ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ (IPL 2027 Mini Auction) ಮಿನಿ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪಟ್ಟಿಯನ್ನು ಪ್ರಕಟಿಸಲು 10 ಐಪಿಎಲ್ ಫ್ರಾಂಚೈಸಿಗಳಿಗೆ ನವೆಂಬರ್ 17ರವರೆಗೆ ಸಮಯಾವಕಾಶವಿದೆ. ಈ ಬಾರಿಯೂ ಎಲ್ಲರ ಗಮನ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೇಲಿದೆ. 19ನೇ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಸಿಎಸ್ಕೆ, ಮಿನಿ ಹರಾಜಿಗೂ ಮುನ್ನ ಹಲವು ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
2026ರ ಐಪಿಎಲ್ ಅಂಕಪಟ್ಟಿಯಲ್ಲಿ ಸಿಎಸ್ಕೆ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳನ್ನು ಗೆದ್ದಿದ್ದ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ಹೀಗಾಗಿ ಮುಂಬರುವ ಆವೃತ್ತಿಗೆ ತಂಡದಲ್ಲಿ ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆಯಿದೆ.
ಆಟಗಾರರ ರಿಟೆನ್ಷನ್ ಗಡುವು ಸಮೀಪಿಸುತ್ತಿರುವ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಸುಬ್ರಮಣಿಯಂ ಬದ್ರಿನಾಥ್, ಸಿಎಸ್ಕೆ ತಂಡದಿಂದ ಬಿಡುಗಡೆಯಾಗಬಹುದಾದ ಆಟಗಾರರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ಮ್ಯಾಥ್ಯೂ ಶಾರ್ಟ್, ರಾಹುಲ್ ಚಹರ್ ಮತ್ತು ಪ್ರಶಾಂತ್ ವೀರ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.
IPL 2027: ಎಂಎಸ್ ಧೋನಿಯ ಐಪಿಎಲ್ ಭವಿಷ್ಯ ನುಡಿದ ಮೊಹಮ್ಮದ್ ಕೈಫ್!
“ಮ್ಯಾಥ್ಯೂ ಶಾರ್ಟ್ ಅವರನ್ನು ಖಚಿತವಾಗಿ ಬಿಡುಗಡೆ ಮಾಡಬೇಕು. ಅವರು ನನಗೆ ಟಿ20 ಕ್ರಿಕೆಟಿಗನಂತೆ ಕಾಣುತ್ತಿಲ್ಲ. ರಾಹುಲ್ ಚಹರ್ ಕೂಡ ಬಿಡುಗಡೆಯಾಗಬಹುದಾದ ಮತ್ತೊಬ್ಬ ಆಟಗಾರ. 5.2 ಕೋಟಿ ರೂಪಾಯಿ ನೀಡಿ ಅವರನ್ನು ತಂಡಕ್ಕೆ ಸೇರಿಸಿಕೊಂಡರೂ ಒಂದು ಪಂದ್ಯದಲ್ಲೂ ಆಡಿಸಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು. ಪ್ರಶಾಂತ್ ವೀರ್ ಅವರನ್ನು ಕೂಡ ಬಿಡುಗಡೆ ಮಾಡುವ ಬಗ್ಗೆ ನಾನು ಯೋಚಿಸುತ್ತೇನೆ."
"ಕಾರ್ತಿಕ್ ಮತ್ತು ಪ್ರಶಾಂತ್ ಇಬ್ಬರಿಗೂ ತಲಾ 15 ಕೋಟಿ ರೂಪಾಯಿ ನೀಡಲಾಗಿದೆ. ಅಲ್ಲದೆ, ನೀವು ಒಬ್ಬ ಭಾರತೀಯ ವೇಗದ ಬೌಲರ್ನನ್ನೂ ಬಿಡುಗಡೆ ಮಾಡಿದ್ದೀರಿ. ಹೀಗಾಗಿ ಮತ್ತೊಬ್ಬ ಉತ್ತಮ ಆಟಗಾರನನ್ನು ಖರೀದಿಸಲು ಹಣದ ಅಗತ್ಯವಿದೆ. ಈ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ಸುಮಾರು 20ರಿಂದ 22 ಕೋಟಿ ರೂಪಾಯಿಗಳನ್ನು ಉಳಿಸಬಹುದು. ಇದರಿಂದ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಲು ಅವಕಾಶ ಸಿಗಲಿದೆ,” ಎಂದು ಬದ್ರಿನಾಥ್ ಹೇಳಿದ್ದಾರೆ.
ಸಿಎಸ್ಕೆ ಉಳಿಸಿಕೊಳ್ಳಬಹುದಾದ ಆಟಗಾರರನ್ನು ಆರಿಸಿದ ಬದ್ರಿನಾಥ್
“ಝ್ಯಾಕ್ ಫೌಲ್ಕ್ಸ್, ಶ್ರೇಯಸ್ ಗೋಪಾಲ್, ಸ್ಪೆನ್ಸರ್ ಜಾನ್ಸನ್ ಮತ್ತು ಮ್ಯಾಟ್ ಹೆನ್ರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ. ವಿದೇಶಿ ವೇಗದ ಬೌಲರ್ನ ಅಗತ್ಯ ಯಾವಾಗ ಎದುರಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಮ್ಯಾಟ್ ಹೆನ್ರಿ ಅನುಭವಿ ಆಟಗಾರ. ಹೀಗಾಗಿ ಇಂತಹ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದೇ ಉತ್ತಮ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರು ಆವೃತ್ತಿಗಳ ಕಾಲ ಸಿಎಸ್ಕೆ ಪರ ಆಡಿದ್ದ ಬದ್ರಿನಾಥ್
ಸುಬ್ರಮಣಿಯಂ ಬದ್ರಿನಾಥ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರು ಆವೃತ್ತಿಗಳ ಕಾಲ ಆಡಿದ್ದರು. 2008ರಲ್ಲಿ ತಂಡವನ್ನು ಸೇರಿಕೊಂಡಿದ್ದ ಅವರು 2013ರವರೆಗೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಸಿಎಸ್ಕೆ ಪರ 95 ಪಂದ್ಯಗಳಲ್ಲಿ ಆಡಿದ್ದ ಬದ್ರಿನಾಥ್, 67 ಇನಿಂಗ್ಸ್ಗಳಲ್ಲಿ ಒಟ್ಟು 1,441 ರನ್ ಗಳಿಸಿದ್ದರು.