ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs CSK: ಚೆನ್ನೈ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ರಾಜಸ್ಥಾನ್ ರಾಯಲ್ಸ್!

RR vs CSK Match Highlights: ವೈಭವ್‌ ಸೂರ್ಯವಂಶಿ ಅರ್ಧಶತಕದ ಬಲದಿಂದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ತಂಡ 6 ವಿಕೆಟ್‌ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡ 2025ರ ಐಪಿಎಲ್‌ ಟೂರ್ನಿಯ ಅಭಿಯಾನವನ್ನು ಮುಗಿಸಿತು.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ರಾಜಸ್ಥಾನ್‌ ರಾಯಲ್ಸ್‌ಗೆ ಭರ್ಜರಿ ಜಯ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ 6 ವಿಕೆಟ್‌ ಜಯ.

Profile Ramesh Kote May 21, 2025 12:25 AM

ನವದೆಹಲಿ: ವೈಭವ್ ಸೂರ್ಯವಂಶಿ (57 ರನ್‌) ಅವರ ಅರ್ಧಶತಕದ ಸಹಾಯದಿಂದ ರಾಜಸ್ಥಾನ ರಾಯಲ್ಸ್ (RR) ತಂಡ, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿತು. ಆ ಮೂಲಕ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ ತಂಡ ಗೆಲುವಿನೊಂದಿಗೆ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಅಭಿಯಾನವನ್ನು ಮುಗಿಸಿತು. ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಪ್ರಸಕ್ತ ಆವೃತ್ತಿಯಲ್ಲಿ 10ನೇ ಸೋಲು ಅನುಭವಿಸಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್, ಎದುರಾಳಿ ಸಿಎಸ್‌ಕೆ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದರು. ಅದರಂತೆ ಸಿಎಸ್‌ಕೆ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ರಾಜಸ್ಥಾನ್ ರಾಯಲ್ಸ್‌ ತಂಡ 17 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.

ಗುರಿ ಹಿಂಬಾಲಿಸಿದ ರಾಜಸ್ಥಾನ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟರು. ಆರಂಭದಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡ ಜೈಸ್ವಾಲ್‌, ಅದ್ಭುತವಾಗಿ ಬ್ಯಾಟ್‌ ಮಾಡಿದರು. 19 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರು. ಮತ್ತೊಂದೆಡೆ ವೈಭವ್ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು.

IPL 2025: ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್‌!

27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್‌

ನಿಧಾನಗತಿಯ ಆರಂಭ ಪಡೆದ ನಂತರ ವೈಭವ್‌ ಸೂರ್ಯವಂಶಿಗೆ ನಾಯಕ ಸಂಜು ಸ್ಯಾಮ್ಸನ್ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಈ ವೇಳೆ 27 ಎಸೆತಗಳಲ್ಲಿ ವೈಭವ್‌, ಸಿಕ್ಸರ್‌ನೊಂದಿಗೆ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ವೈಭವ್ ಅರ್ಧಶತಕ ಪೂರೈಸಿದ ನಂತರ, ನಾಯಕ ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ಸಂಜು ಔಟಾದ ತಕ್ಷಣ, ವೈಭವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಸಾಧ್ಯವಾಗಲಿಲ್ಲ ಮತ್ತು 33 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು. ವೈಭವ್ ತನ್ನ ಇನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಸಹ ಬಾರಿಸಿದರು.



ವೈಭವ್ ಔಟಾದ ನಂತರ, ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಅವರ ಮೇಲಿತ್ತು. ಆದರೆ ನೂರ್ ಅಹ್ಮದ್, ರಿಯಾನ್ ಪರಾಗ್ ಅವರನ್ನು ತಮ್ಮ ಸ್ಪಿನ್ ಬಲೆಗೆ ಸಿಲುಕಿಸಿ ಔಟ್ ಮಾಡಿದರು. ರಿಯಾನ್ ನಂತರ, ಸಿಎಸ್‌ಕೆಗೆ ಗೆಲುವಿನ ಆಸೆ ಚಿಗುರುವಂತೆ ಕಂಡಿತು. ಆದರೆ ಧ್ರುವ್ ಜುರೆಲ್ ಜೊತೆಗೂಡಿ ಶಿಮ್ರಾನ್ ಹೆಟ್ಮೆಯರ್ ಯಾವುದೇ ತಪ್ಪು ಮಾಡದೆ 17 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಾಜಸ್ಥಾನ ಪರ ಧ್ರುವ್ ಜುರೆಲ್ 12 ಎಸೆತಗಳಲ್ಲಿ 31 ರನ್ ಗಳಿಸಿದರೆ, ಹೆಟ್ಮಾಯರ್ 5 ಎಸೆತಗಳಲ್ಲಿ 12 ರನ್ ಗಳಿಸಿದರು.



ಆರಂಭಿಕ ಆಘಾತ ಅನುಭವಿಸಿತ್ತ ಸಿಎಸ್‌ಕೆ

ಇದಕ್ಕೂ ಮುನ್ನ ಟಾಸ್‌ ಮೊದಲು ಬ್ಯಾಟ್‌ ಮಾಡುವಂತಾದ ಸಿಎಸ್‌ಕೆ ಪರ ಇನಿಂಗ್ಸ್ ಆರಂಭಿಸಲು ಬಂದ ಡೆವೋನ್ ಕಾನ್ವೇ ಮತ್ತು ಆಯುಷ್ ಮ್ಹಾತ್ರೆ ಬೇಗನೆ ಔಟಾದರು. ಸಿಎಸ್‌ಕೆ 100 ರನ್‌ಗಳ ಒಳಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಒಟ್ಟಾಗಿ ಸೇರಿ ತಂಡದ ಮೊತ್ತವನ್ನು 150 ರನ್‌ಗಳಿಗೆ ಏರಿಸಿದರು. ಸಿಎಸ್‌ಕೆ ಪರ ಡೆವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 42 ರನ್ ಗಳಿಸಿದರು. ಇದಲ್ಲದೆ, ಶಿವಂ ದುಬೆ 32 ಎಸೆತಗಳಲ್ಲಿ 39 ರನ್ ಗಳಿಸಿದರು. ಇದಕ್ಕೂ ಮುನ್ನ ಇನಿಂಗ್ಸ್‌ ಆರಂಭಿಸಿದ ಆಯುಷ್ ಮ್ಹಾತ್ರೆ 20 ಎಸೆತಗಳಲ್ಲಿ 43 ರನ್ ಗಳಿಸಿದ್ದರು.

ರಾಜಸ್ಥಾನ ಪರ ಆಕಾಶ್ ಮಧ್ವಾಲ್ ಮತ್ತು ಯುಧ್ವೀರ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇದಲ್ಲದೆ, ತುಷಾರ್ ದೇಶಪಾಂಡೆ ಮತ್ತು ವನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು.