ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸಿದ್ರಾ? ಬ್ಯಾಟ್‌ನಿಂದಲೇ ಉತ್ತರ ಕೊಟ್ಟ ಹಿಟ್‌ಮ್ಯಾನ್!

ರೋಹಿತ್‌ ಶರ್ಮಾ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆ, ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಎಲ್ಲ ಪ್ರಶ್ನೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ಒಡಿಐ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿದ ಹಿಟ್‌ಮ್ಯಾನ್‌ ಖಾತಿಯ ಚಾಂಪಿಯನ್‌ ಆಟಗಾರನ ದಾಖಲೆಗಳು ಮತ್ತು 2027ರ ವಿಶ್ವಕಪ್‌ ಭವಿಷ್ಯದ ವಿಶ್ಲೇಷಣೆ ಇಲ್ಲಿದೆ.

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ (ಚಿತ್ರ: ಬಿಸಿಸಿಐ).

ಕಳೆದ ಕೆಲವು ದಿನಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಪ್ರಶ್ನೆ ಭಾರಿ ಚರ್ಚೆಗೆ ಕಾರಣವಾಗಿದೆ. ಟೀಮ್ ಇಂಡಿಯಾದ ಅನುಭವಿ ಆರಂಭಿಕ ಬ್ಯಾಟರ್‌ ಹಾಗೂ ಮಾಜಿ ನಾಯಕ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರಾ? ಸಾಮಾಜಿಕ ಜಾಲತಾಣಗಳಿಂದ ಹಿಡಿದು ಕ್ರಿಕೆಟ್‌ ಪಂಡಿತರ ವರೆಗೂ ಇದೇ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

2024ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಬಳಿಕ ರೋಹಿತ್‌ ಶರ್ಮಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ನಂತರ ಟೆಸ್ಟ್‌ ಕ್ರಿಕೆಟ್‌ನಿಂದಲೂ ಹಿಂದೆ ಸರಿದ ಹಿನ್ನೆಲೆಯಲ್ಲಿ, ಅವರು 2027ರ ಏಕದಿನ ವಿಶ್ವಕಪ್‌ವರೆಗೆ ಆಡುತ್ತಾರಾ ಅಥವಾ ಅದಕ್ಕೂ ಮೊದಲೇ ನಿವೃತ್ತಿಯಾಗುತ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತ್ತು.

ಈ ನಡುವೆ, ಮುಂದಿನ ವಿಶ್ವಕಪ್‌ಗೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಆಯ್ಕೆ ಸಮಿತಿ ಚಿಂತನೆ ನಡೆಸುತ್ತಿದೆ ಎಂಬ ಊಹಾಪೋಹಗಳು ಹರಿದಾಡಿದವು. ಕೆಲವು ವರದಿಗಳಲ್ಲಿ ರೋಹಿತ್‌ ಶರ್ಮಾ ಅವರ ಭವಿಷ್ಯದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ವ್ಯಕ್ತವಾಗಿದ್ದವು. ಆದರೆ, ಈ ಎಲ್ಲ ಊಹಾಪೋಹಗಳಿಗೆ ರೋಹಿತ್‌ ಶರ್ಮಾ ಯಾವುದೇ ಮಾತಿನ ಬದಲು ತಮ್ಮ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ.

ಕೆ.ಎಲ್ ರಾಹುಲ್‌ಗೆ ಹಿಂಬಡ್ತಿ ನೀಡಿದ ಗಂಭೀರ್ ವಿರುದ್ಧ ಮಾಜಿ ನಾಯಕನ ತೀವ್ರ ಟೀಕೆ

ಲಾರ್ಡ್ಸ್‌ನಲ್ಲಿ ಐತಿಹಾಸಿಕ ಶತಕ

ಇಂಗ್ಲೆಂಡ್‌ನ ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅದ್ಭುತ ಶತಕ ಸಿಡಿಸಿ ಮತ್ತೊಮ್ಮೆ ತಮ್ಮ ಕ್ಲಾಸ್‌ ಅನ್ನು ಸಾಬೀತುಪಡಿಸಿದರು. ಅನುಭವ, ತಾಳ್ಮೆ ಮತ್ತು ಆಕ್ರಮಣಕಾರಿ ಬ್ಯಾಟಿಂಗ್‌ ಎಲ್ಲವನ್ನೂ ಒಟ್ಟಿಗೆ ಪ್ರದರ್ಶಿಸಿದ ಅವರ ಇನ್ನಿಂಗ್ಸ್‌, ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿದವರಿಗೆ ಸೂಕ್ತ ಉತ್ತರವಾಗಿದೆ.

ಈ ಶತಕದ ಮೂಲಕ ರೋಹಿತ್‌ ಶರ್ಮಾ ಮತ್ತೊಂದು ವಿಶೇಷ ಸಾಧನೆ ಒಂದನ್ನೂ ಮಾಡಿದ್ದಾರೆ. ಲಾರ್ಡ್ಸ್‌ನಲ್ಲಿ ಏಕದಿನ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಇಂಗ್ಲೆಂಡ್‌ ನೆಲದಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಪ್ರವಾಸಿ ಬ್ಯಾಟರ್‌ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು.

ಲಾರ್ಡ್ಸ್‌ ಶತಕದ ಬಳಿಕ ರೋಹಿತ್‌ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಶುಭಮನ್‌ ಗಿಲ್!

ದಾಖಲೆಗಳ ಸರದಾರ

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಈಗಾಗಲೇ ಅನೇಕ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸಿರುವ ವಿಶ್ವದ ಏಕೈಕ ಬ್ಯಾಟರ್‌ ಎಂಬ ಹೆಗ್ಗಳಿಕೆ ಅವರದ್ದು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅನೇಕ ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿರುವ ಅವರು, ನಾಯಕನಾಗಿ ಟಿ20 ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಸಾಧನೆಯನ್ನೂ ಮಾಡಿದ್ದಾರೆ.

ಇಂತಹ ಅನುಭವ ಮತ್ತು ಸಾಧನೆಗಳನ್ನು ಗಮನಿಸಿದಾಗ, ಇನ್ನೂ ದೊಡ್ಡ ಟೂರ್ನಿಗಳಲ್ಲಿ ರೋಹಿತ್‌ ಅವರ ಪಾತ್ರ ಮಹತ್ವದ್ದಾಗಿರಬಹುದು ಎಂಬ ಅಭಿಪ್ರಾಯವನ್ನು ಅನೇಕ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಬೆಂಬಲ ನೀಡಿ ಅಥವಾ ಬಿಟ್ಟು ಬಿಡಿ: ಬಿಸಿಸಿಐಗೆ ಯುವರಾಜ್‌ ಸಿಂಗ್‌ ಸಂದೇಶ!

2027ರ ವಿಶ್ವಕಪ್‌ ದೃಷ್ಟಿಯಲ್ಲಿ ಅನುಭವವೂ ಅಗತ್ಯ

ಮುಂದಿನ ಅಂದ್ರೆ 2027ರ ಐಸಿಸಿ ಏಕದಿನ ವಿಶ್ವಕಪ್‌ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಆತಿಥ್ಯದಲ್ಲಿ ನಡೆಯಲಿದೆ. ವೇಗದ ಬೌಲಿಂಗ್‌ಗೆ ನೆರವಾಗುವ ಅಲ್ಲಿನ ಪಿಚ್‌ಗಳಲ್ಲಿ ಅನುಭವಿ ಬ್ಯಾಟರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ. ಯುವ ಆಟಗಾರರಿಗೆ ಅವಕಾಶ ನೀಡುವುದು ಅಗತ್ಯವಾದರೂ, ದೊಡ್ಡ ಟೂರ್ನಿಗಳಲ್ಲಿ ಅನುಭವವೂ ಅಷ್ಟೇ ಮುಖ್ಯ ಎಂಬುದನ್ನು ಹಿಂದಿನ ವಿಶ್ವಕಪ್‌ಗಳು ಸಾಬೀತುಪಡಿಸಿವೆ.

ಅಂತಿಮವಾಗಿ ಯಾರು ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬ ನಿರ್ಧಾರ ಆಯ್ಕೆ ಸಮಿತಿಯದ್ದೇ. ಆದರೆ, ರೋಹಿತ್‌ ಶರ್ಮಾ ಅವರಂತಹ ಅನುಭವಿ ಆಟಗಾರ ಇನ್ನೂ ಭಾರತ ತಂಡಕ್ಕೆ ಮಹತ್ವದ ಕೊಡುಗೆ ನೀಡಬಲ್ಲರು ಎಂಬ ನಂಬಿಕೆ ಅನೇಕ ಕ್ರಿಕೆಟ್‌ ಅಭಿಮಾನಿಗಳಲ್ಲಿದೆ.

ಮುಂದಿನ ದಿನಗಳಲ್ಲಿ ರೋಹಿತ್‌ ಶರ್ಮಾ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ, ತಮ್ಮ ಬಗ್ಗೆ ಎಷ್ಟೇ ಚರ್ಚೆಗಳು ನಡೆದರೂ, ಅವಕ್ಕೆ ಉತ್ತರ ನೀಡುವ ಅತ್ಯುತ್ತಮ ಮಾರ್ಗ ಬ್ಯಾಟ್‌ ಎನ್ನುವುದನ್ನು ರೋಹಿತ್‌ ಶರ್ಮಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.