ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವೈಟ್‌ಬಾಲ್‌ ಮಾತ್ರವಲ್ಲ, ರೆಡ್‌ ಬಾಲ್‌ನಲ್ಲೂ ಆಡುವ ಸಾಮರ್ಥ್ಯವಿದೆʼ: ವೈಭವ್‌ ಸೂರ್ಯವಂಶಿ ಬಗ್ಗೆ ಮ್ಯಾಥ್ಯೂ ಹೇಡನ್‌ ದೊಡ್ಡ ಭವಿಷ್ಯ!

ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್‌ ದೊಡ್ಡ ಭವಿಷ್ಯವನ್ನು ನುಡಿದಿದ್ದಾರೆ. ವೈಟ್‌ಬಾಲ್‌ ಕ್ರಿಕೆಟ್‌ ಮಾತ್ರವಲ್ಲದೆ, ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿಯೂ ವೈಭವ್‌ ಸೂರ್ಯವಂಶಿ ಆಡುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಮ್ಯಾಥ್ಯೂ ಹೇಡನ್‌ ದೊಡ್ಡ ಭವಿಷ್ಯ.

ನವದೆಹಲಿ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಸಾಮರ್ಥ್ಯದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ (Matthew Hayden) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 15ರ ವಯಸ್ಸಿನ ವೈಭವ್ ಸೀಮಿತ ಓವರ್‌ಗಳ ಕ್ರಿಕೆಟ್ ಮಾತ್ರವಲ್ಲದೆ, ದೀರ್ಘ ಮಾದರಿಯ ಕ್ರಿಕೆಟ್‌ನಲ್ಲೂ ಯಶಸ್ಸು ಸಾಧಿಸಲು ಅಗತ್ಯವಿರುವ ಎಲ್ಲ ಗುಣಗಳನ್ನು ಹೊಂದಿದ್ದಾರೆ ಎಂದು ಹೇಡನ್ ಭವಿಷ್ಯ ನುಡಿದಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಹೇಡನ್, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಂತಹ ದೊಡ್ಡ ವೇದಿಕೆಯಲ್ಲಿ ಹೆಚ್ಚಿನ ಒತ್ತಡದ ಸಂದರ್ಭಗಳಲ್ಲೂ ಪ್ರದರ್ಶನ ನೀಡಿದ ವೈಭವ್ ಅವರ ಧೈರ್ಯ, ಮಾನಸಿಕ ದೃಢತೆ ಮತ್ತು ಒತ್ತಡ ನಿಭಾಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ವಿಶ್ವಮಟ್ಟದ ಆಟಗಾರನಾಗಲು ಬೇಕಾದ ಹಲವು ಪ್ರಮುಖ ಗುಣಗಳು ಅವರಲ್ಲಿವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಮೂರು ಪಂದ್ಯಗಳಲ್ಲಿ 151 ರನ್ ಗಳಿಸಿದ್ದರು, ಆ ಮೂಲಕ ಭಾರತ ತಂಡ 3-0 ಅಂತರದಲ್ಲಿ ಸರಣಿ ಗೆಲುವಿಗೆ ನೆರವು ನೀಡಿ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಪಡೆದಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಇತ್ತೀಚಿನ ವೈಫಲ್ಯಕ್ಕೆ ಕಾರಣ ತಿಳಿಸಿದ ಕಪಿಲ್‌ ದೇವ್‌!

“ಕೆಲವರು ವೈಭವ್ ಸೂರ್ಯವಂಶಿ ಕೇವಲ ಚುಟುಕು ಕ್ರಿಕೆಟ್‌ ಆಟಗಾರನಾಗಬಹುದು ಎಂದು ಹೇಳುತ್ತಾರೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ. ದೀರ್ಘ ಮಾದರಿಯ ಕ್ರಿಕೆಟ್‌ನಲ್ಲೂ ಯಶಸ್ಸು ಸಾಧಿಸುವ ಸಾಮರ್ಥ್ಯ ವೈಭವ್‌ಗಿದೆ ಎಂದು ನಾನು ನಂಬುತ್ತೇನೆ. ಅದರಲ್ಲಿ ಫಿಟ್‌ನೆಸ್ ಕೂಡ ಒಂದು ಪ್ರಮುಖ ಅಂಶ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ದೃಢತೆ ಅಗತ್ಯ,” ಎಂದು ಹೇಡನ್ ಹೇಳಿದ್ದಾರೆ.

“ಕೇವಲ 15ರ ವಯಸ್ಸಿನಲ್ಲಿ ಐಪಿಎಲ್‌ನಂತಹ ದೊಡ್ಡ, ಅತ್ಯಂತ ಒತ್ತಡದ ಟೂರ್ನಿಯಲ್ಲಿ ಆಡಲು ವೈಭವ್ ತೋರಿದ ಧೈರ್ಯ ಮತ್ತು ಬದ್ಧತೆ ನನಗೆ ತುಂಬಾ ಇಷ್ಟ. ಅವರು ಕೇವಲ ಭಾಗವಹಿಸಲಿಲ್ಲ, ಬದಲಾಗಿ ಅಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ವಿಶ್ವಮಟ್ಟದ ಆಟಗಾರನಾಗಲು ಬೇಕಾದ ಹಲವು ಪ್ರಮುಖ ಗುಣಗಳು ಅವರಲ್ಲಿವೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ಭಾರತ ತಂಡದ ಗಾಯಾಳುಗಳ ಸಮಸ್ಯೆಗೆ ಗೌತಮ್‌ ಗಂಭೀರ್‌ ಕಾರಣ ಎಂದ ಎಸ್‌ ಬದ್ರಿನಾಥ್!

ಸತತ ಪ್ರದರ್ಶನ ನೀಡುವುದು ಮುಖ್ಯ: ಹೇಡನ್

ಐಪಿಎಲ್‌ನಲ್ಲಿನ ಅದ್ಭುತ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ವೇಗವಾಗಿ ಸ್ಟಾರ್ ಆಟಗಾರನಾಗಿ ಬೆಳೆದಿರುವುದನ್ನು ಹೇಡನ್ ಮೆಚ್ಚಿಕೊಂಡಿದ್ದಾರೆ. ಆದರೆ ಉನ್ನತ ಮಟ್ಟದಲ್ಲಿ ದೀರ್ಘಕಾಲ ಉಳಿಯಲು ಸತತವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಅವರು ಹೇಳಿದ್ದಾರೆ.

“ವೈಭವ್ ಅವರಲ್ಲಿ ಅಪಾರ ಪ್ರತಿಭೆಯಿದೆ. ಅವರ ಬೆಳವಣಿಗೆಯನ್ನು ನೋಡಲು ನಾವು ಎಲ್ಲರೂ—ಬ್ರಾಡ್‌ಕಾಸ್ಟರ್‌ಗಳಾಗಿರಲಿ ಅಥವಾ ಕೋಚ್‌ಗಳಾಗಿರಲಿ—ಬಹಳ ಉತ್ಸುಕರಾಗಿದ್ದೇವೆ. ಆದರೆ ಅತ್ಯುನ್ನತ ಮಟ್ಟದಲ್ಲಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ ಎಂಬುದನ್ನು ಅವರು ಈಗಾಗಲೇ ಅರಿತುಕೊಂಡಿದ್ದಾರೆ. ಅವರು ಅದನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಹೇಡನ್ ತಿಳಿಸಿದ್ದಾರೆ.

“ಅವರು ಅದ್ಭುತ ಯುವ ಆಟಗಾರರಾಗಿದ್ದು, ಅಪಾರ ಸಾಮರ್ಥ್ಯ ಹೊಂದಿದ್ದಾರೆ. ಅಂತಿಮವಾಗಿ ತಮ್ಮ ವೃತ್ತಿಜೀವನವನ್ನು ಯಾವ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬುದು ಅವರ ಕೈಯಲ್ಲಿದೆ,” ಎಂದು ಅವರು ಹೇಳಿದ್ದಾರೆ.

ICC Test Rankings: ಎರಡು ವರ್ಷಗಳ ಬಳಿಕ ಟಾಪ್‌ 10ರ ಒಳಗೆ ಪ್ರವೇಶಿಸಿದ ಬಾಬರ್‌ ಆಝಮ್‌!

ವೈಭವ್ ಅವರ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಹಿಂದೆ 2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ನೀಡಿದ ಅದ್ಭುತ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಟೂರ್ನಿಯಲ್ಲಿ ಅವರು 776 ರನ್‌ಗಳನ್ನು 237.30ರ ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇದಕ್ಕೂ ಮುನ್ನ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಪುರುಷರ ಅಂಡರ್-19 ವಿಶ್ವಕಪ್‌ ಟೂರ್ನಿಯಲ್ಲಿಯೂ ವೈಭವ್ ಭರ್ಜರಿ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ 439 ರನ್ ಗಳಿಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.