ಭಾರತ ತಂಡಕ್ಕಾಗಿ ಇನ್ನೂ 5-6 ಐಸಿಸಿ ಟ್ರೋಫಿ ಗೆಲ್ಲಬೇಕು: ಹಾರ್ದಿಕ್ ಪಾಂಡ್ಯ ಶಪಥ!
Hardik pandya on winning more trophie: ನ್ಯೂಜಿಲೆಂಡ್ ವಿರುದ್ದ ಫೈನಲ್ ಹಣಾಹಣಿಯಲ್ಲಿ ಮಣಿಸಿದ ಭಾರತ ತಂಡ ಮೂರನೇ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದ ಬಳಿಕ ಮಾತನಾಡಿದ್ದ ಹಾರ್ದಿಕ್ ಪಾಂಡ್ಯ, ಭಾರತ ತಂಡಕ್ಕಾಗಿ ಇನ್ನೂ 5-6 ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ.

ಭಾರತಕ್ಕೆ ಇನ್ನೂ 5-6 ಟ್ರೋಫಿ ಗೆದ್ದುಕೊಡಬೇಕೆಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಗೆಲುವಿನ ಬಳಿಕ ಭಾರತ (India) ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಇನ್ನೂ 5 ರಿಂದ 6 ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ. ಭಾನುವಾರ (ಮಾರ್ಚ್ 9) ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ ಮೂರನೇ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ನೆರವು ನೀಡಿದ್ದರು.
ಭಾರತ ತಂಡದ ಯಶಸ್ಸಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪಾತ್ರ ಕೂಡ ಪ್ರಮುಖವಾಗಿದೆ. ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಅವರು ಆಡಿದ್ದ ಐದು ಪಂದ್ಯಗಳಿಂದ 106.45ರ ಸ್ಟ್ರೈಕ್ ರೇಟ್‌ನಲ್ಲಿ 99 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ಬೌಲಿಂಗ್‌ನಲ್ಲಿ ಐದು ಇನಿಂಗ್ಸ್‌ಗಳಿಂದ 35.75ರ ಸರಾಸರಿ ಮತ್ತು 5.83ರ ಎಕಾನಮಿ ರೇಟ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ್ದ ಹಾರ್ದಿಕ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಪ್ರಶಸ್ತಿ ತಂದುಕೊಡುವುದು ನನ್ನ ಯಾವಾಗಲೂ ಗುರಿಯಾಗಿದೆ. ಅಲ್ಲದೆ ಭಾರತಕ್ಕೆ 5 ರಿಂದ 6 ಟ್ರೋಫಿಗಳನ್ನು ಗೆದ್ದುಕೊಡುವ ಗುರಿಯನ್ನು ಹೊಂದಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
"ನನ್ನಿಂದ ಸಾಧ್ಯವಾದಷ್ಟು ಐಸಿಸಿ ಚಾಂಪಿಯನ್‌ಷಿಪ್ಸ್ ಟ್ರೋಫಿಗಳನ್ನು ಗೆದ್ದುಕೊಡುವುದು ಇದಾಗಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ಬಳಿಕ ನಾನು ಕೂಡ ಇದೇ ಮಾತನ್ನು ಹೇಳಿದ್ದೆ. ಇನ್ನು ಮುಗಿದಿಲ್ಲ. ನನಗೆ ಇನ್ನೂ 5 ರಿಂದ 6 ಟ್ರೋಫಿಗಳನ್ನು ಗೆಲ್ಲುವುದು ಬಾಕಿ ಇದೆ. ಇದೀಗ ಮತ್ತೊಂದು ಭಾರತ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
2017ರ ಫೈನಲ್ ಸೋಲನ್ನು ನೆನೆದ ಹಾರ್ದಿಕ್ ಪಾಂಡ್ಯ
ಭಾರತ ತಂಡ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಸೋತು ರನ್ನರ್ ಅಪ್ ಆಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನವನ್ನು ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಇದೀಗ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಅಂದು ಪಂದ್ಯವನ್ನು ಮುಗಿಸಲು ನನ್ನಿಂದ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ನಾವು ಚಾಂಪಿಯನ್ ಆಗಿದ್ದೇವೆ ಎಂದಿದ್ದಾರೆ.
IND vs NZ: ರೋಹಿತ್ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್ ಸ್ಯಾಂಟ್ನರ್!
"2017ರ ಕಾರ್ಯ ಇನ್ನೂ ಬಾಕಿ ಇತ್ತು. ಅಂದು ನಾನು ನನ್ನ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇಂದಿನ ರಾತ್ರಿ (ಮಾರ್ಚ್ 9) ನಾನು ಕೂಡ ಚಾಂಪಿಯನ್ಸ್ ಟ್ರೋಫಿ ವಿಜೇತ ಎಂದು ಹೇಳಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ಇಲ್ಲಿನ ಶಬ್ದ ತುಂಬಾ ಚೆನ್ನಾಗಿದೆ," ಎಂದು ಟೀಮ್ ಇಂಡಿಯಾ ಆಲ್‌ರೌಂಡರ್ ಹೇಳಿದ್ದಾರೆ.
ಕಿವೀಸ್ ಎದುರು 45 ರನ್ ಸಿಡಿಸಿದ್ದ ಪಾಂಡ್ಯ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು 45 ಎಸೆತಗಳಿಂದ ನಿರ್ಣಾಯಕ 45 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 249 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಅವರು 8 ಓವರ್‌ಗಳಿಗೆ 31 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು. ಈ ಪಂದ್ಯದಲ್ಲಿ ಅವರು ಸೌದ್ ಶಕೀಲ್ ಮತ್ತು ಬಾಬರ್ ಆಝಮ್ ವಿಕೆಟ್ ಪಡೆದಿದ್ದರು.