Ranji Trophy 2025-26: ಡೆಹಲಿ ವಿರುದ್ಧ ಗೆದ್ದು ಇತಿಹಾಸ ಬರೆದ ಜಮ್ಮು ಮತ್ತು ಕಾಶ್ಮೀರ!
ಡೆಲ್ಲಿ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಆರು ದಶಕಗಳ ಕಾದಾಟದಲ್ಲಿ ದೆಹಲಿ ವಿರುದ್ದದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಇದು ಮೊದಲ ಜಯವಾಗಿದೆ. ಈ ಪಂದ್ಯದ ಗೆಲುವಿನ ಮೂಲಕ ಎಲೈಟ್ ಡಿ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ದೆಹಲಿ ತಂಡವನ್ನು ಮೊದಲ ಬಾರಿ ಸೋಲಿಸಿದ ಜಮ್ಮು ಮತ್ತು ಕಾಶ್ಮೀರ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ (Jammu & Kashmir) ತಂಡ ಇತಿಹಾಸವನ್ನು ಬರೆದಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಡೆಲ್ಲಿ (Delhi) ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಗೆಲುವು ಪಡೆದಿದೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಎಲೈಟ್ ಡಿ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಜಮ್ಮು ಮತ್ತು ಕಾಶ್ಮೀರ, ಡೆಲ್ಲಿಯನ್ನು 7 ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ 14 ಅಂಕಗಳನ್ನು ಕಲೆ ಹಾಕಿರುವ ಜಮ್ಮು ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆದರೆ, ಸೋತ ದೆಹಲಿ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ.
ಅಂತಿಮ ಇನಿಂಗ್ಸ್‌ನಲ್ಲಿ ದೆಹಲಿ ನೀಡಿದ್ದ 179 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, ಖಮ್ರಾನ್ ಇಕ್ಬಾಲ್ (133*) ಅವರೆ ಅಜೇಯ ಶತಕದ ಬಲದಿಂದ 43.3 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ದೆಹಲಿ ಬೌಲರ್‌ಗಳ ರಣತಂತ್ರವನ್ನು ಯಶಸ್ವಿಯಾಗಿ ಮೆಟ್ಟಿ ನಿಂತ ಖಮ್ರಾನ್, ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಆ ಮೂಲಕ ತಾವು ಅದ್ಭುತ ಪ್ರತಿಭೆ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.
KAR vs MAH: ಮಹಾರಾಷ್ಟ್ರ ಎದುರು ಡ್ರಾಗೆ ತೃಪ್ತಿಪಟ್ಟರೂ ಅಗ್ರ ಸ್ಥಾನಕ್ಕೇರಿದ ಕರ್ನಾಟಕ!
ದೆಹಲಿ 211 ರನ್‌ಗಳಿಗೆ ಆಲ್‌ಔಟ್
ಈ ಪಂದ್ಯದ ಆರಂಭದಲ್ಲಿಯೇ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದ್ದರು. ಆಕಿಬ್ ನದಿ ದಾರ್ ಮಾರಕ ಬೌಲಿಂಗ್ ದಾಳಿ ನಡೆಸಿ 35 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ಎದುರಾಳಿ ದೆಹಲಿ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 211 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಅವರು ನೆರವು ನೀಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ, ಆಯುಷ್ ದೊಸೇಜಾ ಹಾಗೂ ಸುಮಿತ್ ಮತ್ತೂರು ಅರ್ಧಶತಕವನ್ನು ಗಳಿಸಿದ್ದು ಬಿಟ್ಟರೆ ಅಗ್ರ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು.
310 ರನ್ ಕಲೆ ಹಾಕಿದ್ದ ಜಮ್ಮು ಮತ್ತು ಕಾಶ್ಮೀರ
ನಂತರ ಪ್ರಥಮ ಇನಿಂಗ್ಸ್ ಆಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಸಿಮ್ರಾನ್‌ಜೀತ್ ಸಿಂಗ್ ತಮ್ಮ ಮಾರಕ ಬೌಲಿಂಗ್ ಮೂಲಕ ತಿರುಗೇಟು ನೀಡಿದ್ದರು. ಆದರೆ, ಇತರೆ ಬೌಲರ್‌ಗಳ ಬೆಂಬಲದ ಕೊರತೆಯಿಂದ ಎದುರಾಳಿ ತಂಡವನ್ನು ಬಹುಬೇಗ ಕಟ್ಟಿ ಹಾಕಲು ಸಾಧ್ಯವಾಗಿರಲಿಲ್ಲ. ಜಮ್ಮು ಪರ ಪರಾಸ್ ದೊಗ್ರಾ ಶತಕ ಹಾಗೂ ಅಬ್ದುಲ್ ಸಮದ್ ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ಜಮ್ಮು ಮತ್ತು ಕಾಶ್ಮೀರ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 310 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ 101 ರನ್‌ಗಳ ಮುನ್ನಡೆಯನ್ನು ಪಡೆದಿತ್ತು.
🚨 A HISTORIC DAY IN JAMMU & KASHMIR CRICKET 🚨
— Johns. (@CricCrazyJohns) November 11, 2025
- Jammu & Kashmir has defeated Delhi for the first time in Ranji Trophy history. 🔥🤯 pic.twitter.com/VxNFBOj7QW
ಜಮ್ಮು ಮತ್ತು ಕಾಶ್ಮೀರಕ್ಕೆ 179 ರನ್ ನೀಡಿದ್ದ ಡೆಲ್ಲಿ
ನಂತರ ದ್ವಿತೀಯ ಇನಿಂಗ್ಸ್‌ಗೆ ಬಂದಿದ್ದ ದೆಹಲಿ ತಂಡ ಪ್ರಥಮ ಇನಿಂಗ್ಸ್‌ನಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿತ್ತು. ಅದರಂತೆ ಅರ್ಪಿತ್ ರಾಣಾ (43), ಸನತ್ ಸಂಗ್ವನ್ (34), ಯಶ್ ಧುಲ್ (34), ಆಯುಷ್ ಬದೋನಿ (72) ಹಾಗೂ ಆಯುಷ್ ದಸೋಜಾ (62) ಅವರು ಉತ್ತಮ ಪಡೆದ ಹೊರತಾಗಿಯೂ ದೊಡ್ಡ ಮೊತ್ತವನ್ನು ಪರಿವರ್ತಿಸುವಲ್ಲಿ ವಿಫಲರಾದರು. ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವಂಶಜ್ ಶರ್ಮಾ 68 ರನ್ ನೀಡಿ 6 ವಿಕೆಟ್ ಕಿತ್ತಿದ್ದರು. ಅಂತಿಮವಾಗಿ ಡೆಲ್ಲಿ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 277 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ತಂಡಕ್ಕೆ 179 ರನ್‌ಗಳ ಗುರಿಯನ್ನು ನೀಡಿತ್ತು.