ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ನಾಯಕ ಇಶಾನ್ ಕಿಶನ್ (Ishan Kishan) ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ 3000 ರನ್‌ಗಳನ್ನು ಪೂರ್ಣಗೊಳಸಿದ್ದಾರೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2026ರ ಐಪಿಎಲ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ (RCB vs SRH) ಸ್ಪೋಟಕ ಬ್ಯಾಟ್ ಮಾಡಿದ ಇಶಾನ್ ಕಿಶನ್, ಆರ್‌ಸಿಬಿ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಆ ಮೂಲಕ ಅರ್ಧಶತಕವನ್ನು ಬಾರಿಸಿ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ.
2026ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ನಾಯಕ ಪ್ಯಾಟ್ ಕಮಿನ್ಸ್ ಮ್ಯಾಚ್ ಫಿಟ್‌ನೆಸ್ ಸಮಸ್ಯೆ ಇದ್ದ ಕಾರಣ, ಇಶಾನ್ ಕಿಶನ್‌ಗೆ ಸನ್‌ರೈಸರ್ಸ್ ಹೈದಾರಬಾದ್ ತಂಡದ ಹಂಗಾಮಿ ನಾಯಕತ್ವವನ್ನು ನೀಡಲಾಯಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿ ಉತ್ತಮ ಆರಂಭ ಪಡೆಯದ ಎಸ್‌ಆರ್‌ಎಚ್ ತಂಡಕ್ಕೆ ಇಶಾನ್ ಕಿಶನ್ ಆಸರೆಯಾದರು. ಅವರು ಜೇಕಬ್ ಡಫಿ ಅವರು, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದ್ದರು.
IPL 2026: ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಯಾರು!
ನಂತರ ಹೆನ್ರಿಚ್ ಕ್ಲಾಸೆನ್ ಅವರ ಜೊತೆಗೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಇಶಾನ್ ಕಿಶನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 210.53ರ ಸ್ಟ್ರೈಕ್ ರೇಟ್‌ನಲ್ಲಿ 80 ರನ್‌ಗಳನ್ನು ಬಾರಿಸಿದ್ದರು. ಅಲ್ಲದೆ ಕ್ಲಾಸೆನ್ ಜೊತೆ 53 ಎಸೆತಗಳಲ್ಲಿ 97 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು ಹಾಗೂ ಅಪಾಯದಲ್ಲಿದ್ದ ತಂಡವನ್ನು ಪಾರು ಮಾಡಿದ್ದರು. ಅಂತಿಮವಾಗಿ ಅವರು ಅಭಿನಂದನ್ ಸಿಂಗ್ ಎಸೆತದಲ್ಲಿ ಫಿಲ್ ಸಾಲ್ಟ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ರೋಹಿತ್ ಶರ್ಮಾ ದಾಖಲೆ ಮುರಿದ ಇಶಾನ್ ಕಿಶನ್
ಈ ಸ್ಪೋಟಕ ಇನಿಂಗ್ಸ್‌ನ ಮೂಲಕ ಇಶಾನ್ ಕಿಶನ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದರು. ಅವರು ಈ ದಾಖಲೆ ಬರೆಯಲು ಒಟ್ಟು 120 ಪಂದ್ಯಗಳ 113 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇವರು ಈ ಸಾಧನೆಯನ್ನು ಮಾಡಲು 2,180 ಎಸೆತಗಳ್ನು ಆಡಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 3000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಅಂದ ಹಾಗೆ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಪಂತ್ ಅವರು 3000 ರನ್‌ಗಳನ್ನು ಪೂರ್ಣಗೊಳಿಸಲು 2028 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
IPL 2026: ಆರ್‌ಸಿಬಿ ಇನ್, ಸಿಎಸ್‌ಕೆ ಔಟ್! ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್ ಚೋಪ್ರಾ
ಅತ್ಯಂತ ಕಡಿಮೆ ಎಸೆತಗಳಲ್ಲಿ 3000 ಐಪಿಎಲ್ ರನ್ ಗಳಿಸಿದ ಭಾರತೀಯರು
ರಿಷಬ್ ಪಂತ್: 2028 ಎಸೆತಗಳು
ಯೂಸುಫ್ ಪಠಾಣ್ : 2082 ಎಸೆತಗಳು
ಸೂರ್ಯಕುಮಾರ್ ಯಾದವ್ : 2130 ಎಸೆತಗಳು
ಸುರೇಶ್ ರೈನಾ : 2135 ಎಸೆತಗಳು
ಎಂಎಸ್ ಧೋನಿ : 2152 ಎಸೆತಗಳು
ಇಶಾನ್ ಕಿಶನ್ : 2180 ಎಸೆತಗಳು
ಕೆಎಲ್ ರಾಹುಲ್ : 2203 ಎಸೆತಗಳು