ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ತೊರೆದ ರಿಷಭ್‌ ಪಂತ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ ಬಳಿಕ ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಈ ವಿಷಯವನ್ನು ಲಖನೌ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಬಹಿರಂಗಪಡಿಸಿದೆ.

ಎಲ್‌ಎಸ್‌ಜಿ ನಾಯಕತ್ವವನ್ನು ತೊರೆದ ರಿಷಭ್‌ ಪಂತ್‌.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿನ (IPL 2026) ವೈಫಲ್ಯದ ಹಿನ್ನೆಲೆಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ನಾಯಕತ್ವವನ್ನು ರಿಷಭ್‌ ಪಂತ್‌ (Rishabh Pant) ತೊರೆದಿದ್ದಾರೆ. ಸ್ವತಃ ಪಂತ್‌ ಅವರೇ ತನ್ನನ್ನು ನಾಯಕತ್ವದ ಜವಾಬ್ದಾರಿಯಿಂದ ತಕ್ಷಣ ಬಿಡುಗಡೆ ಮಾಡಬೇಕೆಂದು ಲಖನೌ ಫ್ರಾಂಚೈಸಿಗೆ ಮನವಿ ಮಾಡಿದ್ದಾರೆ. ಇದನ್ನು ಆಧರಿಸಿ ಎಲ್‌ಎಸ್‌ಜಿ ತಂಡ ಮೇ 29 ರಂದು ಶುಕ್ರವಾರ ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಈ ವಿಷಯವನ್ನು ಪ್ರಕಟಿಸಿದೆ. 2025ರ ಐಪಿಎಲ್‌ ಮೆಗಾ ಹರಾಜಿನ ಸಂದರ್ಭದಲ್ಲಿ ರಿಷಭ್‌ ಪಂತ್‌ ಅವರನ್ನು ಲಖನೌ ಫ್ರಾಂಚೈಸಿ ದಾಖಲೆಯ 27 ಕೋಟಿ ರು. ಗಳಿಗೆ ಸಹಿ ಮಾಡಿಸಿಕೊಂಡಿತ್ತು. ಆ ಮೂಲಕ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಪಂತ್‌ ಬರೆದಿದ್ದರು.

ಭಾರತ ತಂಡದ ವಿಕೆಟ್‌ ಕೀಪರ್‌ ಎರಡು ಸೀಸನ್‌ಗಳನ್ನು ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ ಎರಡು ಬಾರಿಯೂ ತಮ್ಮ ತಂಡವನ್ನು ಪ್ಲೇಆಫ್ಸ್‌ಗೆ ತಲುಪಿಸುವಲ್ಲಿ ಪಂತ್‌ ವಿಫಲರಾಗಿದ್ದಾರೆ. ಅಂದ ಹಾಗೆ 2026ರ ಐಪಿಎಲ್‌ ಟೂರ್ನಿಯಲ್ಲಿ ಎಲ್‌ಎಸ್‌ಜಿ ಕೊನೆಯ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಲೀಗ್‌ ಹಂತದಲ್ಲಿ ಎಲ್‌ಎಸ್‌ಜಿ ಆಡಿದ 14 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4ರಲ್ಲಿ ಮಾತ್ರ ಹಾಗೂ ಇನ್ನುಳಿದ 10 ಪಂದ್ಯಗಳನ್ನಿ ಸೋಲು ಅನುಭವಿಸಿತ್ತು. ಒಟ್ಟಾರೆಯಾಗಿ ರಿಷಭ್‌ ಪಂತ್‌ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಆಡಿದ 28 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 10ರಲ್ಲಿ ಮಾತ್ರ.

IPL 2026: ವಿಶ್ವದ ಸ್ಟಾರ್‌ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್‌ ಸೂರ್ಯವಂಶಿಗೆ 12 ಕೋಟಿ ರು ಆಫರ್‌?

“ಲಖನೌ ಸೂಪರ್‌ ಜಯಂಟ್ಸ್‌ ತಂಡ ಅಧಿಕೃತವಾಗಿ ಘೋಷಿಸುವುದೇನೆಂದರೆ, ರಿಷಭ್‌ ಪಂತ್‌ ಅವರು ಫ್ರಾಂಚೈಸಿಯ ನಾಯಕತ್ವ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಫ್ರಾಂಚೈಸಿಯು ಅವರ ಮನವಿಯನ್ನು ತಕ್ಷಣದಿಂದಲೇ ಅಂಗೀಕರಿಸಿದೆ,” ಎಂದು ಲಖನೌ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಯಕತ್ವದಲ್ಲಿ ವಿಫಲರಾಗುವುದರ ಜೊತೆಗೆ ರಿಷಭ್‌ ಪಂತ್‌ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ ಅವರು 14 ಪಂದ್ಯಗಳಿಂದ 269 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದರು. ಇದೀಗ 2026ರ ಐಪಿಎಲ್‌ ಟೂರ್ನಿಯಲ್ಲಿ ಅವರು 312 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.



ಎಲ್‌ಎಸ್‌ಜಿ ಕ್ರಿಕೆಟ್‌ ಡೈರೆಕ್ಟರ್‌ ಟಾಮ್‌ ಮೂಡಿ ಹೇಳಿಕೆ

2026ರ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಿರಾಶಾಜನಕ ಪ್ರದರ್ಶನದ ಬಳಿಕ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಬಹುದು ಎಂದು ಸೂಚಿಸಿದ್ದ ಟಾಮ್‌ ಮೂಡಿ, ನಾಯಕ ಸ್ಥಾನದಿಂದ ಕೆಳಗಿಳಿಯುವ ರಿಷಭ್‌ ಪಂತ್‌ ಅವರ ನಿರ್ಧಾರವನ್ನು ಫ್ರಾಂಚೈಸಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಜೊತೆಗೆ, ತಂಡಕ್ಕಾಗಿ ಪಂತ್ ನೀಡಿದ ಕೊಡುಗೆಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

'ಮುಂಬೈ ಇಂಡಿಯನ್ಸ್‌ ಸಹವಾಸ ಸಾಕಪ್ಪ': ದೊಡ್ಡ ನಿರ್ಧಾರ ತೆಗೆದುಕೊಂಡ ಹಾರ್ದಿಕ್‌ ಪಾಂಡ್ಯ!

“ರಿಷಭ್‌ ಪಂತ್‌ ಅವರು ಈ ಮನವಿಯನ್ನು ಫ್ರಾಂಚೈಸಿಗೆ ಸಲ್ಲಿಸಿದ್ದರು ಮತ್ತು ನಾವು ಅದನ್ನು ಗೌರವಪೂರ್ವಕವಾಗಿ ಅಂಗೀಕರಿಸಿದ್ದೇವೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ನಾಯಕನಾಗಿ ರಿಷಭ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ನೀಡಿದ ಪ್ರತಿಯೊಂದು ಕೊಡುಗೆಗೂ ನಾವು ಕೃತಜ್ಞರಾಗಿದ್ದೇವೆ. ಈಗ ನಮ್ಮ ಗಮನ ಸಂಪೂರ್ಣವಾಗಿ ತಂಡದ ಮೇಲಿದ್ದು, ಅತ್ಯುತ್ತಮ ಮಟ್ಟ ತಲುಪಲು ಪುನರ್‌ನಿರ್ಮಾಣ ಮತ್ತು ಪುನರ್‌ವ್ಯವಸ್ಥೆಗೊಳಿಸುವತ್ತ ಕೇಂದ್ರೀಕರಿಸಿದ್ದೇವೆ,” ಎಂದು ಟಾಮ್‌ ಮೂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಸೇರುವ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ಪರ 2024ರ ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಆಡಿದ್ದ 13 ಪಂದ್ಯಗಳಲ್ಲಿ 446 ರನ್‌ಗಳನ್ನು ಗಳಿಸಿದ್ದರು. ಆದರೆ ಎಲ್‌ಎಸ್‌ಜಿ ಪರ ನಾಯಕನಾಗಿ ಅವರು 28 ಪಂದ್ಯಗಳಲ್ಲಿ 581 ರನ್‌ಗಳನ್ನು ಮಾತ್ರ ಗಳಿಸಿದ್ದು, ಅವರ ಸರಾಸರಿ 26.4 ಮತ್ತು ಸ್ಟ್ರೈಕ್ ರೇಟ್ 135.74 ಆಗಿದೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ಕೇವಲ ಎರಡು ಅರ್ಧಶತಕಗಳನ್ನು ಮಾತ್ರ ದಾಖಲಿಸಿದ್ದಾರೆ.