ʻಮೊಹಮ್ಮದ್ ಸಿರಾಜ್ ಅವರನ್ನು ಏಕೈಕ ಸ್ವರೂಪಕ್ಕೆ ಸೀಮಿತ ಮಾಡಿದ್ದೇವೆʼ: ಆಕಾಶ್ ಚೋಪ್ರಾ!
ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಅವರನ್ನು ಅವರ ವೃತ್ತಿ ಜೀವನದ ಬಹುಬೇಗ ಕೇವಲ ಒಂದೇ ಒಂದು ಸ್ವರೂಪಕ್ಕೆ ಸೀಮಿತಗೊಳಿಸಲಾಗಿದೆ ಎಂದು ಟೆಸ್ಟ್ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಸಿರಾಜ್ ಅವರನ್ನು ಏಕೈಕ ಸ್ವರೂಪಕ್ಕೆ ಸೀಮಿತಗೊಳಿಸಲಾಗಿದೆ ಎಂದ ಚೋಪ್ರಾ. -
ನವದೆಹಲಿ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಸಿಕ್ಕ ಅವಕಾಶಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಅವರನ್ನು ಏಕೈಕ ಸ್ವರೂಪಕ್ಕೆ ಸೀಮಿತಗೊಳಿಸಲಾಗಿದೆ ಎಂದು ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ (Aaakash Chopra) ಬೇಸರ ವ್ಯಕ್ತಪಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಪರ ಐಪಿಎಲ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ತೋರಿದ್ದರ ಫಲವಾಗಿ ಅವರನ್ನು 2026ರ ಐಸಿಸಿ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು ಹಾಗೂ ಅವರು ಯೋಗ್ಯ ಪ್ರದರ್ಶನವನ್ನು ತೋರಿದ್ದರು.
ತಮ್ಮ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ,"ಮೊಹಮ್ಮದ್ ಸಿರಾಜ್ ಅವರನ್ನು ನಾವು ಬಹುಬೇಗ ಏಕೈಕ ಸ್ವರೂಪದ ಅಟಗಾರನನ್ನಾಗಿ ಮಾಡಿದ್ದೇವೆ. ಅವರು ಹಳೆ ಚೆಂಡಿನಲ್ಲಿ ಚೆನ್ನಾಗಿ ಬೌಲ್ ಮಾಡುವುದಿಲ್ಲ ಹಾಗೂ ಅವರನ್ನು ಕೈ ಬಿಡಬೇಕೆಂದು ನಾವು ಪರಿಪಕ್ವತೆ ಇಲ್ಲದೆ ಈಗಾಗಲೇ ನಿರ್ಧಾರ ಮಾಡಿದ್ದೇವೆ. ದೀರ್ಘಾವಧಿ ಅವರನ್ನು ಕಡೆಗಣಿಸಲಾಗಿತ್ತು, ನಂತರ ಅವರ ಹಣೆ ಬರಹ ಬದಲಾಯಿತು ಹಾಗೂ ಟಿ20 ವಿಶ್ವಕಪ್ ತಂಡಕ್ಕೆ ಆರಿಸಲಾಯಿತು. ಅಲ್ಲಿ ಅವರು ಆಡಿದ ಮೊದಲನೇ ಪಂದ್ಯದಲ್ಲಿಯೇ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಟಿ20ಐ ವೃತ್ತಿ ಜೀವನಕ್ಕೆ ಮರಳಿದ್ದರು," ಎಂದು ಹೇಳಿದ್ದಾರೆ.
ಶ್ರೀಲಂಕಾ ಆಟಗಾರನನ್ನು ತಳ್ಳಿದ ವೈಭವ್ ಸೂರ್ಯವಂಶಿ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳುತ್ತಾ?
ಏಕದಿನ ತಂಡದಿಂದ ಕೈ ಬಿಟ್ಟ ಚೋಪ್ರಾ ಹೇಳಿದ್ದಿದು
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟ ನಿರ್ಧಾರವನ್ನು ಕಠಿಣ ಹಾಗೂ ಅನ್ಯಾಯಕರ ಎಂದು ಮಾಜಿ ಆರಂಭಿಕ ಅಭಿಪ್ರಾಯಪಟ್ಟಿದ್ದಾರೆ. ಸಿರಾಜ್ ಅವರ ಟಿ20 ತಂಡದ ಸ್ಥಾನ ಕುರಿತು ಚರ್ಚೆ ನಡೆಯಬಹುದಾದರೂ, ಏಕದಿನ ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಇರಬಾರದು ಎಂದು ಚೋಪ್ರಾ ಹೇಳಿದ್ದಾರೆ.
“ಒಂದು ಹಂತದಲ್ಲಿ ಈ ನಿರ್ಧಾರ ಸರಿಯಲ್ಲ ಎಂದು ನನಗೆ ನಿಜವಾಗಿಯೂ ಅನಿಸಿತ್ತು. ಎಲ್ಲಾ ಟೆಸ್ಟ್ ಪಂದ್ಯಗಳಲ್ಲೂ ಅವರನ್ನು ಆಡಿಸಲಾಯಿತು. ಎಲ್ಲ ಆಟಗಾರರಿಗೂ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಅಗತ್ಯವಿದ್ದರೂ, ಅವರ ಬಗ್ಗೆ ಅದನ್ನು ಪರಿಗಣಿಸಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಅವರು ಇನ್ನು ಮುಂದೆ ಏಕದಿನ ತಂಡದ ಭಾಗವಲ್ಲ ಎಂದು ಹೇಳಲಾಯಿತು. ನಂತರ ಟಿ20 ತಂಡದಿಂದಲೂ ಅವರನ್ನು ಕೈಬಿಡಲಾಯಿತು. ಅದು ಸರಿಯಾದ ನಿರ್ಧಾರವಾಗಿರಲಿಲ್ಲ,” ಎಂದು ಕ್ರಿಕೆಟ್ ಕಾಮೆಂಟೇಟರ್ ಬೇಸರ ವ್ಯಕ್ತಪಡಿಸಿದ್ದಾರೆ.
ʻನಿಮಗೆ ದಕ್ಷಿಣ ಆಫ್ರಿಕಕ್ಕೆ ವೀಸಾ ಸಿಕ್ಕಿದೆʼ: ಇಶಾನ್ ಕಿಶನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಸುನೀಲ್ ಗವಾಸ್ಕರ್!
ಮುಂದುವರಿದು ಮಾತನಾಡಿದ ಅವರು, “ಅವರು ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಇರಲಿಲ್ಲ. ಅದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅವರ ಹೆಸರು ತಂಡದಲ್ಲಿರಬೇಕಿತ್ತು. ಟಿ20 ಮಾದರಿಯಲ್ಲಿ ಅವರ ಸ್ಥಾನ ಕುರಿತು ಚರ್ಚೆ ಮಾಡಬಹುದು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅವರ ಸ್ಥಾನ ಪ್ರಶ್ನಾತೀತವಾಗಿರಬೇಕು,” ಎಂದು ಹೇಳಿದ್ದಾರೆ.
ಇದೇ ವೇಳೆ, ಮೊಹಮ್ಮದ್ ಸಿರಾಜ್ ಅವರಿಗೆ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಬದಲಿಗೆ ಪ್ರಸಿಧ್ ಕೃಷ್ಣಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯ ವೇಳೆ ಸಿರಾಜ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.