ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2025: ಸ್ಮೃತಿ ಮಂಧಾನ ಸ್ಫೋಟಕ ಅರ್ಧ ಶತಕ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

ವಡೋದರ ಕೋಟಂಬಿ ಮೈದಾನದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ನ ರೋಚಕ ಹಣಾಹಣಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 19.3 ಓವರ್‌ನಲ್ಲಿ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಜಯ ದಾಖಲಿಸಿತು.

ಸ್ಮೃತಿ ಮಂಧಾನ.

ಗಾಂಧಿನಗರ: ವಡೋದರ ಕೋಟಂಬಿ ಮೈದಾನ (Vadodara Kotambi Stadium)ದಲ್ಲಿ ಸೋಮವಾರ (ಫೆ. 17) ನಡೆದ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025)ನ ರೋಚಕ ಹಣಾಹಣಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಟೂರ್ನಿಯ ಮೊದಲನೇ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದಿದ್ದ ಆರ್‌ಸಿಬಿ ಇದೀಗ ಸತತ 2ನೇ ಗೆಲುವು ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 19.3 ಓವರ್‌ನಲ್ಲಿ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿ ಗೆಲುವಿನ ಕೇಕೆ ಹಾಕಿತು. ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಸ್ಫೋಟಕ ಅರ್ಧಶತಕದಿಂದ ಆರ್‌ಸಿಬಿ ಗೆಲುವಿನ ದಡ ಸೇರಿತು.

ಡೆಲ್ಲಿ ಬ್ಯಾಟಿಂಗ್‌ ಹೇಗಿತ್ತು?

22 ಎಸೆತಗಳಲ್ಲಿ 34 ರನ್‌ ಗಳಿಸಿದ ಜೆಮ್ಮಿಯಾ ರೋಡಿಗ್ರಸ್‌ ಡೆಲ್ಲಿಯ ಟಾಪ್‌ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಸಾರಾ ಬ್ರೈಸ್ 23 ಮತ್ತು ಅನ್ನಬೆಲ್ ಸುಥರ್‌ಲ್ಯಾಂಡ್ 19 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ನಾಯಕಿ ಮೆಗ್ ಲ್ಯಾನಿಂಗ್ 17 ರನ್, ಶಿಖಾ ಪಾಂಡೆ 14 ರನ್​ಗಳ ಕಾಣಿಕೆ ನೀಡಿದರು. ಶಫಾಲಿ ವರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ನಿರಾಸೆ ಮೂಡಿಸಿದರು.

ಇನ್ನು ಆರ್‌ಸಿಬಿ ಪರ ಸಂಘಟಿತ ದಾಳಿ ನಡೆಸಿದ ರೇಣುಕಾ ಸಿಂಗ್‌ 23 ರನ್‌ ನೀಡಿ 3 ವಿಕೆಟ್‌ ಪಡೆದರೆ ಜಾರ್ಜಿಯಾ ವೇರ್‌ಹ್ಯಾಮ್ 25 ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರು. ಕಿಮ್ ಗಾರ್ತ್ ಮತ್ತು ಏಕ್ತಾ ಬಿಶ್ತ್ ತಲಾ 2 ವಿಕೆಟ್ ಪಡೆದರು.



ಆರ್‌ಸಿಬಿ ಬ್ಯಾಟಿಂಗ್‌ ಅಬ್ಬರ

ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಇನ್ನೂ 22 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಆರ್‌ಸಿಬಿ ತಂಡಕ್ಕೆ ನಾಯಕಿ ಸ್ಮೃತಿ ಮಂಧಾನ ಮತ್ತು ಆರಂಭಿಕ ಆಟಗಾರ್ತಿ ಡೇನಿಯಲ್ಲೆ ವ್ಯಾಟ್ ಉತ್ತಮ ಆರಂಭ ನೀಡಿದರು. ಕೇವಲ 47 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂಧಾನ ಬರೋಬ್ಬರಿ 81 ರನ್‌ ಚಚ್ಚಿದರು. ಇದರಲ್ಲಿ 3 ಸಿಕ್ಸರ್‌ ಮತ್ತು 10 ಫೋರ್‌ ಒಳಗೊಂಡಿದೆ. ಇನ್ನು ಡೇನಿಯಲ್ಲೆ ವ್ಯಾಟ್ 33 ಎಸೆತದಲ್ಲಿ 42 ರನ್‌ ಕಲೆ ಹಾಕಿ ಗೆಲುವಿನ ಹಾದಿ ಸುಗಮಗೊಳಿಸಿದರು. ಟೂರ್ನಿಯಲ್ಲಿ ಸತತ 2 ಗೆಲುವು ದಾಖಲಿಸಿರುವ ಆರ್‌ಸಿಬಿ ಇದೀಗ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಮಂಗಳವಾರ (ಫೆ. 18) ಎಂಐ ಮತ್ತು ಜಿಜಿ ಪಂದ್ಯ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: ICC Champions Trophy: 'ಮಿನಿ ವಿಶ್ವಕಪ್‌' ಚಾಂಪಿಯನ್ಸ್‌ ಟ್ರೋಫಿಗೆ ದಿನಗಣನೆ

ಸಂಕ್ಷಿಪ್ತ ಸ್ಕೋರ್‌

ಡೆಲ್ಲಿ ಕ್ಯಾಪಿಟಲ್ಸ್‌: 141 (19.3)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 146/2 (16.2)