾನದ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 15 ಸದಸ್ಯರ ತಂಡದಲ್ಲೂ ಸ್ಥಾನ ಪಡೆದಿರಲಿಲ್ಲ. ಸಾಹಿಬ್ಜಾದಾ ಫರ್ಹಾನ್ ಅವರಿಗೆ ಟಿ20 ತಂಡದ ನಾಯಕತ್ವ ನೀಡಲಾಗಿದೆ.
181 ರನ್ ಚೇಸ್ ಮಾಡಿದ ಬಳಿಕ ಭಾರತ ತಂಡಕ್ಕೆ 3 ಪದಗಳ ಸಂದೇಶ ರವಾನಿಸಿದ ಗೌತಮ್ ಗಂಭೀರ್!
ಆದರೆ, ಟೆಸ್ಟ್ ತಂಡಕ್ಕೆ ಆಘಾ ಮರಳಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿಯೂ ಅವರು ಪಾಕಿಸ್ತಾನದ ಯೋಜನೆಯ ಭಾಗವಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯಲ್ಲಿ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದ ಎಜ್ಬಾಸ್ಟನ್ ಟೆಸ್ಟ್ಗೆ ಆಯ್ಕೆಯಾಗಿದ್ದ ಅಬ್ದುಲ್ಲಾ ಫಜಲ್, ಅರಾಫತ್ ಮಿನ್ಹಾಸ್, ರಜಾವುಲ್ಲಾ ಮತ್ತು ಸಾದ್ ಬೈಗ್ ಕೂಡ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಪಾಕಿಸ್ತಾನದ ಆಯ್ಕೆ ಸಮಿತಿ ಇನ್ನೂ ಇಬ್ಬರು ಹೆಚ್ಚುವರಿ ವೇಗದ ಬೌಲರ್ಗಳನ್ನು ತಂಡಕ್ಕೆ ಸೇರಿಸುವ ನಿರೀಕ್ಷೆಯಿದೆ. ಶ್ರೀಲಂಕಾ ಪ್ರವಾಸಿ ತಂಡದ ವಿರುದ್ಧ ಪಿಸಿಬಿ ಪ್ಯಾಟ್ರನ್ಸ್ ಇಲೆವೆನ್ನ ಮೂರು ದಿನಗಳ ಪಂದ್ಯ ಮುಗಿದ ಬಳಿಕ ಈ ಆಯ್ಕೆ ನಡೆಯಲಿದೆ.
ಪಾಕಿಸ್ತಾನ ಟೆಸ್ಟ್ ತಂಡ: ಬಾಬರ್ ಆಝಮ್ (ನಾಯಕ), ಅಬ್ದುಲ್ಲಾ ಫಜಲ್, ಅಲಿ ಉಸ್ಮಾನ್, ಅರಾಫತ್ ಮಿನ್ಹಾಸ್, ಅಜಾನ್ ಅವೈಸ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಘಾಜಿ ಘೋರಿ (ವಿಕೆಟ್ಕೀಪರ್), ಮೊಹಮ್ಮದ್ ಸುಲೇಮಾನ್, ಮೊಹಮ್ಮದ್ ತಾಹಾ, ರಜಾವುಲ್ಲಾ, ಸಾದ್ ಬೈಗ್ (ವಿಕೆಟ್ಕೀಪರ್), ಸಲ್ಮಾನ್ ಅಲಿ ಆಘಾ, ಸಮೀರ್ ಮಿನ್ಹಾಸ್ ಮತ್ತು ಸೌದ್ ಶಕೀಲ್