ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs MI: ಮುಂಬೈ ಇಂಡಿಯನ್ಸ್‌ಗೆ ಮಣ್ಣು ಮುಕ್ಕಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

RCB vs MI Match Highlights: ಫಿಲ್‌ ಸಾಲ್ಟ್ ಹಾಗೂ ರಜತ್‌ ಪಾಟಿದಾರ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್‌ ವಿರುದ್ಧ 18 ರನ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ಮೂರನೇ ಗೆಲುವು ದಾಖಲಿಸಿತು.

ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿಗೆ ಜಯ.

ಮುಂಬೈ: ಫಿಲ್‌ ಸಾಲ್ಟ್‌ (Phil Salt) ಹಾಗೂ ರಜತ್‌ ಪಾಟಿದಾರ್‌ ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಮುಂಬೈ ಇಂಡಿಯನ್ಸ್‌ (MI) ಎದುರು 18 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಇನ್ನು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ, 19ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿತು.

ಭಾನುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 20ನೇ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 241 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡದ ಪರ ಶೆರ್ಫೆನ್‌ ಋದರ್‌ಫೋರ್ಡ್‌ ( 71* ರನ್‌) ಬಿಟ್ಟರೆ ಇನ್ನುಳಿದ ಯಾವೊಬ್ಬ ಬ್ಯಾಟ್ಸ್‌ಮನ್‌ ದೊಡ್ಡ ಇನಿಂಗ್ಸ್‌ ಆಡಲಿಲ್ಲ. ಇದರ ಪರಿಣಾಮ ಐದು ಬಾರಿ ಚಾಂಪಿಯನ್ಸ್‌ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಈ ಸೀಸನ್‌ನ ತವರು ಅಂಗಣದಲ್ಲಿ ಮೊದಲ ಸೋಲು ಅನುಭವಿಸಿತು.

RCB vs MI: ಅರ್ಧಶತಕ ಬಾರಿಸಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಮುಂಬೈ ತಂಡದ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ರಯಾನ್‌ ರಿಕೆಲ್ಟನ್‌ ಅವರು ಮೊದಲನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವನ್ನು ಆಡಿದ್ದರು. ರೋಹಿತ್‌ ಶರ್ಮಾ 19 ರನ್‌ ಗಳಿಸಿದ ಬಳಿಕ ರಿಟೈರ್ಡ್‌ ಹರ್ಟ್‌ ಆಗಿದ್ದು ಮುಂಬೈಗೆ ಭಾರಿ ಹಿನ್ನಡೆಯಾಯಿತು. ಆದರೆ, ರಿಕೆಲ್ಟನ್‌ 22 ಎಸೆತಗಳಲ್ಲಿ 37 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಇದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. 8ನೇ ಓವರ್‌ನಲ್ಲಿ ಸುಯಶ್‌ ಶರ್ಮಾ, ರಿಕೆಲ್ಟನ್‌ ಹಾಗೂ ತಿಲಕ್‌ ವರ್ಮಾ ಅವರನ್ನು ಔಟ್‌ ಮಾಡಿ ಆರ್‌ಸಿಬಿ ಕಮ್‌ಬ್ಯಾಕ್‌ಗೆ ನೆರವು ನೀಡಿದರು.



ಸೂರ್ಯಕುಮಾರ್‌ ಯಾದವ್‌ (33 ರನ್‌) ಹಾಗೂ ಹಾರ್ದಿಕ್‌ ಪಾಂಡ್ಯ (40 ರನ್‌) ಒಂದು ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಮುಂಬೈ ಇಂಡಿಯನ್ಸ್‌ಗೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಕೃಣಾಲ್‌ ಪಾಂಡ್ಯ, ಸೂರ್ಯಕುಮಾರ್‌ ಅವರನ್ನು ಹಾಗೂ ಜೇಕಬ್‌ ಡಫಿ, ಹಾರ್ದಿಕ್‌ ಪಾಂಡ್ಯ ಅವರನ್ನು ನಿರ್ಣಾಯಕ ಸಮಯದಲ್ಲಿ ಔಟ್‌ ಮಾಡಿದರು.

RCB vs MI: ಸ್ಲೋ ಫಿಫ್ಟಿ, ಕೋಪದಲ್ಲಿ ಹೆಲ್ಮೆಟ್‌-ಗ್ಲೌಸ್‌ ಬಿಸಾಡಿದ ವಿರಾಟ್‌ ಕೊಹ್ಲಿ! ವಿಡಿಯೊ

ಶೆರ್ಫೆನ್‌ ಋದರ್‌ಫೋರ್ಡ್‌ ಏಕಾಂಗಿ ಹೋರಾಟ ವ್ಯರ್ಥ

ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದ ಶೆರ್ಫನ್‌ ಋದರ್‌ಫೋರ್ಡ್‌ ಕೊನೆಯವೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರು ಆಡಿದ 31 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ ಅಜೇಯ 71 ರನ್‌ ಸಿಡಿಸಿದರು ಹಾಗೂ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರೂ ತಮ್ಮ ತಂಡವನ್ನು ಗೆಲುವಿನ ದಡವನ್ನು ಸೇರಿಸಲು ಸಾಧ್ಯವಾಗಲಿಲ್ಲ.

ಆರ್‌ಸಿಬಿ ಪರ ಸುಯಾಶ್‌ ಶರ್ಮಾ ಎರಡು, ರಸಿಖ್‌ ದಾರ್‌ ಸಲಾಮ್‌, ಜೇಕಬ್‌ ಡಫಿ ಹಾಗೂ ಕೃಣಾಲ್‌ ಪಾಂಡ್ಯ ತಲಾ ಒಂದೊಂದು ವಿಕೆಟ್‌ ಕಿತ್ತರು.



240 ರನ್‌ ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫಿಲ್‌ ಸಾಲ್ಟ್‌ (78 ರನ್‌), ರಜತ್‌ ಪಾಟಿದಾರ್‌ (53 ರನ್‌) ಹಾಗೂ ವಿರಾಟ್‌ ಕೊಹ್ಲಿ (50 ರನ್) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 240 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್‌ಗೆ 241 ರನ್‌ಗಳ ಕಠಿಣ ಗುರಿಯನ್ನು ನೀಡಿತು.

IPL 2026: 4000 ಐಪಿಎಲ್‌ ರನ್‌ ಗಳಿಸಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಶುಭಮನ್‌ ಗಿಲ್‌!

ಕೊಹ್ಲಿ-ಸಾಲ್ಟ್‌ ಜುಗಲ್‌ಬಂದಿ

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ವಿರಾಟ್‌ ಕೊಹ್ಲಿ ಒಂದು ತುದಿಯಲ್ಲಿ ನಿಧಾನಗತಿಯಲ್ಲಿ ಬ್ಯಾಟ್‌ ಮಾಡುತ್ತಿದ್ದರೆ, ಫಿಲ್‌ ಸಾಲ್ಟ್‌ ಸ್ಫೋಟಕ ಬ್ಯಾಟ್‌ ಮಾಡಿದರು. ಈ ಜೋಡಿ ಪವರ್‌ಪ್ಲೇನಲ್ಲಿ 71 ರನ್‌ ಸಿಡಿಸುವ ಮೂಲಕ ಆರ್‌ಸಿಬಿಗೆ ಭರ್ಜರಿ ಅಡಿಪಾಯ ಹಾಕಿತು. ಅಂತಿಮವಾಗಿ ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 65 ಎಸೆತಗಳಲ್ಲಿ 120 ರನ್‌ಗಳನ್ನು ಕಲೆ ಹಾಕಿತು.



ಫಿಲ್‌ ಸಾಲ್ಟ್‌ ಮೊದಲ ಅರ್ಧಶತಕ

ಕಳೆದ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದ ಫಿಲ್‌ ಸಾಲ್ಟ್‌, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಆಡಿದ ಕೇವಲ 36 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ ಅಷ್ಟೇ ಬೌಂಡರಿಗಳ ಮೂಲಕ 216ರ ಸ್ಟ್ರೈಕ್‌ ರೇಟ್‌ನಲ್ಲಿ 78 ರನ್‌ ಸಿಡಿಸಿದರು, ಆ ಮೂಲಕ ಶತಕದ ಭರವಸೆ ಮೂಡಿಸಿದ್ದರು. ಆದರೆ, ಅವರು ಶಾರ್ದುಲ್‌ ಠಾಕೂರ್‌ ಎಸೆತದಲ್ಲಿ ವಿಕೆಟ್‌ ಕೈಚೆಲ್ಲಿಸಿದರು.



265ರ ಸ್ಟ್ರೈಕ್‌ ರೇಟ್‌ನಲ್ಲಿ ಫಿಫ್ಟಿ ಬಾರಿಸಿದ ರಜತ್‌

ನಂತರ ಕ್ರೀಸ್‌ಗೆ ಬಂದ ನಾಯಕ ರಜತ್‌ ಪಾಟಿದಾರ್‌, ಆಡಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿದರು. ಅವರು ಆಡಿದ 20 ಎಸೆತಗಳಲ್ಲಿ 265ರ ಸ್ಟ್ರೈಕ್‌ ರೇಟ್‌ನಲ್ಲಿ 53 ರನ್‌ಗಳನ್ನು ಚಚ್ಚಿ ಆರ್‌ಸಿಬಿ ಸ್ಕೋರ್‌ ಬೋರ್ಡ್‌ನಲ್ಲಿ ಪ್ರಾಬಲ್ಯ ಮೆರೆದರು. ಇವರ ಸ್ಪೋಟಕ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳನ್ನು ಸೇರಿವೆ. ದೀರ್ಘಾವಧಿ ಕ್ರೀಸ್‌ನಲ್ಲಿ ಆಡಿದ್ದ ವಿರಾಟ್‌ ಕೊಹ್ಲಿ 131ರ ಸ್ಟ್ರೈಕ್‌ ರೇಟ್‌ನಲ್ಲಿ 50 ರನ್‌ ಹಾಗೂ ಟಿಮ್‌ ಡೇವಿಡ್‌ 16 ಎಸೆತಗಳಲ್ಲಿ 34 ರನ್‌ ಚಚ್ಚಿದರು.