ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಋತುರಾಜ್‌ ಗಾಯಕ್ವಾಡ್‌ ಶತಕದ ಬಲದಿಂದ ಶ್ರೀಲಂಕಾ ಎ ತಂಡವನ್ನು ಮಣಿಸಿದ ಭಾರತ -ಎ!

IND-A vs SL-A Match Highlights: ಋತುರಾಜ್‌ ಗಾಯಕ್ವಾಡ್‌ ಅವರ ಶತಕದ ಬಲದಿಂದ ಭಾರತ ಎ ತಂಡ, ಆತಿಥೇಯ ಶ್ರೀಲಂಕಾ ಎ ತಂಡದ ವಿರುದ್ಧ 8 ರನ್‌ಗಳ ಜಯ ಸಾಧಿಸಿತು. ಆ ಮೂಲಕ ಮೂರು ರಾಷ್ಟ್ರಗಳ ತ್ರಿಕೋನ ಎ ಸರಣಿಯಲ್ಲಿ ಭಾರತ ಎ ತಂಡ ಶುಭಾರಂಭ ಕಂಡಿದೆ. 101 ರನ್‌ ಗಳಿಸಿದ ಗಾಯಕ್ವಾಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶ್ರೀಲಂಕಾ ʻಎʼ ವಿರುದ್ಧ ಭಾರತ ʻಎʼ ತಂಡಕ್ಕೆ 8  ರನ್‌ ಜಯ!

ಶ್ರೀಲಂಕಾ ಎ ವಿರುದ್ಧ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌. -

Profile
Ramesh Kote Jun 9, 2026 7:16 PM

ದಾಂಬುಲಾ: ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರ ಭರ್ಜರಿ ಶತಕದ ಬಲದಿಂದ ಭಾರತ ಎ ತಂಡ, ಮೂರು ರಾಷ್ಟ್ರಗಳ ತ್ರಿಕೋನ ಎ ಸರಣಿಯ (Tri Nation A Series in Sri Lanka 2026) ಮೊದಲನೇ ಪಂದ್ಯದಲ್ಲಿ (INDA vs SLA) ಶ್ರೀಲಂಕಾ ಎ ಎದುರು 8 ರನ್‌ಗಳ ಗೆಲುವು ಪಡೆಯಿತು. ಅ ಮೂಲಕ ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ಎ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 277 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಎ ತಂಡ, ಕೊನೆಯವರೆಗೂ ಹೋರಾಟ ನಡೆಸಿದರೂ 48.5 ಓವರ್‌ಗಳಿಗೆ 269 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಮಂಗಳವಾರ ಇಲ್ಲಿನ ರಣಗಿರಿ ದಾಂಬುಲಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಐಪಿಎಲ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ವೈಭವ್‌ ಸೂರ್ಯವಂಶಿ (13), ಪ್ರಭ ಸಿಮ್ರಾನ್‌ (2) ಅವರು ಇನಿಂಗ್ಸ್‌ ಆರಂಭಿಸಿದರೂ ಬಹುಬೇಗ ವಿಕೆಟ್‌ ಒಪ್ಪಿಸಿ ನಿರಾಶೆ ಮೂಡಿಸಿದರು. ಅದರಲ್ಲಿಯೂ ವಿಶೇಷವಾಗಿ ವೈಭವ್‌ ಸೂರ್ಯವಂಶಿ ಐಪಿಎಲ್‌ ಟೂರ್ನಿಯಲ್ಲಿನ ಫಾರ್ಮ್‌ ಅನ್ನು ಮುಂದುವರಿಸುವಲ್ಲಿ ವಿಫಲರಾದರು.

ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಅಲ್ಲವೇ ಅಲ್ಲ! ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಹೆಸರಿಸಿದ ಆರ್‌ ಅಶ್ವಿನ್‌

ಋತುರಾಜ್‌ ಗಾಯಕ್ವಾಡ್‌ ಶತಕ

ಮೂರನೇ ಕ್ರಮಾಂಕದಲ್ಲಿ ಪ್ರಿಯಾಂಶ್‌ ಆರ್ಯ 32 ರನ್‌ ಗಳಿಸಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಋತುರಾಜ್‌ ಗಾಯಕ್ವಾಡ್‌ ಅದ್ಭುತ ಇನಿಂಗ್ಸ್‌ ಆಡಿದರು. ಅವರು ಆಡಿದ 114 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 101 ರನ್‌ ಗಳಿಸಿದರು ಹಾಗೂ 97 ಎಸೆತಗಳಲ್ಲಿ 60 ರನ್‌ ಗಳಿಸಿದ ತಿಲಕ್‌ ವರ್ಮಾ ಅವರ ಜೊತೆಗೆ 150 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ಎ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು. ಕೊನೆಯಲ್ಲಿ ಆಯುಷ್‌ ಬದೋನಿ 24 ರನ್‌ ಹಾಗೂ ಸುಯಾಶ್‌ ಶೆಡ್ಗೆ ಅಜೇಯ 26 ರನ್‌ ಗಳಿಸಿದರು.



ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಎ ತಂಡದ ಪರ ಇನಿಂಗ್ಸ್‌ ಆರಂಭಿಸಿದ ನಿರೋಶನ್‌ ಡಿಕ್ವೆಲ್‌ ಹಾಗೂ ಆವಿಷ್ಕಾ ಫೆರ್ನಾಂಡೊ 93 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, 17ನೇ ಓವರ್‌ನಲ್ಲಿ ಆಯುಷ್‌ ಬದೋನಿ ಅವರು ಈ ದೊಡ್ಡ ಜೊತೆಯಾಟವನ್ನು ಬ್ರೇಕ್‌ ಮಾಡಿದರು. 45 ರನ್‌ ಗಳಿಸಿದ್ದ ಫೆರ್ನಾಂಡೊ ಅವರನ್ನು ಔಟ್‌ ಮಾಡಿದರು. ನಂತರ 19ನೇ ಓವರ್‌ನಲ್ಲಿ ಪುನಃ ಬೌಲಿಂಗ್‌ಗೆ ಬಂದ ಬದೋನಿ, 47ನೇ ರನ್‌ ಗಳಿಸಿ ಅರ್ಧಶತಕದಂಚಿನಲ್ಲಿ ಆಡುತ್ತಿದ್ದ ನಿರೋಶನ್‌ ಡಿಕ್ವೆಲ್‌ ಅವರನ್ನು ಔಟ್‌ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬಂದಿದ್ದ ನುವಾನಿದು ಫೆರ್ನಾಂಡೊ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ವಿಪ್ರಜ್‌ ನಿಗಮ್‌ ಬಿಡಲಿಲ್ಲ.



ಸಹನ್‌ ಅರಚಿಗೆ ಏಕಾಂಗಿ ಹೋರಾಟ ವ್ಯರ್ಥ

ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ಸದೀರ ಸಮರವಿಕ್ರಮ ಹಾಗೂ ಸಹನ್‌ ಅರಚಿಗೆ ಜೋಡಿ ಮಧ್ಯಮ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳನ್ನು ಬಲವಾಗಿ ಕಾಡಿದರು. ಈ ಇಬ್ಬರೂ 78 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಮ್ಮ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದ್ದರು. 46 ರನ್‌ ಗಳಿಸಿದ ಬಳಿಕ ಸದೀರ ಸಮರವಿಕ್ರಮ ಅವರು ಔಟ್‌ ಆದರು. ಕೊನೆಯವರೆಗೂ ಹೋರಾಟ ನಡೆಸಿದ ಸಹನ್‌ ಅರಚಿಗೆ 72 ಎಸೆತಗಳಲ್ಲಿ 74 ರನ್‌ ಗಳಿಸಿದ ಬಳಿಕ 48ನೇ ಓವರ್‌ನಲ್ಲಿ ಔಟ್‌ ಆದರು. ಇವರಿಗೆ ಕೊನೆಯವರೆಗೂ ಯಾರು ಸರಿಯಾಗಿ ಸಾಥ್‌ ನೀಡಲಿಲ್ಲ. ಅಂತಿಮವಾಗಿ ಶ್ರೀಲಂಕಾ ಎ ತಂಡ 269 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಭಾರತ ಎ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಅರ್ಷದ್‌ ಖಾನ್‌, ಅನುಕುಲ್‌ ರಾಯ್‌, ಆಯುಷ್‌ ಬದೋನಿ ಹಾಗೂ ವಿಪ್ರಜ್‌ ನಿಗಮ್‌ ತಲಾ ಎರಡೆರಡು ವಿಕೆಟ್‌ ಪಡೆದರು.