ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy 2026: ತಿಲಕ್‌ ವರ್ಮಾ ಭರ್ಜರಿ ಶತಕ, ದಕ್ಷಿಣ ವಲಯಕ್ಕೆ 90 ರನ್‌ ಮುನ್ನಡೆ!

ಉತ್ತರ ವಲಯ ಎದುರು 2026ರ ದುಲೀಪ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯ ನಾಯಕ ತಿಲಕ್‌ ವರ್ಮಾ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿಯೂ ತಿಲಕ್‌ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಹಾಗೂ ಇವರ ಶತಕದ ಬಲದಿಂದ ದಕ್ಷಿಣ ವಲಯ ಎರಡನೇ ದಿನದಾಟದ ಅಂತ್ಯಕ್ಕೆ 90 ರನ್‌ ಮುನ್ನಡೆ ಸಾಧಿಸಿದೆ.

ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಶತಕ ಬಾರಿಸಿದ ತಿಲಕ್‌ ವರ್ಮಾ.

ಬೆಂಗಳೂರು: ನಾಯಕ ತಿಲಕ್ ವರ್ಮಾ (Tilak Verma) ಅವರ ತಾಳ್ಮೆಯ (ಅಜೇಯ 106 ರನ್‌ಗಳು) ಶತಕ ಹಾಗೂ ಶ್ರೇಯಸ್ ಗೋಪಾಲ್ (Shreyas Gopal) ಅವರ (87 ರನ್‌ಗಳು) ಅರ್ಧಶತಕದ ನೆರವಿನಿಂದ ದಕ್ಷಿಣ ವಲಯ, ದುಲೀಪ್ ಟ್ರೋಫಿ (Duleep Trophy 2026) ಸೆಮಿಫೈನಲ್‌ನಲ್ಲಿ ಉತ್ತರ ವಲಯದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ 90 ರನ್‌ಗಳ ಮುನ್ನಡೆ ಸಾಧಿಸಿದೆ. ಸೋಮವಾರದ ಆಟದ ಅಂತ್ಯಕ್ಕೆ ದಕ್ಷಿಣ ವಲಯ 94 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ ಗಳಿಸಿತ್ತು. ಉತ್ತರ ವಲಯ ಮೊದಲ ದಿನವೇ 195 ರನ್‌ಗಳಿಗೆ ಆಲೌಟ್ ಆಗಿತ್ತು.

40 ರನ್‌ಗೆ 2 ವಿಕೆಟ್‌ನಿಂದ ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ವಲಯಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಗುರ್ನೂರ್‌ ಬ್ರಾರ್ ಮೊದಲ ಸೆಷನ್‌ನಲ್ಲೇ ಮೂರು ವಿಕೆಟ್ ಕಬಳಿಸಿ, ದಕ್ಷಿಣ ವಲಯ ತಂಡವನ್ನು ಒಂದು ಹಂತದಲ್ಲಿ 80 ರನ್‌ಗೆ 5 ವಿಕೆಟ್‌ಗಳು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದರು.

34 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಎನ್ ಜಗದೀಸನ್ 36 ರನ್ ಗಳಿಸಿದ್ದಾಗ ಬ್ರಾರ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. 35 ಎಸೆತಗಳಲ್ಲಿ 27 ರನ್ ಗಳಿಸಿದ್ದ ಆರ್ ಸ್ಮರಣ್ ಅವರ ಆಕ್ರಮಣಕಾರಿ ಆರಂಭಕ್ಕೂ ಬ್ರಾರ್ ತೆರೆ ಎಳೆದರು. ನಂತರ ಕೊಡಿಮೆಲ ಹಿಮತೇಜ ಅವರನ್ನು ಶೂನ್ಯಕ್ಕೆ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿ ಔಟ್ ಮಾಡುವ ಮೂಲಕ ಬ್ರಾರ್ ತಮ್ಮ ಮೂರನೇ ವಿಕೆಟ್ ಪಡೆದರು.

92 ರನ್‌ಗೆ ವಿಕೆಟ್‌ ಒಪ್ಪಿಸಿದರೂ 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ದಕ್ಷಿಣ ವಲಯಕ್ಕೆ ತಿಲಕ್‌-ಗೋಪಾಲ್‌ ಜೊತೆಯಾಟದ ನೆರವು

ಈ ಹಂತದಲ್ಲಿ ತಿಲಕ್ ವರ್ಮಾ ಜೊತೆಗೂಡಿದ ಶ್ರೇಯಸ್ ಗೋಪಾಲ್ ಪಂದ್ಯಕ್ಕೆ ಹೊಸ ತಿರುವು ನೀಡಿದರು. ಇಬ್ಬರೂ ಆರನೇ ವಿಕೆಟ್‌ಗೆ 175 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮ ದಕ್ಷಿಣ ವಲಯ ತಂಡವನ್ನು ಮೇಲೆತ್ತಿದರು. ಆ ಮೂಲಕ ಎದುರಾಳಿ ಉತ್ತರ ವಲಯದ ಯೋಜನೆಯನ್ನು ಈ ಜೋಡಿ ಸಂಪೂರ್ಣವಾಗಿ ತಲೆ ಕೆಳಗಾಗುವಂತೆ ಮಾಡಿತು.

ತಿಲಕ್‌ ವರ್ಮಾ ಭರ್ಜರಿ ಶತಕ

ತಾಳ್ಮೆಯ ಆಟವನ್ನು ಆಡಿದ ತಿಲಕ್ ವರ್ಮಾ ತಮ್ಮ ಮೊದಲ ಬೌಂಡರಿಯನ್ನು ತಮ್ಮ 154ನೇ ಎಸೆತದಲ್ಲಿ ಬಾರಿಸಿದರು. ನಂತರ ನಿಧಾನವಾಗಿ ಅರ್ಧಶತಕ ಪೂರೈಸಿದ ಅವರು, ಅದೇ ತಾಳ್ಮೆಯ ಆಟವನ್ನು ಮುಂದುವರಿಸಿದರು. ದಿನದಾಟದ ಅಂತ್ಯಕ್ಕೆ 225 ಎಸೆತಗಳನ್ನು ಎದುರಿಸಿರುವ ತಿಲಕ್ 7 ಬೌಂಡರಿಗಳೊಂದಿಗೆ 106 ರನ್‌ಗಳಿಸಿ ಅಜೇಯರಾಗಿದ್ದಾರೆ.



ಮತ್ತೊಂದೆಡೆ ಕನ್ನಡಿಗ ಶ್ರೇಯಸ್‌ ಗೋಪಾಲ್ ಆಕ್ರಮಣಕಾರಿ ಆಟದ ಮೂಲಕ ನಿಯಮಿತವಾಗಿ ಬೌಂಡರಿಗಳನ್ನು ಗಳಿಸಿದರು. 169 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 87 ರನ್ ಗಳಿಸಿದ ಅವರು, ಕೊನೆಯ ಸೆಷನ್‌ನಲ್ಲಿ ಅರ್ಷದೀಪ್ ಸಿಂಗ್ ಅವರ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಅಬ್ದುಲ್ ಸಮದ್‌ಗೆ ಕ್ಯಾಚ್ ನೀಡಿ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

ಗೋಪಾಲ್ ಔಟಾದ ಬಳಿಕ ಉತ್ತರ ವಲಯ ಹೆಚ್ಚು ಸಮಯ ತೆಗೆದುಕೊಳ್ಳದೆ ಮತ್ತಷ್ಟು ವಿಕೆಟ್‌ಗಳನ್ನು ಕಬಳಿಸಿತು. ಅನ್ಶುಲ್ ಕಾಂಬೋಜ್, ತನೇಯ್ ತ್ಯಾಗರಾಜನ್ ಅವರನ್ನು 6 ರನ್‌ಗೆ ಔಟ್ ಮಾಡಿದರೆ, ಅರ್ಷದೀಪ್ ಸಿಂಗ್ ವಿದ್ವತ್ ಕಾವೇರಪ್ಪ ಅವರೊಂದಿಗೆ ತಮ್ಮ ಮೂರನೇ ವಿಕೆಟ್ ಪಡೆದರು.

ENG vs PAK: ಲಾರ್ಡ್ಸ್‌ ಟೆಸ್ಟ್‌ನಲ್ಲಿಯೂ ಪಾಕ್‌ಗೆ ಮುಖಭಂಗ, ಟೆಸ್ಟ್‌ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್‌!

ಆದರೆ ಮತ್ತೊಂದು ಸುತ್ತಿನ ವಿಕೆಟ್ ಪತನಕ್ಕೂ ತಿಲಕ್ ವರ್ಮಾ ವಿಚಲಿತರಾಗಲಿಲ್ಲ. ಕಾವೂರಿ ಸಾಯಿತೇಜ ಅವರೊಂದಿಗೆ ದಿನದ ಉಳಿದ ಆಟವನ್ನು ಎಚ್ಚರಿಕೆಯಿಂದ ಆಡಿದ ತಿಲಕ್, ದಕ್ಷಿಣ ವಲಯದ ಮೊದಲ ಇನಿಂಗ್ಸ್ ಮುನ್ನಡೆಯನ್ನು 90 ರನ್‌ಗಳಿಗೆ ತಲುಪಿಸಿದರು.

ಸಂಕ್ಷಿಪ್ತ ಸ್ಕೋರ್

ಉತ್ತರ ವಲಯ – 195 ಆಲೌಟ್

ದಕ್ಷಿಣ ವಲಯ – 285/9 (94 ಓವರ್‌)

ತಿಲಕ್ ವರ್ಮಾ 106*, ಶ್ರೇಯಸ್ ಗೋಪಾಲ್ 87

ಅರ್ಷದೀಪ್ ಸಿಂಗ್ 2/59, ಅನ್ಶುಲ್ ಕಾಂಬೋಜ್ 2/53, ಗುರ್‌ನೂರ್ ಬ್ರಾರ್ 4/70