WI vs ZIM: ಶಿಮ್ರಾನ್ ಹೆಟ್ಮಾಯೆರ್ ಸ್ಪೋಟಕ ಬ್ಯಾಟಿಂಗ್, ಜಿಂಬಾಬ್ವೆಗೆ ಮಣ್ಣು ಮುಕ್ಕಿಸಿದ ವೆಸ್ಟ್ ಇಂಡೀಸ್!
WI vs ZIM Match Highlights: ಶಿಮ್ರಾನ್ ಹೆಟ್ಮಾಯೆರ್ ಸ್ಪೋಟಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಗೆಲುವು ಪಡೆಯಿತು. 34 ಎಸೆತಗಳಲ್ಲಿ 85 ರನ್ ಸಿಡಿಸಿದ ಹೆಟ್ಮಾಯೆರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಜಿಂಬಾಬ್ವೆ ಎದುರು ವಿಂಡೀಸ್‌ಗೆ 107 ರನ್ ಭರ್ಜರಿ ಜಯ. -
ಮುಂಬೈ: ಶಿಮ್ರಾನ್ ಹೆಟ್ಮಾಯೆರ್ (Shimron Hetmyer) ಸ್ಪೋಟಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ (WI vs ZIM) ಜಿಂಬಾಬ್ವೆ ಎದುರು 107 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಕೆರಿಬಿಯನ್ನರು ಅಂತಿಮ ಎಂಟರ ಹಂತದಲ್ಲಿ ಶುಭಾರಂಭ ಕಂಡಿದ್ದಾರೆ. ಇನ್ನು ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ದಂತದ ದೈತ್ಯ ತಂಡವನ್ನು ನಡುಗಿಸಿದ್ದ ಸಿಕಂದರ್ ರಾಜಾ ನಾಯಕತ್ವದ ಜಿಂಬಾಬ್ವೆ ಈ ಸೋಲಿನ ಮೂಲಕ ಕೊಂಚ ವಿಶ್ವಾಸವನ್ನು ಕಳೆದುಕೊಂಡಿದೆ. ಇನ್ನು ಕೇವಲ 34 ಎಸೆತಗಳಲ್ಲಿ 85 ರನ್ ಸಿಡಿಸಿ ವಿಂಡೀಸ್ ಗೆಲುವಿಗೆ ನೆರವು ನೀಡಿದ ಶಿಮ್ರಾನ್ ಹೆಟ್ಮಾಯೆರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 255 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, ಸ್ಕೋರ್ ಬೋರ್ಡ್ ಒತ್ತಡಕ್ಕೆ ಒಳಗಾಯಿತು. ಅಲ್ಲದೆ ಗುಡಕೇಶ್ ಮೋತಿ ಅವರ ಸ್ಪಿನ್ ಮೋಡಿಗೆ ನಲುಗಿದ ಜಿಂಬಾಬ್ವೆ, 17.4 ಓವರ್‌ಗಳಿಗೆ 147 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಈ ಸೋಲಿನ ಮೂಲಕ ಜಿಂಬಾಬ್ವೆ ತಂಡದ ಸೆಮಿಫೈನಲ್ ಹಾದಿ ಅತ್ಯಂತ ಕಠಿಣವಾಗಿದೆ. ಏಕೆಂದರೆ ಈಗಾಗಲೇ ಮೊದಲ ಸೋಲು ಕಂಡಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಒಳಗಾಗಿದೆ.
WI vs ZIM: 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಶಿಮ್ರಾನ್ ಹೆಟ್ಮಾಯೆರ್!
ಗುಡಕೇಶ್ ಮೋತಿ, ಅಕಿಲ್ ಹುಸೇನ್ ಸ್ಪಿನ್ ಮೋಡಿ
ಜಿಂಬಾಬ್ವೆ ತಂಡದ ಚೇಸಿಂಗ್ ಇನಿಂಗ್ಸ್‌ನಲ್ಲಿ ವಿಂಡೀಸ್ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್ ಮಾಡಿದರು. ವಿಶೇಷವಾಗಿ ಸ್ಪಿನ್ನರ್‌ಗಳಾದ ಗುಡಕೇಶ್ ಮೋತಿ ಹಾಗೂ ಅಕೀಲ್ ಹುಸೇನ್ ಮೇಲುಗೈ ಸಾಧಿಸಿದರು. ಮೋತಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಹುಸೇನ್ ಮೂರು ವಿಕೆಟ್‌ಗಳನ್ನು ಕಿತ್ತರು. ಜಿಂಬಾಬ್ವೆ ಪರ ಬ್ರಾಡ್ ಎವಾನ್ಸ್ ಕೊನೆಯವರೆಗೂ ಹೋರಾಟ ನಡೆಸಿ 21 ಎಸೆತಗಳಲ್ಲಿ 43 ರನ್ ಸಿಡಿಸಿ ಕೊನೆಯಲ್ಲಿ ಔಟ್ ಆಗಿದ್ದರು ಹಾಗೂ ಇವರು ಜಿಂಬಾಬ್ವೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಡಿಯಾನ್ ಮೇಯರ್‌ಸ್ 28 ರನ್ ಹಾಗೂ ನಾಯಕ ಸಿಕಂದರ್ ರಾಜಾ 27 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು.
West Indies notch a mammoth win to get up and running in the #T20WorldCup Super 8s 💪
— ICC (@ICC) February 23, 2026
📝: https://t.co/7Anm2l6Cqi pic.twitter.com/eITG3P6gGe
254 ರನ್ ಕಲೆ ಹಾಕಿದ ವಿಂಡೀಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ವೆಸ್ಟ್ ಇಂಡೀಸ್ ತಂಡ, ಶಿಮ್ರಾನ್ ಹೆಟ್ಮಾಯೆರ್ (85 ರನ್) ಹಾಗೂ ರೊವ್ಮನ್ ಪೊವೆಲ್ (59 ರನ್) ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಜಿಂಬಾಬ್ವೆಗೆ 255 ರನ್‌ಗಳ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಗಿತ್ತು.ಕೊನೆಯಲ್ಲಿ ಉತ್ತಮ ಬ್ಯಾಟ್ ಮಾಡಿದ್ದ ಶೆರ್ಫೆನ್ ಋದರ್‌ಫೋರ್ಡ್ 13 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದ್ದರೆ, ರೊಮ್ಯಾರಿಯೊ ಶೆಫರ್ಡ್ 10 ಎಸೆತಗಳಲ್ಲಿ 21 ರನ್ ಚಚ್ಚಿದ್ದರು.
A sparkling knock of 85 in West Indies' big win over Zimbabwe earns Shimron Hetmyer the @aramco POTM🏅
— ICC (@ICC) February 23, 2026
📝: https://t.co/7Anm2l6Cqi pic.twitter.com/tR7nni39zs
ಶಿಮ್ರಾನ್ ಹೆಟ್ಮಾಯೆರ್ ಅಬ್ಬರದ ಬ್ಯಾಟಿಂಗ್
ವೆಸ್ಟ್ ಇಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಶೇಯ್ ಹೋಪ್ ಹಾಗೂ ಬ್ರೆಂಡನ್ ಕಿಂಗ್ ಬಹುಬೇಗ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶಿಮ್ರಾನ್ ಹೆಟ್ಮಾಯೆರ್ ಆರಂಭದಲ್ಲಿಯೇ ಒಂದು ಜೀವದಾನ ಪಡೆದಿದ್ದರು. ಇದನ್ನು ಸದುಪಯೋಗಪಡಿಸಿಕೊಂಡ ಅವರು, ಜಿಂಬಾಬ್ವೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು ಆಡಿದ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ ಅಷ್ಟೇ ಬೌಂಡರಿಗಳೊಂದಿಗೆ 85 ರನ್ ಸಿಡಿಸಿದ್ದರು. ಅಲ್ಲದೆ, ರೊವ್ಮನ್ ಪೊವೆಲ್ ಅವರೊಂದಿಗೆ 52 ಬಾಲ್‌ಗಳಲ್ಲಿ 122 ರನ್‌ಗಳ ಜೊತೆಯಾಟವನ್ನು ಆಡಿದರು. ಪೊವೆಲ್ ಕೂಡ ಅಬ್ಬರಿಸಿದ 35 ಎಸೆತಗಳಲ್ಲಿ 59 ರನ್‌ಗಳನ್ನು ಚಚ್ಚಿದ್ದರು.