ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: 27 ರನ್‌ ಗಳಿಸಿ ಔಟಾದರೂ ಕನ್ನಡಿಗ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಮೆಚ್ಚುಗೆ!

Fans Praised on Devdutt padikkal: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 8ನೇ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ 27 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರೂ ದೇವದತ್‌ ಪಡಿಕ್ಕಲ್‌ ಅವರನ್ನು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕನ್ನಡಿಗ ಪಡಿಕ್ಕಲ್‌ ಅವರು ಈ ಆವೃತ್ತಿಯಲ್ಲಿ ವಿಭಿನ್ನವಾಗಿ ಕಾಣುತ್ತಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

IPL 2025: ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ಗೆ ಫ್ಯಾನ್ಸ್‌ ಮೆಚ್ಚುಗೆ!

ದೇವದತ್‌ ಪಡಿಕ್ಕಲ್‌ಗೆ ಫ್ಯಾನ್ಸ್‌ ಮೆಚ್ಚುಗೆ.

Profile Ramesh Kote Mar 28, 2025 9:15 PM

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಂಟನೇ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಯುವ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ (Devdutt Padikkal) ಅವರನ್ನು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಸತತ ವೈಫಲ್ಯ ಅನುಭವಿಸಿದ ಹೊರತಾಗಿಯೂ ಈ ಬಾರಿ ಟೂರ್ನಿಯಲ್ಲಿ ದೇವದತ್‌ ಪಡಿಕ್ಕಲ್‌ ತಮ್ಮ ಬ್ಯಾಟಿಂಗ್‌ನಲ್ಲಿ ತುಂಬಾ ಸುಧಾರಣೆಯನ್ನು ಕಂಡಿದ್ದಾರೆಂದು ಹೊಗಳಿದ್ದಾರೆ.

ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಫಿಲ್‌ ಸಾಲ್ಟ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಆಡಿದ 16 ಎಸೆತಗಳಲ್ಲಿ 200ರ ಸ್ಟ್ರೈಕ್‌ ರೇಟ್‌ನಲ್ಲಿ 32 ರನ್‌ ಸಿಡಿಸಿದ್ದರು. ಆದರೆ, ನೂರ್‌ ಅಹ್ಮದ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ, ಚೆಂಡಿನ ಗತಿಯನ್ನು ಅರಿಯುವಲ್ಲಿ ವಿಫಲರಾಗಿ ಎಂಎಸ್‌ ಧೋನಿ ಅವರ ಬುದ್ದಿವಂತಿಕೆಯ ಸ್ಟಂಪ್‌ ಔಟ್‌ ಆದರು.

RCB vs CSK: ಟಾಸ್‌ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬ್ಯಾಟಿಂಗ್‌!

ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ದೇವದತ್‌ ಪಡಿಕ್ಕಲ್‌ ತಮ್ಮ ಬ್ಯಾಟಿಂಗ್‌ನಲ್ಲಿ ವಿಭಿನ್ನವಾಗಿ ಕಂಡರು. ಒಂದು ತುದಿಯಲ್ಲಿ ವಿರಾಟ್‌ ಕೊಹ್ಲಿ ನಿಧಾನಗತಿಯ ಬ್ಯಾಟ್‌ ಮಾಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ದೇವದತ್‌ ಪಡಿಕ್ಕಲ್‌ ಅವರು ಅಬ್ಬರಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಸಿಎಸ್‌ಕೆ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ ಕೇವಲ 14 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 27 ರನ್‌ಗಳನ್ನು ಚಚ್ಚಿದ್ದರು. ಆ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆಯನ್ನು ನೀಡಿದ್ದರು.



ಆದರೆ, ರವಿಚಂದ್ರನ್‌ ಅಶ್ವಿನ್‌ ಅವರ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಪಡಿಕ್ಕಲ್‌ ಕವರ್ಸ್‌ನಲ್ಲಿ ನಿಂತಿದ್ದ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ ಕ್ಯಾಚ್‌ ಪಡೆದುಕೊಂಡರು. ಈ ವೇಳೆ ಚೆಂಡು ನೆಲಕ್ಕೆ ತಾಗಿರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ವಿಡಿಯೊ ರಿಪ್ಲೇನಲ್ಲಿ ಗಾಯಕ್ವಾಡ್‌ ಚೆಂಡನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ದೇವದತ್‌ ಪಡಿಕ್ಕಲ್‌ ನಿರಾಶೆಯಿಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.



27 ರನ್‌ ಗಳಿಸಿ ಔಟಾದರೂ ಕನ್ನಡಿಗನನ್ನು ಶ್ಲಾಘಿಸಿದ ಫ್ಯಾನ್ಸ್‌

ಕೇವಲ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ದೇವದತ್‌ ಪಡಿಕ್ಕಲ್‌ ಅವರು 192.86ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳನ್ನು ಸಿಡಿಸಿದ್ದರು. ಈ ಹಿಂದೆ ಆರ್‌ಸಿಬಿ ಪರ ಆಡುವಾಗ ದೇವದತ್‌ ಪಡಿಕ್ಕಲ್‌ ಕಡಿಮೆ ಸ್ಟ್ರೈಕ್‌ ವಿಷಯದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಇದೇ ಕಾರಣದಿಂದ ಅವರನ್ನು ಆರ್‌ಸಿಬಿ ತಂಡ 2022ರ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜಿಗೆ ರಿಲೀಸ್‌ ಮಾಡಲಾಗಿತ್ತು. ಆದರೆ, ನಂತರ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳ ಪರ ಆಡಿದ್ದ ದೇವದತ್‌ ಪಡಿಕ್ಕಲ್‌, ಈ ಬಾರಿ ಆರ್‌ಸಿಬಿ ಪರ ಆಡಿದ ಎರಡೂ ಪಂದ್ಯಗಳಲ್ಲಿ ಉತ್ತಮ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ದೇವದತ್‌ ಪಡಿಕ್ಕಲ್‌ ಅವರನ್ನು ಗುಣಗಾಣ ಮಾಡಿದ್ದಾರೆ.



ಕೆಕೆಆರ್‌ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದಿದ್ದ ಆರ್‌ಸಿಬಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೊದಲನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕಕೆಆರ್‌ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 174 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಆಸಿಬಿ, ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಅರ್ಧಶತಕಗಳ ಬಲದಿಂದ 16.2 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 177 ರನ್‌ಗಳನ್ನು ಗಳಿಸಿ ಗೆಲುವು ಪಡೆದಿತ್ತು.