IPL 2027 ʻಮಿನಿ ಹರಾಜಿನಲ್ಲಿ ಶೇಯ್ ಹೋಪ್ಗಾಗಿ ಆರ್ಸಿಬಿ ಬಲೆ ಬೀಸಬಹುದುʼ: ಆರ್ ಅಶ್ವಿನ್ ಭವಿಷ್ಯ!
ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಣ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಶೇಯ್ ಹೋಪ್ ಹಾಟ್ ಫಾರ್ಮ್ನಲ್ಲಿದ್ದಾರೆ. ಅವರು ಈ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದು, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ 2027ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಬರಬಹುದು ಹಾಗೂ ಆರ್ಸಿಬಿ ಖರೀದಿಸಬಹುದು ಎಂದು ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
ಶೇಯ್ ಹೋಪ್ ಆರ್ಸಿಬಿಗೆ ಉತ್ತಮ ಆಯ್ಕೆ ಎಂದ ಅಶ್ವಿನ್. -
ನವದೆಹಲಿ: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ಹರಾಜಿನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟರ್ ಶೇಯ್ ಹೋಪ್ (Shai Hope) ಅವರನ್ನು ಖರೀದಿಸುವಂತೆ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸಲಹೆ ನೀಡಿದ್ದಾರೆ. ಭಾರತ ವಿರುದ್ಧದ ಏಕದಿನ ಮತ್ತು ಟಿ20ಐ ಸರಣಿಗಳಲ್ಲಿ ಶೇಯ್ ಹೋಪ್ ನೀಡುತ್ತಿರುವ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ ಅಶ್ವಿನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಪ್ರವಾಸದಲ್ಲಿ ಶೇಯ್ ಹೋಪ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೈದರಾಬಾದ್ನಲ್ಲಿ ನಡೆದಿದ್ದ ನಾಲ್ಕನೇ ಟಿ20 ಪಂದ್ಯದಲ್ಲಿ ಅವರು ಕೇವಲ 50 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದ್ದರು. ಅವರ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ಗಳು ಸೇರಿದ್ದವು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ 247 ರನ್ಗಳ ಬೃಹತ್ ಮೊತ್ತ ದಾಖಲಿಸಿ ಭಾರತವನ್ನು 24 ರನ್ಗಳಿಂದ ಸೋಲಿಸಿತ್ತು.
IND vs WI: ಐದನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದ ವರುಣ್ ಆರೋನ್!
ಆರ್ಸಿಬಿ ತಂಡಕ್ಕೆ ಶೇಯ್ ಹೋಪ್ ಸೂಕ್ತ ಆಯ್ಕೆಯೇ?
ತಮ್ಮ ಯೂಟ್ಯೂಬ್ ಚಾನೆಲ್ *Ash Ki Baat*ನಲ್ಲಿ ಮಾತನಾಡಿದ ಅಶ್ವಿನ್, ಆರ್ಸಿಬಿ ತಂಡದಲ್ಲಿ ಈಗಾಗಲೇ ಫಿಲ್ ಸಾಲ್ಟ್ ಮತ್ತು ಜೇಕಬ್ ಬೆಥೆಲ್ ಇದ್ದಾರೆ. ಆದರೂ ಶೇಯ್ ಹೋಪ್ ಅವರನ್ನು ಮತ್ತೊಂದು ಆಯ್ಕೆಯಾಗಿ ಪರಿಗಣಿಸಬಹುದೇ ಎಂಬುದನ್ನು ತಂಡ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶೇಯ್ ಹೋಪ್ಗೆ ಒಂದು ಆಯ್ಕೆಯಾಗಬಹುದು. ಅವರ ಬಳಿ ಫಿಲ್ ಸಾಲ್ಟ್ ಮತ್ತು ಜೇಕಬ್ ಬೆಥೆಲ್ ಇಬ್ಬರೂ ಇದ್ದಾರೆ. ಬೆಥೆಲ್ ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಆದರೂ ತಂಡಕ್ಕೆ ಮತ್ತೊಬ್ಬ ಆಯ್ಕೆ ಬೇಕೇ ಎಂಬುದನ್ನು ಪರಿಗಣಿಸಬಹುದು. ಶೇಯ್ ಹೋಪ್ ಐಪಿಎಲ್ನಲ್ಲಿ ಆಡಬೇಕೇ? ಅವರು ಅರ್ಹರೇ? ಖಂಡಿತವಾಗಿಯೂ ಅರ್ಹರು. ನನ್ನ ಪ್ರಕಾರ ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಬಹುದು. ಈ ಹರಾಜಿನಲ್ಲಿ ಅವರನ್ನು ಖರೀದಿಸಲೇಬೇಕು ಎಂಬುದು ನನ್ನ ಅಭಿಪ್ರಾಯ. ಅವರು ಆಯ್ಕೆಯಾಗಲಿ ಎಂದು ಆಶಿಸುತ್ತೇನೆ,” ಎಂದು ಅಶ್ವಿನ್ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಹೋಪ್ಗೆ ಮತ್ತೊಂದು ಅವಕಾಶ?
ಶೇಯ್ ಹೋಪ್ ಈ ಹಿಂದೆ 2024ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದರು. ಒಂಬತ್ತು ಪಂದ್ಯಗಳಲ್ಲಿ 183 ರನ್ ಗಳಿಸಿದ್ದರು. ಆದರೆ, ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಾಬೀತುಪಡಿಸಲು ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ.
ಅಶ್ವಿನ್ ಪ್ರಕಾರ, ಆರಂಭಿಕ ಕ್ರಮಾಂಕದಲ್ಲಿ ಹೋಪ್ಗೆ ಅವಕಾಶ ಕಲ್ಪಿಸುವುದು ಒಂದು ಸವಾಲಾಗಬಹುದು. ಏಕೆಂದರೆ ಹಲವು ಐಪಿಎಲ್ ತಂಡಗಳು ಈಗಾಗಲೇ ತಮ್ಮ ವಿದೇಶಿ ಆರಂಭಿಕ ಆಟಗಾರರನ್ನು ಹೊಂದಿವೆ. ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಹೋಪ್ ಆಡಬಹುದಾದರೂ, ಆ ಪಾತ್ರಕ್ಕೆ ಅವರು ಎಷ್ಟು ಸೂಕ್ತ ಎಂಬುದನ್ನು ತಂಡಗಳು ಪರಿಶೀಲಿಸಬೇಕಾಗುತ್ತದೆ.
ವೆಸ್ಟ್ ಇಂಡೀಸ್ ಎದುರು 4ನೇ ಪಂದ್ಯದಲ್ಲಿ ಭಾರತದ ಸೋಲಿಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ಸಂಜು ಸ್ಯಾಮ್ಸನ್!
“ಅವರು ಯಾವುದೇ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಾಣುತ್ತಿಲ್ಲ. ಇದು ಚಿಂತೆಗೆ ಕಾರಣವಾಗಿದೆ. ಅವರಿಗೆ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಬಹುದು. ಆದರೆ, ಆ ಪಾತ್ರಕ್ಕೆ ಅವರು ಸೂಕ್ತರೇ ಎಂಬುದು ಪ್ರಶ್ನೆ. ಬಹುಶಃ ಅವರು ಆ ಕ್ರಮಾಂಕಗಳಲ್ಲಿ ಆಡುವುದಕ್ಕೆ ಅಷ್ಟೊಂದು ಸೂಕ್ತರಲ್ಲ. ಆದರೂ, ಅವರು ಒಂದು ಆಯ್ಕೆಯಾಗಿದ್ದಾರೆ."
"ಹರಾಜಿನಲ್ಲಿ ಅವರಿಗಾಗಿ ಯಾವುದಾದರೂ ತಂಡ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತದೆಯೇ? ಹಾಗಾಗಲಿ ಎಂದು ನಾನು ಆಶಿಸುತ್ತೇನೆ. ಆದರೆ, ಅದು ನಡೆಯುವ ಸಾಧ್ಯತೆ ಕಡಿಮೆ. ಬಹುತೇಕ ತಂಡಗಳು ಆರಂಭಿಕ ಸ್ಥಾನಗಳಿಗೆ ವಿದೇಶಿ ಆಟಗಾರರನ್ನು ಈಗಾಗಲೇ ನಿಗದಿಪಡಿಸಿಕೊಂಡಿವೆ. ಹೀಗಾಗಿ, ತಂಡಗಳು ಯಾವ ರೀತಿಯ ಆಟಗಾರರ ಸಂಯೋಜನೆಯನ್ನು ಬಯಸುತ್ತವೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ,” ಎಂದು ಅಶ್ವಿನ್ ತಮ್ಮ ಮಾತು ಮುಗಿಸಿದರು.