ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಏಕೈಕ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್‌ ಗಳಿಸಿದ ನಾಲ್ವರು ಬ್ಯಾಟರ್ಸ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ಎಲ್ಲಾ ತಂಡಗಳು ಕೂಡ ಕಠಿಣ ಅಭ್ಯಾಸ ನಡೆಸುತ್ತಿವೆ. ಅಂದ ಹಾಗೆ ಏಕೈಕ ಐಪಿಎಲ್ ಆವೃತ್ತಿಯಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ವರು ಬ್ಯಾಟ್ಸ್‌ಮನ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಏಕೈಕ ಐಪಿಎಲ್‌ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್‌ ಗಳಿಸಿದವರು.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 19ನೇ ಆವೃತ್ತಿ ಮಾರ್ಚ್ 28 ರಂದು ಆರಂಭವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs RR) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿ ಆರಂಭವಾಗುತ್ತಿದ್ದಂತೆ ಈ ಬಾರಿ ಯಾರು ಅತಿ ಹೆಚ್ಚು ರನ್ ಗಳಿಸುತ್ತಾರೆ ಮತ್ತು ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.‌

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಬಗ್ಗೆ ಹೇಳುವುದಾದರೆ, ಒಂದೇ ಸೀಸನ್‌ನಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾದವರು ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಮಾತ್ರ. ಈ ನಾಲ್ವರು ಪೈಕಿ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಕ್ರಿಸ್‌ ಗೇಲ್‌ ಹಾಗೂ ರೋಹಿತ್‌ ಶರ್ಮಾ ಕೂಡ ಈ ದಾಖಲೆ ಪಟ್ಟಿಯಲ್ಲಿ ಇಲ್ಲದೇ ಇರುವುದು ಅಚ್ಚರಿ ಉಂಟು ಮಾಡಿದೆ.‌

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌, ʻಹಾಲ್‌ ಆಫ್‌ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್‌, ಸುರೇಶ್‌ ರೈನಾ!

ಏಕೈಕ ಐಪಿಎಲ್‌ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್‌ ಗಳಿಸಿದ ಬ್ಯಾಟರ್ಸ್

1.ವಿರಾಟ್‌ ಕೊಹ್ಲಿ

ವಿರಾಟ್ ಕೊಹ್ಲಿ ಏಕೈಕ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಲೀಗ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 900 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಕೂಡ ಇವರೇ. 2016ರ ಐಪಿಎಲ್‌ ಟೂರ್ನಿಯಲ್ಲಿ ಅಸಾಧಾರಣ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ ವಿರಾಟ್, 16 ಪಂದ್ಯಗಳಲ್ಲಿ 152ರ ಸ್ಟ್ರೈಕ್ ರೇಟ್‌ನಲ್ಲಿ 973 ರನ್ ಗಳಿಸಿದ್ದರು. ಆ ಋತುವಿನಲ್ಲಿ ಅವರು 4 ಶತಕಗಳು ಮತ್ತು 7 ಅರ್ಧಶತಕಗಳನ್ನು ದಾಖಲಿಸಿದ್ದರು.

2.ಶುಭಮನ್‌ ಗಿಲ್‌

ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಕೂಡ ಏಕೈಕ ಐಪಿಎಲ್ ಆವೃತ್ತಿಯಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು 157ರ ಸ್ಟ್ರೈಕ್ ರೇಟ್‌ನಲ್ಲಿ 890 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಗಿಲ್ 3 ಶತಕಗಳು ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದರು.

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ನ ಕೀ ಆಟಗಾರನನ್ನು ಆರಿಸಿದ ಇರ್ಫಾನ್‌ ಪಠಾಣ್‌!

3.ಜೋಸ್‌ ಬಟ್ಲರ್‌

2022ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅಂದು ಆಡಿದ್ದ 17 ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು 149ರ ಸ್ಟ್ರೈಕ್ ರೇಟ್‌ನಲ್ಲಿ 863 ರನ್ ಸಿಡಿಸಿದ್ದರು. ಈ ಋತುವಿನಲ್ಲಿ ಬಟ್ಲರ್ 4 ಶತಕಗಳು ಮತ್ತು ಅಷ್ಟೇ ಸಂಖ್ಯೆಯ ಅರ್ಧಶತಕಗಳನ್ನು ಬಾರಿಸಿದ್ದರು. ಬಟ್ಲರ್ ಅವರ ಅದ್ಭುತ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿ ಫೈನಲ್ ತಲುಪಿತು. ಆದರೆ, ಫೈನಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೋತು ರನ್ನರ್‌ ಅಪ್‌ ಆಗಿತ್ತು.

IPL 2026: ಕೆಕೆಆರ್‌ಗೆ ಮತ್ತೊಂದು ಶಾಕ್‌, ಆಕಾಶ್‌ ದೀಪ್‌ ಟೂರ್ನಿಯಿಂದ ಔಟ್‌?

4.ಡೇವಿಡ್‌ ವಾರ್ನರ್

ಐಪಿಎಲ್‌ ಟೂರ್ನಿಯಲ್ಲಿ ಹಲವು ಪ್ರಮುಖ ತಂಡಗಳ ಪರ ಆಡಿರುವ ಡೇವಿಡ್ ವಾರ್ನರ್, ಏಕೈಕ ಐಪಿಎಲ್ ಋತುವಿನಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದ ಆಯ್ದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 2016ರ ಐಪಿಎಲ್‌ ಟೂರ್ನಿಯಲ್ಲಿ ಅಸಾಧಾರಣ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ ವಾರ್ನರ್, 17 ಪಂದ್ಯಗಳಲ್ಲಿ 848 ರನ್ ಗಳಿಸಿದ್ದರು, 151 ಸ್ಟ್ರೈಕ್ ರೇಟ್‌ನಲ್ಲಿ ಆಡಿ ಗಮನ ಸೆಳೆದಿದ್ದರು. ಡೇವಿಡ್ ವಾರ್ನರ್ ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಈ ಲೀಗ್‌ನಲ್ಲಿ ಆಡಿರುವ 184 ಪಂದ್ಯಗಳಲ್ಲಿ ಒಟ್ಟು 6,565 ರನ್ ಗಳಿಸಿದ್ದಾರೆ.