KAR vs MAH: ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಯಿಂದ ಎರಡನೇ ದಿನ ಮೇಲುಗೈ ಸಾಧಿಸಿದ ಕರ್ನಾಟಕ!
KAR vs MAH: ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ ಮಲುಗಿದ ಮಹಾರಾಷ್ಟ್ರ ತಂಡ, ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಬಿ ಪಂದ್ಯದಲ್ಲಿ ಕರ್ನಾಟಕ ಎದುರು ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆಯ ಭೀತಿಗೆ ಒಳಗಾಗಿದೆ. ಕರ್ನಾಟಕ 313 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ, ಮಹಾರಾಷ್ಟ್ರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿದೆ.
ಮಹಾರಾಷ್ಟ್ರ ಎದುರು ಎರಡನೇ ದಿನ 4 ವಿಕೆಟ್ ಪಡೆದ ಶ್ರೇಯಸ್ ಗೋಪಾಲ್. -
ನಾಸಿಕ್: ಶ್ರೇಯಸ್ ಗೋಪಾಲ್ (Shreyas Gopal) ಅವರ ಆಲ್‌ರೌಂಡರ್ ಆಟದ ಬಲದಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಎಲೈಟ್ ಬಿ ಪಂದ್ಯದಲ್ಲಿ (KAR vs MAH) ಮಹಾರಾಷ್ಟ್ರ ಎದುರು ಎರಡನೇ ದಿನ ಮೇಲುಗೈ ಸಾಧಿಸಿದೆ. ಕರ್ನಾಟಕ ತಂಡ ಎರಡನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ 313 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಮಹಾರಾಷ್ಟ್ರ ತಂಡ ಉತ್ತಮ ಆರಂಭ ಪಡೆದರೂ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ ನಲುಗಿ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಿಗೆ 200 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆಯ ಭೀತಿಗೆ ಒಳಗಾಗಿದೆ.
ಇಲ್ಲಿನ ಗಾಲ್ಫ್ ಕ್ಲಬ್ ಗ್ರೌಂಡ್‌ನಲ್ಲಿ ಭಾನುವಾರ ಬೆಳಿಗ್ಗೆ 5 ವಿಕೆಟ್ ನಷ್ಟಕ್ಕೆ 257 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡ, ಭೋಜನ ವಿರಾಮಕ್ಕೂ ಮುನ್ನ 313 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ದಿನ ಶ್ರೇಯಸ್ ಗೋಪಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಅರ್ಧಶತಕವನ್ನು ಬಾರಿಸಿದರು. ಅಭಿನವ್ ಮನೋಹರ್ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಶ್ರೇಯಸ್‌ಗೆ ಸಾಥ್ ನೀಡಲಿಲ್ಲ. ಹಾಗಾಗಿ ಎರಡನೇ ದಿನ ಕರ್ನಾಟಕ ತಂಡ 56 ರನ್‌ಗಳಿಗೆ ಸೀಮಿತವಾಯಿತು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಅರ್ಧಶತಕ ಗಳಿಸಿದ ಶ್ರೇಯಸ್ ಗೋಪಾಲ್
ಎರಡನೇ ದಿನ ಕರ್ನಾಟಕ ತಂಡದ ಪರ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಗಮನ ಸೆಳೆದರು. ಮೊದಲನೇ ದಿನ 32 ರನ್ ಗಳಿಸಿದ್ದ ಶ್ರೇಯಸ್ ಗೋಪಾಲ್, ಎರಡನೇ ದಿನ ಭಾನುವಾರ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅಭಿನವ್ ಮನೋಹರ್ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಶ್ರೇಯಸ್ ಗೋಪಾಲ್, 162 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 71 ರನ್‌ಗಳನ್ನು ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದರು.
ಪೃಥ್ವಿ ಶಾ ಅರ್ಧಶತಕ
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರ ತಂಡಕ್ಕೆ ಓಪನರ್ಸ್ ಪೃಥ್ವಿ ಶಾ (71) ಹಾಗೂ ಅರ್ಶಿನ್ ಕುಲಕರ್ಣಿ (34) ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲನೇ ವಿಕೆಟ್‌ಗೆ 98 ರನ್‌ಗಳನ್ನು ಕಲೆ ಹಾಕಿತ್ತು. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಪೃಥ್ವಿ ಶಾ, ಕೆಲ ಕಾಲ ಕರ್ನಾಟಕ ಬೌಲರ್‌ಗಳನ್ನು ದಂಡಿಸಿದ್ದರು. ಅವರು ಆಡಿದ 92 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 71 ರನ್ ಗಳಿಸಿದರು. ಆ ಮೂಲಕ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟು 28ನೇ ಓವರ್‌ನಲ್ಲಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದರು.
Ranji Trophy 2025-26: ಮೊಹ್ಸಿನ್ ಖಾನ್ ಸ್ಪಿನ್ ಮೋಡಿಗೆ ಕೇರಳ ತತ್ತರ, ಕರ್ನಾಟಕ ತಂಡಕ್ಕೆ ಇನಿಂಗ್ಸ್ ಜಯ!
ಸ್ಪಿನ್ ಮೋಡಿ ಮಾಡಿದ್ದ ಶ್ರೇಯಸ್
ಇದಕ್ಕೂ ಮುನ್ನ ಮಹಾರಾಷ್ಟ್ರ ತಂಡಕ್ಕೆ ಶ್ರೇಯಸ್ ಗೋಪಾಲ್ ತಮ್ಮ ಸ್ಪಿನ್ ಮೋಡಿಯ ಮೂಲಕ ಆಘಾತ ನೀಡಿದ್ದರು. 34 ರನ್ ಗಳಿಸಿ ಆಡುತ್ತಿದ್ದ ಅರ್ಶಿನ್ ಕುಲಕರ್ಣಿ, ಸಿದ್ದೇಶ್ ವೀರ್ ಹಾಗೂ ನಾಯಕ ಅಂಕಿತ್ ಬಾವ್ನೆ ಅವರನ್ನು ಶ್ರೇಯಸ್ ಗೋಪಾಲ್ ತ್ವರಿತವಾಗಿ ಔಟ್ ಮಾಡಿದ್ದರು. ಆ ಮೂಲಕ ಮಹಾರಾಷ್ಟ್ರ ತಂಡ (114-4) ಕೇವಲ 16 ರನ್‌ಗಳ ಅಂತರದಲ್ಲಿ4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೆಲಕಾಲ ಕ್ರಿಸ್‌ನಲ್ಲಿದ್ದು ಉತ್ತಮ ಆರಂಭ ಪಡೆದಿದ್ದ ಸಚಿನ್ ದಾಸ್ (21) ಹಾಗೂ ಸೌರಭ್ ನವಾಲೆ (26) ಅವರನ್ನು ಕ್ರಮವಾಗಿ ಮೊಹ್ಸಿನ್ ಖಾನ್ ಮತ್ತು ಶ್ರೇಯಸ್ ಗೋಪಾಲ್ ಅವರು ಔಟ್ ಮಾಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ಜಲಜ್ ಸೆಕ್ಸೇನಾ (34*) ಹಾಗೂ ವಿಕಿ ಓಸ್ಟ್ವಾಲ್ (4*) ಕ್ರೀಸ್‌ನಲ್ಲಿದ್ದಾರೆ.
ಕರ್ನಾಟಕ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದ ಶ್ರೇಯಸ್ ಗೋಪಾಲ್ 23 ಓವರ್‌ಗಳಿಗೆ 46 ರನ್ ನೀಡಿ 4 ವಿಕೆಟ್ ಕಿತ್ತರೆ, ಮೊಹ್ಸಿನ್ ಖಾನ್ ಎರಡು ವಿಕೆಟ್ ಪಡೆದರು.