ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PBKS vs CSK: ಸಿಎಸ್‌ಕೆಗೆ ಸತತ ನಾಲ್ಕನೇ ಸೋಲು, ಪಂಜಾಬ್‌ ಕಿಂಗ್ಸ್‌ಗೆ 18 ರನ್‌ ಜಯ!

PBKS vs CSK Match Highlights: ಯುವ ಆರಂಭಿಕ ಬ್ಯಾಟ್ಸ್‌ಮನ್‌ ಪ್ರಿಯಾಂಶ್‌ ಆರ್ಯ ಅವರ ಚೊಚ್ಚಲ ಶತಕದ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಗೆಲುವು ಪಡೆಯಿತು. ಆ ಮೂಲಕ ಹದಿನೇಂಟನೇ ಆವೃತ್ತಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಮೂರನೇ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಪಂಜಾಬ್‌ಗೆ ಗೆಲುವಿನ ಮಾಲೆ ತೊಡಿಸಿದ ಪ್ರಿಯಾಂಶ್‌ ಆರ್ಯ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಪಂಜಾಬ್‌ ಕಿಂಗ್ಸ್‌ಗೆ 18 ರನ್‌ ಜಯ.

Profile Ramesh Kote Apr 8, 2025 11:48 PM

ಚಂಡೀಗಢ: ಪ್ರಿಯಾಂಶ್‌ ಆರ್ಯ (Priyansh Arya) ಶತಕ ಹಾಗೂ ಶಶಾಂಕ್‌ ಸಿಂಗ್‌ ಅರ್ಧಶತಕದ ಬಲದಿಂದ ಪಂಜಾಬ್‌ ಕಿಂಗ್ಸ್‌ (Punjab Kings) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 18 ರನ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ ಹದಿನೆಂಟನೇ ಆವೃತ್ತಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಮೂರನೇ ಗೆಲುವನ್ನು ದಾಖಲಿಸಿದೆ. ಆದರೆ, ಋತುರಾಜ್‌ ಗಾಯಕ್ವಾಡ್‌ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ರಸಕ್ತ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲಿನ ಮುಖಭಂಗವನ್ನು ಅನುಭವಿಸಿದೆ.

ಇಲ್ಲಿನ ಮುಲ್ಲಾನ್‌ಪುರದ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 220 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಡೆವೋನ್‌ ಕಾನ್ವೇ ಹಾಗೂ ಶಿವಂ ದುಬೆ ಅವರ ಕಠಿಣ ಹೋರಾಟದ ಹೊರತಾಗಿಯೂ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸಿಎಸ್‌ಕೆ ಸತತ ನಾಲ್ಕನೇ ಸೋಲು ಅನುಭವಿಸಿ ಅಭಿಮಾನಿಗಳ ಎದುರು ಮುಖಭಂಗವನ್ನು ಅನುಭವಿಸಿತು.

IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್‌ ಆರ್ಯ!

ಡೆವೋನ್‌ ಕಾನ್ವೆ ಅರ್ಧಶತಕ

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಚಿನ್‌ ರವೀಂದ್ರ ಹಾಗೂ ಡೆವೋನ್‌ ಕಾನ್ವೆ ಅವರು ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ 61 ರನ್‌ಗಳನ್ನು ಕಲೆ ಹಾಕುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಈ ಹಾದಿಯಲ್ಲಿ ರಚಿನ್‌ 23 ಎಸೆತಗಳಲ್ಲಿ 36 ರನ್‌ ಗಳಿಸಿ ಸಿಕ್ಕಿದ್ದ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ, ಮತ್ತೊಂದು ಆರಂಭಿಕ ಡೆವೋನ್‌ ಕಾನ್ವೆ ಕೊನೆಯವರೆಗೂ ಬ್ಯಾಟ್‌ ಮಾಡಿ 49 ಎಸೆತಗಳಲ್ಲಿ 69 ರನ್‌ ಸಿಡಿಸಿ ಸಿಎಸ್‌ಕೆ ತಂಡವನ್ನು ಗೆಲುವಿನ ಹಾದಿಯಲ್ಲಿಟ್ಟಿದ್ದರು. ಆದರೆ, ಅವರು ಕೊನೆಯಲ್ಲಿ ರಿಟೈರ್‌ ಹರ್ಟ್‌ ಆಗಿ ಪೆವಿಲಿಯನ್‌ಗೆ ಮರಳಿದರು.



ಡೆವೋನ್‌ ಕಾನ್ವೆ ಜೊತೆ 89 ರನ್‌ಗಳ ಜೊತೆಯಾಟವನ್ನು ಆಡಿದ್ದ ಶಿವಂ ದುಬೆ ಕೂಡ 27 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿ ಸಿಎಸ್‌ಕೆಯನ್ನು ಗೆಲ್ಲಿಸುವ ಪ್ರಯತ್ನಿಸಿದ್ದರು. ಆದರೆ, ಇವರನ್ನು ಲಾಕಿ ಫರ್ಗ್ಯೂಸನ್‌ ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಎಂಎಸ್‌ ಧೋನಿ ಕೊನೆಯಲ್ಲಿ 12 ಎಸೆತಗಳಲ್ಲಿ 27 ರನ್‌ ಸಿಡಿಸಿದ್ದರು. ಆದರೆ, ಯಶ್‌ ಠಾಕೂರ್‌ ಅವರನ್ನು ಔಟ್‌ ಮಾಡಿದರು. ಅಂತಿಮವಾಗಿ ಸಿಎಸ್‌ಕೆ ಸೋಲು ಅನುಭವಿಸಿತು.

219 ರನ್‌ ಸಿಡಿಸಿದ್ದ ಪಂಜಾಬ್‌ ಕಿಂಗ್ಸ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಪ್ರಿಯಾಂಶ್‌ ಆರ್ಯ (103) ಹಾಗೂ ಶಶಾಂಕ್‌ ಸಿಂಗ್‌ (52) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 220 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.



ಸ್ಟಾರ್‌ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ಪರ ಪ್ರಿಯಾಂಶ್‌ ಆರ್ಯ ಹಾಗೂ ಶಶಾಂಕ್‌ ಸಿಂಗ್‌ ಹೊರತುಪಡಿಸಿ ಮದ್ಯಮ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಪ್ರಭ್‌ಸಿಮ್ರಾನ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌, ಮಾರ್ಕಸ್‌ ಸ್ಟೋಯ್ನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ನೆಹಾಲ್‌ ವಧೇರಾ ಕನಿಷ್ಠ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕದೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಪಂಜಾಬ್‌ ಕೇವಲ 83 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.



ಪ್ರಿಯಾಂಶ್‌ ಆರ್ಯ ಚೊಚ್ಚಲ ಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಪ್ರಿಯಾಂಶ್‌ ಆರ್ಯ, ಸಿಎಸ್‌ಕೆ ಬೌಲರ್‌ಗಳಿಗೆ ಬೆವರಿಳಿಸಿದರು. ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ನೆರೆದಿದ್ದ ತವರು ಅಭಿಮಾನಿಗಳನ್ನು ರಂಜಿಸಿದರು. ಇವರು 39 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತದ ಎರಡನೇ ಹಾಗೂ ವಿಶ್ವದ ಐದನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಇವರು ಆಡಿದ 42 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 103 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಪಂಜಾಬ್‌ 150ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಶಶಾಂಕ್‌ ಸಿಂಗ್‌ ಜೊತೆ ನಿರ್ಣಾಯಕ 71 ರನ್‌ಗಳನ್ನು ಕಲೆ ಹಾಕಿದ್ದರು.



ಅಬ್ಬರಿಸಿದ ಶಶಾಂಕ್‌ ಸಿಂಗ್‌

ಪ್ರಿಯಾಂಶ್‌ ಆರ್ಯ ವಿಕೆಟ್‌ ಒಪ್ಪಿಸಿದ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಶಶಾಂಕ್‌ ಸಿಂಗ್‌ ಸ್ಪೋಟಕ ಅರ್ಧಶತಕವನ್ನು ಸಿಡಿಸಿದರು. ಇವರು ಆಡಿದ 36 ಎಸೆತಗಳಲ್ಲಿ ಅಜೇಯ 52 ರನ್‌ಗಳನ್ನು ಸಿಡಿಸಿದರು ಹಾಗೂ ಮತ್ತೊಂದು ತುದಿಯಲ್ಲಿ ಅಬ್ಬರಿಸಿದ್ದ ಮಾರ್ಕೊ ಯೆನ್ಸನ್‌ 19 ಎಸೆತಗಳಲ್ಲಿ ಅಜೇಯ 34 ರನ್‌ ಚಚ್ಚಿದ್ದರು. ಈ ಇಬ್ಬರೂ ಏಳನೇ ವಿಕೆಟ್‌ಗೆ 65 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಪಂಜಾಬ್‌ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.