ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪಾಕ್‌ ಎದುರಿನ ಸೋಲನ್ನು ಸಹಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡ್ರುʼ: ರೆಹಮಾನುಲ್ಲಾ ಗುರ್ಬಾಝ್‌ ಶಾಕಿಂಗ್‌ ಹೇಳಿಕೆ!

ಅಫ್ಘಾನಿಸ್ತಾನ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರೆಹಮಾನುಲ್ಲಾ ಗುರ್ಬಾಝ್‌ ಅವರು ಮೂರು ವರ್ಷಗಳ ಹಿಂದಿನ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. 2022ರ ಏಷ್ಯಾ ಕಪ್‌ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೋಲಿನಿಂದ ನಮ್ಮ ದೇಶದ ಕೆಲ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ತಮ್ಮ ಅಭಿಮಾನಿಗಳು ತಮ್ಮ ರಾಷ್ಟ್ರೀಯ ತಂಡಕ್ಕೆ ಭಾವನೆಗಳನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.

ಪಾಕ್‌ ಎದುರು ಸೋತಿದ್ದಕ್ಕೆ ನಮ್ಮವರು ಆತ್ಮಹತ್ಯೆ ಮಾಡಿಕೊಂಡ್ರು: ಗುರ್ಬಾಝ್‌!

ಆಘಾತಕಾರಿ ಘಟನೆ ನೆನೆದ ರೆಹಮಾನುಲ್ಲಾ ಗುರ್ಬಾಝ್‌. -

Profile
Ramesh Kote Mar 23, 2026 10:09 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ನಡುವಣ ಪಂದ್ಯಗಳು ಎಷ್ಟರ ಮಟ್ಟಿಗೆ ಜಿದ್ದಾಜಿದ್ದಿನಿಂದ ಕೂಡಿರುತ್ತವೆ, ಅದೇ ರೀತಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ (AFG vs PAK) ತಂಡಗಳ ನಡುವಣ ಪಂದ್ಯಗಳು ಕೂಡ ಅಷ್ಟೇ ಹೈವೋಲ್ಟೇಜ್‌ನಿಂದ ಕೂಡಿರುತ್ತವೆ. ಕೇವಲ ಆಟಗಾರರಿಗೆ ಮಾತ್ರವಲ್ಲ, ಆಫ್ಘನ್‌ ಕ್ರಿಕೆಟ್‌ ಅಭಿಮಾನಿಗಳಿಗೂ ಕೂಡ ಪಾಕ್‌ ಎದುರು ನಮ್ಮ ದೇಶ ಗೆಲ್ಲಬೇಕೆಂಬ ಪ್ರತಿಷ್ಠೆಯನ್ನು ಹೊಂದಿದ್ದಾರೆ. ಕ್ರಿಕೆಟ್‌ಗೆ ಮಾತ್ರವಲ್ಲ ರಾಜಕೀಯವಾಗಿಯೂ ಪಾಕ್‌ ಹಾಗೂ ಆಫ್ಘಾನ್‌ ಕಟ್ಟಾ ವಿರೋಧಿಗಳು ಎಂಬುದನ್ನು ನಾವು ನೋಡಿದ್ದೇವೆ. ಇದೀಗ ಅಫ್ಘಾನಿಸ್ತಾನ ತಂಡದ ವಿಕೆಟ್‌ ಕೀಪರ್‌ ರೆಹಮಾನುಲ್ಲಾ ಗುರ್ಬಾಝ್‌ (Rahmanullah Gurbaz) ಅವರು ಆಘಾತಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಅಫ್ಘಾನಿಸ್ತಾನ ತಂಡ ಎಂಟು ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಪಾಕ್‌ ನೀಡಿದ್ದ 283 ರನ್‌ಗಳ ಗುರಿಯನ್ನು ಆಫ್ಘನ್‌ ತಂಡ ಸುಲಭವಾಗಿ ಚೇಸ್‌ ಮಾಡಿತ್ತು. ಆ ಮೂಲಕ ಪಾಕ್‌ಗೆ ಆಘಾತ ನೀಡಿತ್ತು ಹಾಗೂ 2022ರ ಏಷ್ಯಾ ಕಪ್‌ ಸೋಲಿನ ಸೇಡನ್ನು ತೀರಿಸಿಕೊಂಡಿತ್ತು. ಅಂದ ಹಾಗೆ 2023ರ ವಿಶ್ವಕಪ್‌ ಟೂರ್ನಿಯಲ್ಲಿನ ಗೆಲುವಿಗೂ ಮುನ್ನ ಆಫ್ಘನ್‌ ತಂಡ, 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಕ್‌ ಎದುರು ಸೋಲು ಅನುಭವಿಸಿತ್ತು. ಮೊಹಮ್ಮದ್‌ ನಬಿ ತಂಡ ನೀಡಿದ್ದ 130 ರನ್‌ಗಳ ಗುರಿಯನ್ನು ಪಾಕಿಸ್ತಾನ ಚೇಸ್‌ ಮಾಡಿ ಗೆದ್ದಿತ್ತು.

IPL 2026: ಏಕೈಕ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್‌ ಗಳಿಸಿದ ನಾಲ್ವರು ಬ್ಯಾಟರ್ಸ್‌!

ಪಾಕ್‌ ಎದುರು ಸೋತಿದ್ದಕ್ಕೆ ನಮ್ಮವರು ಆತ್ಮಹತ್ಯೆ ಮಾಡಿಕೊಂಡಿದ್ದರು

ಪಾಕ್‌ ಎದುರಿನ ಸೋಲು ಅಫ್ಘಾನಿಸ್ತಾನದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಸೋಲನ್ನು ಕೆಲ ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರಿಂದ ನಮ್ಮ ಅಭಿಮಾನಿಗಳು ಆಘಾತಕಾರಿ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನಾನು ಎಂದಿಗೂ ಊಹೆ ಮಾಡಿರಲಿಲ್ಲ ಎಂದು ರೆಹಮಾನುಲ್ಲಾ ಗುರ್ಬಾಝ್‌ ತಿಳಿಸಿದ್ದಾರೆ.

ಶುಭಾಂಕರ್‌ ಮಿಶ್ರಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗುರ್ಬಾಝ್‌, "ನನ್ನ ಪಾಲಿಗೆ ಅತ್ಯಂತ ನೋವು ತಂದ ಪಂದ್ಯವೆಂದರೆ 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿನ ಪಾಕಿಸ್ತಾನ ವಿರುದ್ಧದ ಸೋಲು. ನಮ್ಮ ದೇಶದಲ್ಲಿ ಜನರು ತುಂಬಾ ನೋವು ಅನುಭವಿಸಿದರು. ಹಲವರು ಅತ್ತರು. ಕೆಲವರು ಆತ್ಮಹತ್ಯೆಗೂ ಮುಂದಾಗಿದ್ದರು. ನಮ್ಮಲ್ಲಿ ಭಾವನಾತ್ಮಕ ಜನರೇ ಹೆಚ್ಚು. ನಾವು ಇಲ್ಲಿ ಜನರಿಗಾಗಿ ಆಡುತ್ತೇವೆ, ಆದ್ದರಿಂದ ನಮಗೂ ನೋವು ಆಗುತ್ತದೆ,” ಎಂದು ಹೇಳಿದ್ದಾರೆ.



ಶಾರ್ಜಾಗೆ ಹೋದಾಗೆಲ್ಲಾ ಆ ಸೋಲು ಕಾಡುತ್ತೆ

“ಆ ಪಂದ್ಯದ ಬಗ್ಗೆ ಈಗ ಮಾತನಾಡಿದರೂ ಆ ದುಃಖದ ನೆನಪುಗಳು ಈಗಲೂ ನನಗೆ ನೆನಪಾಗುತ್ತವೆ. ನಾನು ಶಾರ್ಜಾ ಕ್ರೀಡಾಂಗಣಕ್ಕೆ ಹೋಗುವಾಗಲೆಲ್ಲಾ ಆ ಹೃದಯವಿದ್ರಾವಕ ಸೋಲು ನೆನಪಾಗುತ್ತದೆ. ನಾವು ಗೆಲ್ಲಬೇಕಾಗಿದ್ದ ಪಂದ್ಯವನ್ನು ಹೇಗೆ ಸೋತಿದ್ದೇವೆ ಎಂಬುದನ್ನು ನಾನು ಇಂದಿಗೂ ನಂಬಲು ಆಗುತ್ತಿಲ್ಲ. ನಮ್ಮ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ, ಆದರೆ ಬೌಲಿಂಗ್ ಚೆನ್ನಾಗಿತ್ತು. ಆದರೂ ಅಂತಿಮವಾಗಿ ನಾವು ಸೋಲು ಅನುಭವಿಸಿದೆವು,” ಎಂದು ಅವರು ಕಹಿ ಘಟನೆಗಳನ್ನು ಸ್ಮರಿಸಿಕೊಂಡು ಭಾವುಕರಾದರು.



ಪಾಕ್‌ ಎದುರು 2023ರ ವಿಶ್ವಕಪ್‌ ಪಂದ್ಯದ ಗೆಲುವು ಸ್ಮರಣೀಯ

"ನಾವು ಕ್ರಿಕೆಟಿಗರು. ಅಫ್ಘಾನಿಸ್ತಾನದಲ್ಲಿರುವ ಜನರಿಗಾಗಿ ನಾವು ಆಡುತ್ತೇವೆ. ನಮ್ಮ ಸಂತೋಷವು ನಮ್ಮ ಜನರ ಸಂತೋಷವನ್ನು ಅವಲಂಬಿಸಿದೆ. ನಿಮ್ಮ ಅತ್ಯಂತ ಸ್ಮರಣೀಯ ಗೆಲುವು ಯಾವುದೆಂದು ನೀವು, ನಮ್ಮ ಜನರಿಗೆ ಕೇಳಿದರೆ, ಅವರು ಖಚಿತವಾಗಿಯೂ ಪಾಕಿಸ್ತಾನ ವಿರುದ್ಧದ 2023ರ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದ ಗೆಲುವು ಎಂದು ಹೇಳುತ್ತಾರೆ," ಎಂದು ಆಫ್ಘನ್‌ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

"ಒಬ್ಬ ಕ್ರಿಕೆಟಿಗನಾಗಿ ನನಗೆ, ಬೇರೆ ಯಾವುದೇ ಕ್ರಿಕೆಟರ್‌ ಬಗ್ಗೆ ದ್ವೇಷ ಇಲ್ಲವೇ ಇಲ್ಲ. ಆದರೆ, ನಮ್ಮ ಅಭಿಮಾನಿಗಳಿಗೆ ಪಾಕಿಸ್ತಾನ ವಿರುದ್ಧ ಯಾವಾಗಲೂ ಗೆಲುವು ಸಾಧಿಸುತ್ತಲೇ ಇರಬೇಕೆಂದು ಬಯಸುತ್ತಾರೆ," ಎಂದು ರೆಹಮಾನುಲ್ಲಾ ಗುರ್ಬಾಝ್‌ ಹೇಳಿದ್ದಾರೆ.