RCB vs MI: ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬೌಲರ್‌ಗಳಿಗೆ ಸಮರ್ಪಿಸಿ ಹೃದಯವಂತಿಕೆ ಮೆರೆದ ರಜತ್ ಪಾಟಿದಾರ್!
Rajat Patidar on Man of the match award: ಮುಂಬೈ ಇಂಡಿಯನ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಪಂದ್ಯದ ಬಳಿಕ ತಮಗೆ ಸಿಕ್ಕ ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ತಮ್ಮ ತಂಡದ ಬೌಲರ್‌ಗಳಿಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅರ್ಪಿಸಿದರು.

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬೌಲಿಂಗ್ ವಿಭಾಗಕ್ಕೆ ಸಮರ್ಪಿಸಿದ ರಜತ್ ಪಾಟಿದಾರ್.

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ( RCB vs MI) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳ ಗೆಲುವು ಪಡೆದ ಬಳಿಕ ಆರ್‌ಸಿಬಿ (Royla challengers bengaluru) ನಾಯಕ ರಜತ್ ಪಾಟಿದಾರ್ (Rajat Patidar) ತಮ್ಮ ತಂಡದ ಬೌಲರ್‌ಗಳನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಇಲ್ಲಿನ ವಾಂಖೆಡೆ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ವಿಕೆಟ್‌ನಲ್ಲಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ ಹಾಗಾಗಿ ನನಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನಮ್ಮ ಬೌಲರ್‌ಗಳಿಗೆ ಸಮರ್ಪಿಸುತ್ತೇನೆಂದು ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ಪರ ರಜತ್ ಪಾಟಿದಾರ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕವನ್ನು ಬಾರಿಸಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ 67 ರನ್‌ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ನಾಯಕ ರಜತ್ ಪಾಟಿದಾರ್ ಸ್ಪೋಟಕ ಬ್ಯಾಟ್ ಮಾಡಿದರು. ಇವರು ಆಡಿದ ಕೇವಲ 32 ಎಸೆತಗಳಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ 64 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 221 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ 210ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 40 ರನ್‌ಗಳಿಸಿದ್ದರು. ನಂತರ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡ 209 ರನ್‌ಗಳಿಗೆ ಸೀಮಿತವಾಗಿತ್ತು. ಅಂತಿಮವಾಗಿ ಆರ್‌ಸಿಬಿ 12 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!
ಪಂದ್ಯ ಶ್ರೇಷ್ಠ ಪ್ರಶಸ್ತಿ ಬೌಲರ್‌ಗಳಿಗೆ ಲಭಿಸಬೇಕೆಂದ ರಜತ್ ಪಾಟಿದಾರ್
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್, "ನಮ್ಮ ಬೌಲರ್‌ಗಳು ಬೌಲ್ ಮಾಡುವಾಗ ತೋರಿದ ಧೈರ್ಯ ನಿಜಕ್ಕೂ ಶ್ಲಾಘನೀಯ. ಹಾಗಾಗಿ ನನಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿ ನಮ್ಮ ತಂಡದ ಬೌಲಿಂಗ್ ವಿಭಾಗಕ್ಕೆ ಸಲ್ಲಬೇಕು. ಏಕೆಂದರೆ ಈ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕುವುದು ತುಂಬಾನೆ ಕಷ್ಟ. ಕೊನೆಯ ಓವರ್‌ನಲ್ಲಿ ಕೃಣಾಲ್ ಪಾಂಡ್ಯ ಬೌಲ್ ಮಾಡಿದ ಹಾದಿ ನಿಜಕ್ಕೂ ಅದ್ಭುತವಾಗಿತ್ತು. ಇಂಥಾ ಬ್ಯಾಟಿಂಗ್ ಕಂಡೀಷನ್ಸ್‌ನಲ್ಲಿ ಈ ರೀತಿ ಬೌಲ್ ಮಾಡುವುದು ತುಂಬಾ ಕಷ್ಟ," ಎಂದು ಸಹ ಆಟಗಾರನನ್ನು ಶ್ಲಾಘಿಸಿದ್ದಾರೆ.
𝐂𝐨𝐦𝐞𝐭𝐡 𝐭𝐡𝐞 𝐡𝐨𝐮𝐫, 𝐜𝐨𝐦𝐞𝐭𝐡 𝐂𝐚𝐩𝐭𝐚𝐢𝐧 𝐑𝐚𝐣𝐚𝐭 𝐏𝐚𝐭𝐢𝐝𝐚𝐫 🫡
— IndianPremierLeague (@IPL) April 7, 2025
A Player of the Match winning knock from #RCB skipper helped them seal a thrilling 1️⃣2️⃣-run win over #MI ❤️
Scorecard ▶️ https://t.co/Arsodkwgqg#TATAIPL | #MIvRCB pic.twitter.com/GaDr2aPHsa
ಪಂದ್ಯದಲ್ಲಿ ರೂಪಿಸಿದ ಗೇಮ್ ಪ್ಲ್ಯಾನ್ ತಿಳಿಸಿದ ಆರ್‌ಸಿಬಿ ಕ್ಯಾಪ್ಟನ್
"ಇದು ನಿಜಕ್ಕೂ ಅದ್ಭುತ ಪಂದ್ಯವಾಗಿದೆ. ಪಂದ್ಯವನ್ನು ಕೊನೆಯ ತನಕ ಆಡಿ ಗೆಲ್ಲಬೇಕೆಂದು ನಮಗೆ ಮನದಟ್ಟಾಗಿತ್ತು. ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಬೇಕೆಂದು ನಾವು ಚರ್ಚೆಯನ್ನು ನಡೆಸಿದ್ದೆವು ಹಾಗೂ ಕೊನೆಯಲ್ಲಿ ಕೃಣಾಲ್ ಪಾಂಡ್ಯಗೆ ಬೌಲ್ ನೀಡಬೇಕೆಂದು ಬಯಸಿದ್ದೆವು. ಇಲ್ಲಿನ ಪಿಚ್ ತುಂಬಾ ಚೆನ್ನಾಗಿತ್ತು ಹಾಗೂ ಬ್ಯಾಟ್‌ಗೆ ಚೆಂಡು ಸುಲಭವಾಗಿ ಬರುತ್ತಿತ್ತು. ಹಾರ್ದಿಕ್ ಪಾಂಡ್ಯ ಓವರ್ ಬಳಿಕ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದೆ," ಎಂದು ಆರ್‌ಸಿಬಿ ನಾಯಕ ತಿಳಿಸಿದ್ದಾರೆ.
MI vs RCB: 13000 ಟಿ20 ರನ್ ಪೂರ್ಣಗೊಳಿಸಿದ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ!
ಆರ್‌ಸಿಬಿಗೆ ಮೂರನೇ ಜಯ
ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಬಳಿಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಒಟ್ಟು ಆರು ಪಾಯಿಂಟ್ಸ್ ಕಲೆ ಹಾಕಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಇದಕ್ಕೂ ಮುನ್ನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಸೋಲು ಅನುಭವಿಸಿತ್ತು. ಆದರೆ, ಈಗ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳಿದೆ. ಅಂದ ಹಾಗೆ ವಾಂಖೆಡೆ ಕ್ರೀಡಾಂಗಣದಲ್ಲಿ 10 ವರ್ಷಗಳ ಬಳಿಕ ಆರ್‌ಸಿಬಿ ಗೆಲುವು ಪಡೆದಿದೆ. ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು.