ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ಗೆ ಆಫ್ಘನ್ ತತ್ತರ, ಭಾರತಕ್ಕೆ ಟಿ20ಐ ಸರಣಿ!

IND vs AFG 2nd T20I Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗದಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಭಾರತ ತಂಡ, ಅಫ್ಘಾನಿಸ್ತಾನ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ಸಂಜು ಬ್ಯಾಟಿಂಗ್‌ ಅಬ್ಬರಕ್ಕೆ ಆಫ್ಘನ್‌ ಶರಣು, ಭಾರತಕ್ಕೆ ಟಿ20ಐ ಸರಣಿ!

ಅಫ್ಘಾನಿಸ್ತಾನ ವಿರುದ್ಧ ಮಿಂಚಿದ ನಿತೀಶ್‌ ರೆಡ್ಡಿ, ಸಂಜು ಸ್ಯಾಮ್ಸನ್‌. -

Profile
Ramesh Kote Sep 15, 2026 10:24 PM

ನವದೆಹಲಿ: ನಿತೀಶ್‌ ರೆಡ್ಡಿ (Nitish Reddy) ಶಿಸ್ತುಬದ್ಧ ಬೌಲಿಂಗ್‌ ಹಾಗೂ ಸಂಜು ಸ್ಯಾಮ್ಸನ್‌ (Sanju samson) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿಯೂ (IND vs AFG) ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ, ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವೈಫಲ್ಯದಿಂದ ಆತಿಥೇಯ ಆಫ್ಘನ್‌ ತಂಡ, ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ವಿಫಲವಾಯಿತು.

ಮಂಗಳವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 14.5 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 163 ರನ್‌ ಗಳಿಸಿ ಗೆದ್ದು ಬೀಗಿತು. ಆರಂಭದಲ್ಲಿ ಅಬ್ಬರಿಸಿದ ಅಭಿಷೇಕ್‌ ಶರ್ಮಾ, 19 ಎಸೆತಗಳಲ್ಲಿ ಸ್ಪೋಟಕ 39 ರನ್‌ಗಳನ್ನು ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ವಿಕೆಟ್‌ ಒಪ್ಪಿಸಿದರು.

IND vs AFG: ಭಾರತ ತಂಡಕ್ಕೆ ಆಘಾತ; ಆಫ್ಘನ್‌ ಟಿ20ಐ ಸರಣಿಯಿಂದ ವರುಣ್‌ ಚಕ್ರವರ್ತಿ ಔಟ್‌?

ಸಂಜು ಸ್ಯಾಮ್ಸನ್‌ ಸ್ಪೋಟಕ ಅರ್ಧಶತಕ

ಮೊದಲನೇ ಪಂದ್ಯದಲ್ಲಿ ಕೇವಲ 10 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದ ಸಂಜು ಸ್ಯಾಮ್ಸನ್‌, ಎರಡನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದರು. ಅವರು ಆಡಿದ ಕೇವಲ 22 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 57 ರನ್‌ ಚಚ್ಚಿದರು. ಅದರಲ್ಲಿಯೂ ಅವರು 259ರ ಸ್ಟೈಕ್‌ ರೇಟ್‌ನಲ್ಲಿ ಬ್ಯಾಟ್‌ ಮಾಡಿದ್ದು ಎಲ್ಲರ ಗಮನವನ್ನು ಸೆಳೆಯಿತು. ಆರಂಭಿಕ ಜೊತೆಗಾರ ಅಭಿಷೇಕ್‌ ಶರ್ಮಾ ಜೊತೆಗೆ ಸಂಜು 88 ರನ್‌ಗಳ ಅಬ್ಬರದ ಜೊತೆಯಾಟವನ್ನು ಆಡಿದರು. 7ನೇ ಓವರ್‌ನ ಕೊನೆಯ ಎಸೆತದಲ್ಲಿ ರಶೀದ್‌ ಖಾನ್‌ಗೆ ದೊಡ್ಡ ಹೊಡೆತಕ್ಕೆ ಕೈಹಾಕಿ ಸಂಜು ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಟ್ಟು ವಿಕೆಟ್‌ ಒಪ್ಪಿಸಿದರು.



ಕೊನೆಯವರೆಗೂ ಅಜೇಯರಾಗಿ ಉಳಿದ ಇಶಾನ್‌ ಕಿಶನ್‌ ಸ್ಪೋಟಕ 38 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಫ್ಘಾನಿಸ್ತಾನ ತಂಡದ ಪರ ಸ್ಪಿನ್‌ ಮೋಡಿ ಮಾಡಿದ ರಶೀದ್‌ ಖಾನ್‌ 3 ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಆಫ್ಘನ್‌ ತಂಡದ ಮೊತ್ತ ಕಡಿಮೆಯಿದ್ದ ಕಾರಣ ರಶೀದ್‌ ಬೌಲಿಂಗ್‌ ಪಂದ್ಯದ ಫಲಿತಾಂಶವನ್ನು ತಿರುಗಿಸಲು ಸಾಧ್ಯವಾಗಲಿಲ್ಲ.

159 ರನ್‌ ಕಲೆ ಹಾಕಿದ್ದ ಅಫ್ಘಾನಿಸ್ತಾನ

ಇದಕ್ಕೂ ಮುನ್ನ ಟಾಸ್‌ ಗೆದ್ದು ಎದುರಾಳಿ ಅಫ್ಘಾನಿಸ್ತಾನ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಆಫ್ಘನ್‌ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. 20 ಓವರ್‌ಗಳನ್ನು ಪೂರ್ಣಗೊಳಿಸಿದರೂ ಅಫ್ಘಾನಿಸ್ತಾನ ತಂಡ, 8 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತ್ತು. ಆಫ್ಘನ್‌ ಪರ ಇಬ್ರಾಹಿಂ ಝದ್ರಾನ್‌ 37 ರನ್‌, ರಶೀದ್‌ ಖಾನ್‌ 28 ರನ್‌ ಹಾಗೂ ದಾರ್ವಿಸ್‌ ರಸೂಲಿ 26 ರನ್‌ಗಳನ್ನು ಗಳಿಸಿದರು.



ಆರಂಭಿಕರಾಗಿ ಕ್ರೀಸ್‌ಗೆ ಇಳಿದಿದ್ದ ರಹಮಾನುಲ್ಲಾ ಗುರ್ಬಝ್‌ ಕಳೆದ ಪಂದ್ಯದಂತೆ ಈ ಹಣಾಹಣಿಯಲ್ಲಿಯೂ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಇಬ್ರಾಹಿಂ ಝದ್ರಾನ್‌ ಹಾಗೂ ಸೆಡಿಕುಲ್ಹಾ ಅಟಲ್‌ 51 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. 9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ನಿತೀಶ್‌ ರೆಡ್ಡಿ, 33 ಎಸೆತಗಳಲ್ಲಿ 37 ರನ್‌ ಗಳಿಸಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಇಬ್ರಾಹಿಂ ಝದ್ರಾನ್‌ ಅವರನ್ನು ಔಟ್‌ ಮಾಡಿದರು. ಇವರ ಬೆನ್ನಲ್ಲೆ ಸೆಡಿಕುಲ್ಲಾ ಅಟಲ್‌ ಅವರನ್ನು ರವಿ ಬಿಷ್ಣೋಯ್‌ ಅವರಿಗೆ ವಿಕೆಟ್‌ ಒಪ್ಪಿಸಿದರು.

IND vs AFG: 11 ಪಂದ್ಯಗಳಲ್ಲಿ ಟಾಸ್‌ ಗೆದ್ದು ನಾಯಕನಾಗಿ ವಿಶ್ವ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

ಗುಲ್ಬದ್ದಿನ್‌ ನೈಬ್‌ (10) ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್‌ (11) ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದೆ ಕ್ರಮವಾಗಿ ನಿತೀಶ್‌ ರೆಡ್ಡಿ ಮತ್ತು ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಪ್ರತಿರೋಧ ತೋರಿದ ದಾರ್ವಿಸ್‌ ರಸೋಲಿ 26 ರನ್‌, ಮೊಹಮ್ಮದ್‌ ನಬಿ 20 ರನ್‌ ಹಾಗೂ ಕೊನೆಯಲ್ಲಿ ರಶೀದ್‌ ಖಾನ್‌ ಕೇವಲ 16 ಎಸೆತಗಳಲ್ಲಿ ಅಜೇಯ 28 ರನ್‌ ಸಿಡಿಸಿ ತಮ್ಮ ತಂಡದ ಮೊತ್ತ 15ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.



ನಿತೀಶ್‌ಕುಮಾರ್‌ ರೆಡ್ಡಿಗೆ 3 ವಿಕೆಟ್‌

ಭಾರತದ ಪರ ಆಲ್‌ರೌಂಡರ್‌ ನಿತೀಶ್‌ಕುಮಾರ್‌ ರೆಡ್ಡಿ 3 ಓವರ್‌ಗಳಿಗೆ 24 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಅರ್ಷದೀಪ್‌ ಸಿಂಗ್‌ 35 ರನ್‌ ನೀಡಿ ದುಬಾರಿಯಾದರೂ 2 ವಿಕೆಟ್‌ಗಳನ್ನು ಕಿತ್ತು ಸಮಾಧಾನ ಪಟ್ಟರು. ಜಸ್‌ಪ್ರೀತ್‌ ಬುಮ್ರಾ, ಅಕ್ಷರ್‌ ಪಟೇಲ್‌ ಹಾಗೂ ರವಿ ಬೊಷ್ಣೋಯ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಅಫ್ಘಾನಿಸ್ತಾನ: 20 ಓವರ್‌ಗಳಿಗೆ 159-8 (ಇಬ್ರಾಹಿಂ ಝದ್ರಾನ್‌ 37, ರಶೀದ್‌ ಖಾನ್‌ 28*, ದಾರ್ವಿಶ್‌ ರಸೋಲಿ 26; ನಿತೀಶ್‌ಕುಮಾರ್‌ ರೆಡ್ಡಿ 24 ಕ್ಕೆ 3, ಅರ್ಷದೀಪ್‌ ಸಿಂಗ್‌ 35 ಕ್ಕೆ 2)

ಭಾರತ: 14.5 ಓವರ್‌ಗಳಿಗೆ 163-3 (ಸಂಜು ಸ್ಯಾಮ್ಸನ್‌ 57, ಇಶಾನ್‌ ಕಿಶನ್‌ 38*, ಅಭಿಷೇಕ್‌ ಶರ್ಮಾ 39; ರಶೀದ್‌ ಖಾನ್‌ 36ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸಂಜು ಸ್ಯಾಮ್ಸನ್‌