IPL 2027: ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕ? ನಿಗೂಢ ಫೋಟೋ ಹಂಚಿಕೊಂಡ ಫ್ರಾಂಚೈಸಿ!
2027ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ಹಂಚಿಕೊಂಡ ನಿಗೂಢ ಫೋಟೋ ನಾಯಕತ್ವದ ಚರ್ಚೆಗೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ಐದು ಬಾರಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್ ಶರ್ಮಾ ಮತ್ತೆ ನಾಯಕನಾಗುವ ಸಾಧ್ಯತೆ ಹೆಚ್ಚಾಗಿದೆ.
ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನಾಯಕ? -
ಮುಂಬೈ: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕತ್ವ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿಗೂಢ ಫೋಟೋ ಅಭಿಮಾನಿಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ‘ರೋಹಿತ್ ಶರ್ಮಾ, ನೀವೇನಾ?’ ಎಂಬ ಪ್ರಶ್ನೆ ಇದೀಗ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ನವೆಂಬರ್ 25ರಂದು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೈಯೊಂದು ತಂಡದ ಕ್ಯಾಪ್ ಹಿಡಿದಿರುವ ಅನಿಮೇಟೆಡ್ ಚಿತ್ರವನ್ನು ಹಂಚಿಕೊಂಡಿದೆ. ಆದರೆ ಈ ಪೋಸ್ಟ್‌ಗೆ ಯಾವುದೇ ಶೀರ್ಷಿಕೆ ಅಥವಾ ವಿವರಣೆ ನೀಡಿಲ್ಲ. ಇದನ್ನು ಗಮನಿಸಿದ ಅಭಿಮಾನಿಗಳು, ರೋಹಿತ್ ಶರ್ಮಾ ಮತ್ತೆ ತಂಡದ ನಾಯಕನಾಗಿ ಮರಳುವ ಸೂಚನೆ ಇದಾಗಿದೆ ಎಂದು ಊಹಿಸುತ್ತಿದ್ದಾರೆ.
ರೋಹಿತ್ ನಾಯಕತ್ವಕ್ಕೆ ಮರಳುವ ಸಾಧ್ಯತೆ
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು 2013, 2015, 2017, 2019 ಮತ್ತು 2020ರಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್ ಅವರನ್ನು 2024ರ ಆವೃತ್ತಿಗೂ ಮುನ್ನ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿತ್ತು.
ಆದರೆ ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ತಂಡ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. 2024ರಲ್ಲಿ ತಂಡ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 2025ರಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಹೀಗಾಗಿ 2027ರ ಆವೃತ್ತಿಗೆ ರೋಹಿತ್ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಬಗ್ಗೆ ವರದಿಗಳು ಪ್ರಕಟವಾಗಿವೆ.
IPL 2027: ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ತಂಡದ ದೊಡ್ಡ ವೀಕ್ನೆಸ್ ತಿಳಿಸಿದ ಅಭಿನವ್ ಮುಕುಂದ್!
ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆ
ಮುಂಬೈ ತಂಡದ ನಾಯಕತ್ವದ ಚರ್ಚೆಗೆ ಮತ್ತೊಂದು ಪ್ರಮುಖ ಕಾರಣ ಹಾರ್ದಿಕ್ ಪಾಂಡ್ಯ ಅವರ ವರ್ಗಾವಣೆ. ಐಪಿಎಲ್ 2027ರ ಸೀಸನ್‌ಗೂ ಮುನ್ನ ನಡೆದ ಆಟಗಾರರ ಟ್ರೇಡ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ತೆರಳಿದ್ದಾರೆ. ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಹಾರ್ದಿಕ್ ತಂಡದಿಂದ ಹೊರಬಂದಿರುವ ಹಿನ್ನೆಲೆಯಲ್ಲಿ ನಾಯಕತ್ವದ ಜವಾಬ್ದಾರಿ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಹೆಸರುಗಳೂ ನಾಯಕತ್ವದ ರೇಸ್‌ನಲ್ಲಿ ಕೇಳಿಬಂದಿದ್ದವು. ಆದರೆ ಇದೀಗ ರೋಹಿತ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
ಅಧಿಕೃತ ಘೋಷಣೆ ಬಾಕಿ
ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ಫೋಟೋ ರೋಹಿತ್ ಅವರ 2020ರ ಐಪಿಎಲ್ ಪ್ರಶಸ್ತಿ ಸಂಭ್ರಮದ ಸಂದರ್ಭವನ್ನು ನೆನಪಿಸಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕೆಲವರು 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಸಂಭ್ರಮಿಸಿದ ರೀತಿಗೂ ಈ ಚಿತ್ರವನ್ನು ಹೋಲಿಸಿದ್ದಾರೆ.
ಆದರೆ ಮುಂಬೈ ಇಂಡಿಯನ್ಸ್ ಈವರೆಗೆ ನಾಯಕನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ರೋಹಿತ್ ನಾಯಕತ್ವಕ್ಕೆ ಮರಳಿದ್ದಾರೆ ಎಂಬ ಖಚಿತ ಘೋಷಣೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027ರ ಆಟಗಾರರ ಹರಾಜಿಗೂ ಮುನ್ನ ಈ ಕುರಿತು ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ.