ಹೈದರಾಬಾದ್: ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy 2025) ಟೂರ್ನಿಯಲ್ಲಿ ಬರೋಡಾ ತಂಡದ ಯುವ ಬ್ಯಾಟ್ಸ್‌ಮನ್ ಅಮಿತ್ ಪಾಸಿ (Amit Passi) ಅವರು ತಮ್ಮ ಟಿ20 ಪದಾರ್ಪಣೆ ಪಂದ್ಯದಲ್ಲಿಯೇ ಶತಕವನ್ನು ಬಾರಿಸಿದ್ದಾರೆ. ಸೋಮವಾರ ಇಲ್ಲಿನ ಜಿಮ್ಖಾನ ಗ್ರೌಂಡ್‌ನಲ್ಲಿ ನಡದಿದ್ದ ಸರ್ವಿಸಸ್ ಎದುರಿನ ಪಂದ್ಯದಲ್ಲಿ (Baroda vs Services) ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅಮಿತ್ ಪಾಸಿ ಕೇವಲ 55 ಎಸೆತಗಳಲ್ಲಿ 114 ರನ್‌ಗಳನ್ನು ಬಾರಿಸಿದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸುವ ಮೂಲಕ ಅಮಿತ್ ಪಾಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ತಮ್ಮ ಸ್ಪೋಟಕ ಶತಕದ ಇನಿಂಗ್ಸ್‌ನಲ್ಲಿ ಅವರು 9 ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ ಪುರುಷರ ಟಿ20 ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು ಪಾಕಿಸ್ತಾನ ತಂಡದ ಬಿಲಾಲ್ ಆಸಿಫ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಿಲಾಲ್ ಆಸಿಫ್, 48 ಎಸೆತಗಳಲ್ಲಿ 114 ರನ್‌ಗಳನ್ನು ಕಲೆ ಹಾಕಿದ್ದರು. 2015ರ ಮೇ ತಿಂಗಳಲ್ಲಿ ಸಾಯಿಲ್‌ಕೋಟ್ ಸ್ಟಾಲಿನ್ಸ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು.
ಹೈದರಾಬಾದ್ ತಂಡದ ಅಕ್ಷತ್ ರೆಡ್ಡಿ ಹಾಗೂ ಪಂಜಾಬ್ ತಂಡದ ಶಿವಮ್ ಭಾಂಬ್ರಿ ಬಳಿಕ ಟಿ20 ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂರೂ ಶತಕಗಳು ಕೂಡ ಮೂಡಿ ಬಂದಿರುವುದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮೂಡಿ ಬಂದಿರುವುದು ವಿಶೇಷ. ಇದು ಭಾರತೀಯ ದೇಶಿ ಕ್ರಿಕೆಟ್‌ನಲ್ಲಿನ ಅತ್ಯಂತ ವಿಶೇಷ ಚುಟುಕು ಟೂರ್ನಿಯಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ?
ಟಿ20 ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು
ಅಮಿತ್ ಪಾಸಿ (ಬರೋಡಾ)-114 ರನ್‌ಗಳು- ಸರ್ವಿಸಸ್ ವಿರುದ್ಧ 2025
ಶಿವಮ್ ಭಾಂಬ್ರಿ (ಚಂಡೀಗಢ)-106 ರನ್‌ಗಳು- ಹಿಮಾಚಲ ಪ್ರದೇಶ ವಿರುದ್ಧ 2019
ಅಕ್ಷತ್ ರೆಡ್ಡಿ (ಹೈದರಾಬಾದ್)- 105 ರನ್‌ಗಳು- ಮುಂಬೈ ವಿರುದ್ಧ 2010
ಅಮಿತ್ ಪಾಸಿ ಅವರ ಚೊಚ್ಚಲ ಶತಕದ ಬಲದಿಂದ ಬರೋಡಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 220 ರನ್‌ಗಳನ್ನು ಕಲೆ ಹಾಕಿತು. ಒಂದು ಕಡೆ ಬ್ಯಾಟ್ಸ್‌ಮನ್‌ಗಳು ಸತತವಾಗಿ ವಿಕೆಟ್ ಒಪ್ಪಿಸುತ್ತಿದ್ದರೂ ಮತ್ತೊಂದು ಕಡೆ ಏಕಾಂಗಿಯಾಗಿ ಸ್ಪೋಟಕ ಬ್ಯಾಟ್ ಮಾಡಿದ ಅಮಿತ್, ಕೇವಲ 44 ಎಸೆತಗಳಲ್ಲಿ ಸಿಕ್ಸರ್ ಮೂಲಕ ಶತಕವನ್ನು ಪೂರ್ಣಗೊಳಿಸಿದರು. ಇದಕ್ಕೂ ಮುನ್ನ ಇವರು ಕೇವಲ 24 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ನಂತರ 31 ಎಸೆತಗಳಲ್ಲಿ 64 ರನ್‌ಗಳನ್ನು ಸಿಡಿಸಿದ್ದರು.
ಮುಂಬೈ ಪರ ಸಯ್ಯದ್ ಮುಷ್ತಾಕ್ ಅಲಿ ಸೂಪರ್ ಲೀಗ್ ಪಂದ್ಯ ಆಡಲಿರುವ ಜೈಸ್ವಾಲ್
ಇವರು ಎರಡು ನಿರ್ನಾಯಕ ಜೊತೆಯಾಟಗಳನ್ನು ಕೂಡ ಆಡಿದ್ದರು. ಮೂರನೇ ವಿಕೆಟ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಲಿಕ್ ಶರ್ಮಾ ಅವರೊಂದಿಗೆ 60 ರನ್‌ಗಳನ್ನು ಆಡಿದ್ದ ಪಾಸಿ, ನಂತರ ನಾಯಕ ವಿಷ್ಣು ಸೋಲಂಕಿ ಅವರೊಂದಿಗೆ 75 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದ್ದರು.
ಜಿತೇಶ್ ಶರ್ಮಾ ಅವರ ಸ್ಥಾನದಲ್ಲಿ ಅಮಿತ್ ಪಾಸಿ ಅವರು ಬರೋಡಾ ತಂಡದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿದ್ದರು. ಡಿಸೆಂಬರ್ 9 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಿಮಿತ್ತ ಹಾರ್ದಿಕ್ ಪಾಂಡ್ಯ ಹಾಗೂ ಜಿತೇಶ್ ಶರ್ಮಾ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರು. ಹಾಗಾಗಿ ಬರೋಡಾ ಪ್ಲೇಯಿಂಗ್ xiನಲ್ಲಿ ಅಮಿತ್ ಪಾಸಿ ಅವರಿಗೆ ಆಡಲು ಅವಕಾಶ ಲಭಿಸಿತು.